Advertisement

ಕಾರ್ಮಿಕರ ಪ್ರತಿಭಟನೆ, ಮೆರವಣಿಗೆ, ಸಮಾವೇಶ

09:02 AM Jan 09, 2019 | |

ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ ದೇಶ ವ್ಯಾಪಿ ಕರೆ ನೀಡಲಾಗಿದ್ದ ಎರಡು ದಿನದ ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕಾರ್ಮಿಕ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು.

Advertisement

ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.  ಕೆಎಸ್‌ಆರ್‌ಟಿಸಿ, ನಗರ ಸಾರಿಗೆ ಬಸ್‌ ಸಂಚಾರ ಮಧ್ಯಾಹ್ನದವರೆಗೆ ವಿರಳವಾಗಿತ್ತು. ಆದರೆ, ಮುಷ್ಕರ ನಿರತರಾಗಿದ್ದ ಕಾರ್ಮಿಕರು ತಮ್ಮ ಹೋರಾಟದ ವ್ಯಾಪ್ತಿಯನ್ನು ಪ್ರತಿಭಟನೆ ಮತ್ತು ಸಮಾವೇಶಕ್ಕೆ ಸಿಮೀತಗೊಳಿಸಿಕೊಂಡು ಮುಷ್ಕರ ನಡೆಸಿದ್ದರಿಂದ ಬಂದ್‌ ಪರಿಣಾಮ ಬೀರಲಿಲ್ಲ.

ಗ್ರಾಮಾಂತರ ಬಸ್‌ ನಿಲ್ದಾಣದಿಂದ ವಿವಿಧ ನಗರ ಮತ್ತು ಜಿಲ್ಲೆಗಳಿಗೆ ಬಸ್‌ ಸಂಚಾರ ಕಡಿಮೆ ಸಂಖ್ಯೆಯಲ್ಲಿತ್ತು. ಮೈಸೂರು- ಬೆಂಗಳೂರಿನ ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದದ್ದರಿಂದ ಬಸ್‌ಗಳ ಸಂಖ್ಯೆ ಇಳಿಸಲಾಗಿತ್ತು. ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆ ಮುಂದುವರಿದಿತ್ತು. ಆಟೋ, ಕ್ಯಾಬ್‌, ಟ್ಯಾಕ್ಸಿ ಸೇವೆ ಸಹ ಮುಂದುವರಿದಿತ್ತು. ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ಯಾವುದೇ ತೊಂದರೆ ಇಲ್ಲದೆ ನಡೆಯಿತು.

ಪ್ರಯಾಣಿಕರಿಗೆ ಬಸ್‌ ವ್ಯವಸ್ಥೆ: ನಗರದ ಬಿ.ಎನ್‌.ರಸ್ತೆಯಲ್ಲಿರುವ ಕೇಂದ್ರೀಯ ಬಸ್‌ನಿಲ್ದಾಣದಲ್ಲಿ ಮೈಸೂರಿನಿಂದ ಕೇರಳ, ತಮಿಳುನಾಡು ರಾಜ್ಯಕ್ಕೆ ಹೊರಡಬೇಕಿದ್ದ ಬಸ್‌ಗಳ ಸಂಚಾರ ರದ್ದುಪಡಿಸಲಾಗಿತ್ತು. ಉಳಿದಂತೆ ಮೈಸೂರಿನಿಂದ ರಾಜ್ಯದ ನಾನಾ ಪ್ರಮುಖ ಜಿಲ್ಲೆಗೆ ತೆರಳುವ ತಡೆರಹಿತ ಮಾರ್ಗದ ಬಸ್‌ ಸಂಚಾರ ಸ್ಥಗಿತವಾದರೆ, ಮೈಸೂರು-ಬೆಂಗಳೂರು, ಮೈಸೂರು-ಚಾಮರಾಜನಗರ ಮೊದಲಾದ ಮಾರ್ಗಗಳ ಬಸ್‌ ಸಂಚಾರ ವಿರಳವಾಗಿತ್ತು.

ನಿಲುಗಡೆ ಸಹಿತ ಇದ್ದ ಬಸ್‌ಗಳ ಸಂಚಾರ ಇದ್ದ ಕಾರಣ ಆಗೊಮ್ಮೆ-ಈಗೊಮ್ಮೆ ಹೊರಡುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕರು ಸಾಗಿದರೆ, ನೆರೆಯ ರಾಜ್ಯದ ಬಸ್‌ಗಾಗಿ ಕಾದು ಕುಳಿತಿದ್ದು ಕಾಣಿಸಿತು. ಯಾವ ಮಾರ್ಗದಲ್ಲಿ ಪ್ರಯಾಣಿಕರು ಹೋಗಲು ಬಸ್‌ ಹತ್ತುತ್ತಿದ್ದರೋ ಅಂತಹ ಬಸ್‌ಗಳನ್ನು ಕಳುಹಿಸಿಕೊಡಲಾಗುತ್ತಿತ್ತು.

