ಹಟ್ಟಿ ಚಿನ್ನದ ಗಣಿ: ಹೊಸ ವೇತನ ಒಪ್ಪಂದ ಜಾರಿಗಾಗಿ ಒತ್ತಾಯಿಸಿ ಟಿಯುಸಿಐ ನೇತೃತ್ವದ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘವು ನ.23ರಂದು ಹಮ್ಮಿಕೊಂಡಿರುವ ಮುಷ್ಕರ ಕಾನೂನು ಬಾಹಿರವಾಗಿದೆ. ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿ ಉತ್ಪಾದನೆಗೆ ಧಕ್ಕೆ ಉಂಟಾದರೆ ಕಂಪನಿ ಆಡಳಿತ ಮಂಡಳಿ ತನ್ನ ಸ್ಥಾಯಿ ಆದೇಶದ ಪ್ರಕಾರ ಕಾರ್ಮಿಕರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲವೆಂದು ಕಂಪನಿ ಮುಖ್ಯ ಆಡಳಿತಾಧಿಕಾರಿ ಡಾ| ಕೆ. ಜಗದೀಶ ನಾಯ್ಕ
ಎಚ್ಚರಿಸಿದ್ದಾರೆ.
ಗುರುವಾರ ಕಂಪನಿ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರ ಮಾರ್ಚಗೆ ಅಂತ್ಯಗೊಂಡ ವೇತನ ಒಪ್ಪಂದ ಜಾರಿಗೆ ಆಡಳಿತ ಮಂಡಳಿ ಉಪ ಸಮಿತಿ ಮೂಲಕ ಹಗಲಿರುಳು ಅವಿರತ ಶ್ರಮದಿಂದ ಕಾರ್ಯೋನ್ಮುಖವಾಗಿದೆ. ನ.9ರಂದು 14 ದಿನದ ನೋಟಿಸ್‌ನ್ನು ಕಾರ್ಮಿಕ ಸಂಘ ನೀಡಿದೆ. ಆದರೆ ಕಂಪನಿ ಕಾರ್ಮಿಕ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅವರ ಹೋರಾಟಕ್ಕೆ
ಅರ್ಥವಿರುತ್ತಿತ್ತು, ಆದರೆ ನಿರಂತರ ಪ್ರಯತ್ನದಲ್ಲಿದ್ದಾಗ್ಯೂ ಕೂಡಾ ಈ ರೀತಿ ಮುಷ್ಕರಕ್ಕೆ ಮುಂದಾಗುವುದು ಸರಿಯಲ್ಲ ಎಂದರು.
ಪಟ್ಟು ಸರಿಯಲ್ಲ: ದ್ವಿಪಕ್ಷೀಯ ಮಾತುಕತೆ ನಡೆದಿದೆ. ನ.27ಕ್ಕೆ ಉಪ ಪ್ರಾದೇಶಿಕ ಕಾರ್ಮಿಕ ಆಯುಕ್ತರು ಕಂಪನಿಗೆ ಆಗಮಿಸುತ್ತಿದ್ದು, ಕಂಪನಿ ಅಧ್ಯಕ್ಷರಾದ ಗಣಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್ ಅವರು ಶಾಸಕರ ಮೂಲಕ ಸಂಧಾನಕ್ಕೆ ಕ್ಷೇತ್ರದ ಶಾಸಕರನ್ನು ಕರೆಸಿ ಮಾತುಕತೆ ನಡೆಸಿದರೂ ಸಹಿತ ಕಾರ್ಮಿಕ ಸಂಘ ಮಾತು ಕೇಳುತ್ತಿಲ್ಲ. ಗಣಿ ಆಡಳಿತ ವರ್ಗವು ಸದಾಕಾಲ ಕಾರ್ಮಿಕರ ಸಮಸ್ಯೆ ಕುರಿತು ಚರ್ಚೆಗೆ ಸಿದ್ಧವಿದೆ ಆದರೆ ಕಾರ್ಮಿಕ ಸಂಘಕ್ಕೆ ಇದು ಬೇಕಿಲ್ಲ.
ಮುಷ್ಕರ ನೋಟಿಸ್ ನೀಡಿದ ಮೇಲೆ ನಾಲ್ಕು ಬಾರಿ ತುಕತೆ ನಡೆಸಿದರೂ ಸಹಿತ ಮುಷ್ಕರ ಹಿಂಪಡೆಯಲು ಒಪ್ಪಿಲ್ಲ. ಲಿಖೀತ ಭರವಸೆಗೆ ಪಟ್ಟು ಹಿಡಿದಿರುವುದು ಸರಿಯಲ್ಲ. ಕಂಪನಿ ನಿಯಮದ ಪ್ರಕಾರ ಉಪ ಸಮಿತಿ ಒಪ್ಪಿದ ನಂತರ ಹಣಕಾಸಿನ ಅನುಮೋದನೆ ಪಡೆಯಬೇಕು, ನಂತರ ಜಾರಿಯಾಗಬೇಕು. ಇದು ಒಂದೆರಡು ದಿನದಲ್ಲಿ ಆಗುವುದಲ್ಲ. ಹೀಗಿರುವಾಗ ಹೇಗೆ ಬರವಣಿಗೆಯಲ್ಲಿ ಕೊಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಕಾರ್ಮಿಕರು ತಾಳ್ಮೆಯಿಂದ ಇರಬೇಕು. ಮುಷ್ಕರದಿಂದ ಕಂಪನಿ ಬೆಳವಣಿಗೆ ಹಾಗೂ ಉತ್ಪಾದಕತೆಗೆ ಮಾರಕವಾಗಲಿದೆ ಎಂದರು.
20ರಷ್ಟು ಹೆಚ್ಚಳ: ಕಂಪನಿ ಈಗ ಅನುಮೋದನೆ ನೀಡಿದರೆ ಎಷ್ಟು ಪ್ರತಿಶತ ದೊರೆಯಲಿದೆ ಎಂಬ ಪತ್ರಕರ್ತರ ಪ್ರಶ್ನೆಗೆ
ಉತ್ತರಿಸಿದ ಪ್ರಧಾನ ವ್ಯವಸ್ಥಾಪಕ (ಗಣಿ) ಪ್ರಕಾಶ ಬಹದ್ದೂರ್ ಒಟ್ಟಾರೆ ವೇತನಕ್ಕೆ ಶೇ.20 ಹೆಚ್ಚಳವಾಗಲಿದೆ. ಉತ್ತಮ ವೇತನ ಒಪ್ಪಂದಕ್ಕೆ ಕಾರ್ಮಿಕ ಸಂಘ ಸಹಕರಿಸಬೇಕೆಂದು ಮನವಿ ಮಾಡಿದರು.
ಪಿಎಸ್‌ಐ ಗಂಗಪ್ಪ ಬುರ್ಲಿ, ಅಧಿಕಾರಿಗಳಾದ ರಮೇಶ, ಸುರೇಶ, ಜಗನಮೋಹನ್, ದಾಮೋದರರಾವ್ ಇದ್ದರು.