Advertisement

ವಿಧಾನಸಭೆಯಲ್ಲಿ ಕಾರ್ಮಿಕ ಸಚಿವರ ಪ್ರತಿಕ್ರಿಯೆಗೆ ನೆಟ್ಟಿಗರ ಆಕ್ಷೇಪ

04:22 PM Feb 04, 2021 | Team Udayavani |

ರಾಮನಗರ: ವಿಧಾನಸಭೆಯಲ್ಲಿ ಕಾರ್ಮಿಕ ಸಚಿವ ಶಿವರಾಂ ಹೆಬ್ಟಾರ್‌ ಕಾರ್ಮಿಕರ ಮುಷ್ಕರದ ಬಗ್ಗೆ ನೀಡಿರುವ ಪ್ರತಿಕ್ರಿಯೆಗೆ ಟೊಯೋಟಾ ಕಾರ್ಮಿಕರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ.

Advertisement

ಸದನದ ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಟೊಯೋಟಾ ಕಾರ್ಮಿಕರ ವಿಷಯ ಪ್ರಸ್ತಾಪಿಸಿದಾಗ ಕಾರ್ಮಿಕ ಸಚಿವ ಶಿವರಾಂ ಹೆಬ್ಟಾರ್‌ ನೀಡಿದ ಉತ್ತರದಿಂದ ಕಾರ್ಮಿಕರು ಅಸಮಾಧಾನಗೊಂಡಿದ್ದು, ನೀವು ಸಮರ್ಥ ಕಾರ್ಮಿಕ ಸಚಿವರೇ? ಎಂದು ಪ್ರಶ್ನಿಸಿದ್ದಾರೆ.

ಪವಿತ್ರ ಜನತಾ ದೇವಾಲಯದಲ್ಲಿ ಟಿಕೆಎಂ ಆಡಳಿತ ಮಂಡಳಿ ಬರೆದುಕೊಟ್ಟ ಸುಳ್ಳು ಮಾಹಿತಿ ಕೊಟ್ಟಿದ್ದು ಎಷ್ಟು ಸರಿ? ಸದನದಲ್ಲಿ ನೀವು ಮಾತನಾಡಿದ ರೀತಿ ನೋಡಿದರೆ ನೀವು ಕಾರ್ಮಿಕ ಸಚಿವರಾ ಅಥವಾ ಆಡಳಿತ ಮಂಡಳಿಯ ವಕ್ತಾರರೇ ಎಂಬ ಅನುಮಾನ ಕಾಡುತ್ತಿದೆ ಎಂದಿದ್ದಾರೆ.

ಕಾರ್ಮಿಕ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಕಳೆದ ಒಂದು ವರ್ಷದಿಂದ ಹಲವು ಬಾರಿ ನಿಮ್ಮನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದರು. ಅವರಿಗೆ ಸುಳ್ಳು ಹೇಳಿದ್ದು ಸರಿಯೇ, ಒಮ್ಮೆ 20 ನಿಮಿಷ ಸಭೆ ನಡೆಸಿ 5 ಸಭೆ ಮಾಡಿದ್ದೇವೆ ಎಂದಿರುವುದು ಸುಳ್ಳಲ್ಲವೇ? ಸಭೆ ನಡೆಸಿರುವುದಕ್ಕೆ ದಾಖಲೆ ನೀಡುವಿರಾ? 1,860 ಜನ ಕೆಲಸಕ್ಕೆ ಹೋಗಿದ್ದಾರೆ ಎಂದು ನಿಮಗೆ ಮಾಹಿತಿ ಕೊಟ್ಟಿದ್ಯಾರು, ಅಮಾನತು ವಿಷಯದಲ್ಲಿ ಕಾರ್ಮಿಕ ಇಲಾಖೆ ಮಧ್ಯೆ ಪ್ರವೇಶಿಸಲು ಸಾಧ್ಯವಿಲ್ಲ ಎನ್ನುವ ನೀವು ಸಮರ್ಥ ಕಾರ್ಮಿಕ ಸಚಿವರೇ, ಆಡಳಿತ ಮಂಡಳಿಯ ಸಮರ್ಥನೆಗೆ ನಿಂತರೆ ಕಾರ್ಮಿಕರ ರಕ್ಷಣೆ ಮಾಡುವವರು ಯಾರು? ಎಂದು ಸಾಮಾಜಿಕ ಜಾಲತಾಣದಲ್ಲಿ ಕಾರ್ಮಿಕರು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next