ರಾಯಚೂರು: ಕೋವಿಡ್ ಲಾಕ್‌ಡೌನ್ ನೆಪವೊಡ್ಡಿ ಕಾರ್ಮಿಕರು ಹಕ್ಕುಗಳನ್ನು ಮೊಟಕುಗೊಳಿಸುತ್ತಿರುವ ಸರ್ಕಾರಗಳ ಧೋರಣೆ ಖಂಡಿಸಿ ಸೆ.17ರಂದು ನಡೆಯುವ ಕ-ಕ ಉತ್ಸವ ದಿನಾಚರಣೆಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ತೋರಿಸಿ ಘೇರಾವ್ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಟಿಯುಸಿಐ ಸಂಘಟನೆ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಚಿವ ಲಕ್ಷ್ಮಣ ಸವದಿಗೆ ನಗರದಅಂಬೇಡ್ಕರ್, ಬಸವೇಶ್ವರ ಹಾಗೂ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಪ್ರತಿಭಟನಾನಿರತಕಾರ್ಮಿಕರು ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುತ್ತಿವೆ. ರೈತ, ಕಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸುತ್ತಿವೆ. ಕೋವಿಡ್ ಲಾಕ್‌ಡೌನ್ ನೆಪವೊಡ್ಡಿ ಶ್ರೀಮಂತರು, ಬಂಡವಾಳಶಾಹಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಯ್ದೆಗಳನ್ನು ತಿದ್ದುಪಡಿ ಮಾಡುತ್ತಿವೆ. ಸರ್ಕಾರದ ಈ ಕಾರ್ಮಿಕ, ರೈತ ವಿರೋಧಿ ನೀತಿ ಖಂಡನೀಯ ಎಂದರು.
ಕೋವಿಡ್‌ನಿಂದ ಬದುಕು ಕಳೆದುಕೊಂಡ ವಲಸೆ ಕಾರ್ಮಿಕರಿಗೆ ಯಾವುದೇ ನೆರವು ನೀಡಿಲ್ಲ. ಸರ್ಕಾರ ಘೋಷಿಸಿದ ವಿಶೇಷಪ್ಯಾಕೇಜ್ ಕೂಡ ಮೂಗಿಗೆ ತುಪ್ಪ ಸವರುವ ಕೆಲಸವಾಗಿದ್ದು, ಅದರಲ್ಲೂ ಭಾರಿ ಭ್ರಷ್ಟಾಚಾರ ಎಸಗಲಾಗಿದೆ. ವಲಸೆ ಕಾರ್ಮಿಕರಿಗೆ ಸೂಕ್ತ ನೆರವು ನೀಡಿ ಕೋವಿಡ್ ನಿರ್ವಹಣಾ ವೆಚ್ಚದ ಮೇಲೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಕಳೆದ ಆರು ತಿಂಗಳಿಂದ ಕಾರ್ಮಿಕರಿಗೆ ಕೆಲಸವಿಲ್ಲ. ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಮರ್ಪಕವಾಗಿ ತಲುಪಿಲ್ಲ. ಇದರಿಂದ ಬಡವರ್ಗದ ಜನ ಜೀವನ ನಡೆಸುವುದೇ ಕಷ್ಟ ಎನ್ನುವಂತಾಗಿದೆ.
ಜಿಲ್ಲೆಯ ವಸತಿ ನಿಲಯ ಹಾಗೂ ವಸತಿ ಶಾಲೆಗಳ ಕಾರ್ಮಿಕರಿಗೆ ಕೂಡಲೇ ವೇತನ ಪಾವತಿಸಬೇಕು. ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಅಡುಗೆ ಅನಿಲ ಹಾಗೂ ಟಿವಿ ಭತ್ಯೆಗಳನ್ನು ಕಡಿತ ಮಾಡುವ ನಿರ್ಧಾರ ಕೈಬಿಡಬೇಕು, ಶೀಘ್ರ ಐದು ವರ್ಷಗಳ ಅರಿಯರ್ ಪಾವತಿಸಬೇಕು ಎಂದು ಆಗ್ರಹಿಸಿದರು.
ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಕಾರ್ಮಿಕರ 14 ತಿಂಗಳ ಬಾಕಿ ವೇತನ ಪಾವತಿಸಬೇಕು, ಆರ್‌ಟಿಪಿಎಸ್‌ನಲ್ಲಿ ಒಂದು ಸಾವಿರಕ್ಕೂ ಅಧಿ ಕ ಕಾರ್ಮಿಕರನ್ನು ಕಾರಣವಿಲ್ಲದೇ ಕೆಲಸದಿಂದ ತೆಗೆದು ಹಾಕಿದ್ದು, ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಜಿ. ಅಮರೇಶ, ಕಾರ್ಮಿಕ ಮುಖಂಡರಾದ ಅಮೀರ್ ಅಲಿ, ಜಿ. ಅಡವಿರಾವ್, ಶಿವಯ್ಯ ಸೇರಿದಂತೆ ಇತರರಿದ್ದರು.