ಬೆಳ್ತಂಗಡಿ : ಕಾರ್ಮಿಕರು ಸಂವಿಧಾನಬದ್ಧ ತಮ್ಮ ಹಕ್ಕು ಹಾಗೂ ಸವಲತ್ತುಗಳ ಕುರಿತು ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು. ಇದರಿಂದ ಕಾರ್ಮಿಕ ವರ್ಗದ ಅಭಿವೃದ್ಧಿ ಸಾಧ್ಯ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ, ಪ್ರಥಮದರ್ಜೆ ನ್ಯಾಯಿಕ ದಂಡಾಧಿಕಾರಿ ಸತೀಶ್ ಕೆ.ಜಿ. ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ವಕೀಲರ ಸಂಘ ಬೆಳ್ತಂಗಡಿ, ಕರ್ನಾಟಕ ರಾಜ್ಯ ಕಟ್ಟಡ-ಇತರ ನಿರ್ಮಾಣ ಕಾರ್ಮಿಕರ ಫೇಡರೇಶನ್ (ಸಿಐಟಿಯು) ನೇತೃತ್ವದಲ್ಲಿ ಬೆಳ್ತಂಗಡಿ ಅಂಬೇಡ್ಕರ್ ಭವನ ದಲ್ಲಿ ಮಂಗಳವಾರ ಜರಗಿದ ಕಾನೂನು ಸಾಕ್ಷರತ ರಥ ಕಾನೂನು ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾ| ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಕೆ.ಎಂ. ಆನಂದ ಮಾತನಾಡಿ, ಸಮಾಜ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಅನನ್ಯವಾದದ್ದು. ಇಂತಹ ಕಾರ್ಮಿಕ ವರ್ಗಕ್ಕೆ, ಸರಕಾರಿ ನೌಕರರಿಗೆ ಸಮಾನ ಸವಲತ್ತುಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿ ಮಾತನಾಡಿ, ಕಾರ್ಮಿಕರಿಂದಾಗಿ ದೇಶದಲ್ಲಿ ಮಹತ್ವದ ಬದಲಾವಣೆಯಾಗಿದೆೆ. ಕಾರ್ಮಿಕರ ಪರವಾಗಿ ಕೆಲಸ ಮಾಡುವುದು ಅತ್ಯಂತ ಅಭಿನಂದೀಯ ಎಂದರು.
ಕಾರ್ಮಿಕ ಇಲಾಖೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಗಣಪತಿ ಹೆಗಡೆ ಕಾರ್ಮಿಕ ವರ್ಗ ಕ್ಕಿರುವ ಸವಲತ್ತು ಬಗ್ಗೆ ಮಾಹಿತಿ ನೀಡಿದರು. ವಕೀಲರ ಸಂಘದ ಪ್ರಧಾನ ಕಾರ್ಯ ದರ್ಶಿ ಮನೋಹರ್ ಕುಮಾರ್ ಮಾತ ನಾಡಿ, ಕಾರ್ಮಿಕ ವರ್ಗದ ಹಕ್ಕು ಮತ್ತು ಸವಲತ್ತುಗಳ ಬಗ್ಗೆ ನಿರಂತರವಾಗಿ ಹೋರಾಟದಲ್ಲಿ ನಿರತವಾಗಿರುವ ಸಿಐಟಿಯು ಕಾರ್ಯಚಟುವಟಿಕೆ ಕಾರ್ಮಿಕ ವರ್ಗಕ್ಕೆ ಹೊಸ ಭರವಸೆ ನೀಡಿದೆ ಎಂದರು.
ಸಹಾಯಕ ಸರಕಾರಿ ಅಭಿಯೋಜಕ ಕಿರಣ್ ಕುಮಾರ್, ನ್ಯಾಯವಾದಿ ಜೆ.ಕೆ. ಪೌಲ್, ಉಪಾಧ್ಯಕ್ಷ ನಾರಾಯಣ ಪೂಜಾರಿ ಹೊಸಂಗಡಿ, ಕೋಶಾಧಿಕಾರಿ ಪ್ರಭಾಕರ್ ತೋಟತ್ತಾಡಿ ಉಪಸ್ಥಿತರಿದ್ದರು.
ವಸಂತ ನಡ ಸ್ವಾಗತಿಸಿ, ನ್ಯಾಯವಾದಿ ಶಿವಕುಮಾರ್ ಎಸ್.ಎಂ. ನಿರೂಪಿಸಿದರು. ಶೇಖರ್ ಎಲ್. ವಂದಿಸಿದರು.