Advertisement

ನಾಲ್ಕೆçದು ಪ್ರಯಾಣಿಕರು ಬಸ್‌ ಚಾಲನೆ ಮಾಡುವಂತೆ ಹಿರಿಯ ಅಧಿಕಾರಿಗಳು ಹೇಳಿದ್ದರಿಂದ ಚಾಲಕರು ಮಾರ್ಗಕ್ಕೆ ಹೋದರೆ, ಕೆಲವರು ಡಿಪೋಗೆ ತೆರಳಲು ಅನುಮತಿ ಕೊಡುವಂತೆ ಸಂಚಾರ ನಿರ್ವಾಹಕರಲ್ಲಿ ಮನವಿ ಮಾಡುತ್ತಿದ್ದು ಕಂಡುಬಂದಿತು. 

ನಗರ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಇಲ್ಲದಿದ್ದರೂ ಖಾಲಿ ಬಸ್‌ಗಳನ್ನೇ ಚಾಲನೆ ಮಾಡುವಂತೆ ಅಧಿಕಾರಿಗಳು ಸೂಚಿಸುತ್ತಿದ್ದುದ್ದನ್ನು ಕೆಲವು ಚಾಲಕರು ಹಾಗೂ ನಿರ್ವಾಹಕರು ಆಕ್ಷೇಪಿಸಿದರು. ಆಟೋರಿûಾ ಸಂಚಾರ ಎಂದಿನಂತೆ ಸಾಗಿದ್ದವು. ಇದಲ್ಲದೇ ಕೇಂದ್ರ ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣದ ಪ್ರೀಪೇಯ್ಡ ಆಟೋ ಸೆಂಟರ್‌ಗಳು ಕಾರ್ಯ ನಿರ್ವಹಿಸಿ ಆತಂಕ ದೂರ ಮಾಡಿದವು. 

ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ, ಅಡ್ಡಿಯಾಗಲಿಲ್ಲ. ಕೇಂದ್ರೀಯ ರೈಲ್ವೆ ಪೊಲೀಸ್‌ ಬಂದೋಬಸ್ತ್ನಲ್ಲಿ ಎಲ್ಲಾ ರೈಲುಗಳು ನಿಗದಿತ ಸಮಯದಂತೆ ಓಡಾಡಿದವು. ರೈಲು ತಡೆಯಬಹುದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಸಿಆರ್‌ಪಿಎಫ್ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕೌಂಟರ್‌ನಲ್ಲಿ ಪ್ರಯಾಣಿಕರು ಸಾಲು ಸಾಲಾಗಿ ನಿಂತಿದ್ದು ಕಂಡುಬಂದಿತು. ಮೈಸೂರು-ಚಾಮರಾಜನಗರ, ಮೈಸೂರು-ಬೆಂಗಳೂರು ನಡುವಿನ ರೈಲುಗಳನ್ನು ಆಶ್ರಯಿಸಿಕೊಂಡಿದ್ದರಿಂದ ಎಲ್ಲಾ ಬೋಗಿಗಳಲ್ಲೂ ತುಂಬಿ ತುಳುಕಿತ್ತು.

ನೀರವ ಮೌನ: ಅಖೀಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕೈಗಾರಿಕೆಗಳ ಸಂಘ ಬೆಂಬಲ ನೀಡಿದ್ದರಿಂದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳು ಸಂಪೂರ್ಣ ಕಾರ್ಯ ಸ್ಥಗಿತಗೊಳಿಸಿದ್ದರಿಂದ ನೀರವ ಮೌನ ಆವರಿಸಿತ್ತು. ಕೆಲವು ಸಣ್ಣ ಸಣ್ಣ ಕೈಗಾರಿಕೆಗಳು ಕಾರ್ಯ ನಿರ್ವಹಿಸಿದರೆ, ಹೆಬ್ಟಾಳು,ಕೂರ್ಗಳ್ಳಿ ಮೊದಲಾದ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳ ಕೆಲಸ ನಿಂತಿತ್ತು. ಈ ಕಾರ್ಮಿಕರು ಒಂದೆಡೆ ಸೇರಿ ಕಾರ್ಮಿಕ ವಿರೋಧಿ ನೀತಿ ಕೇಂದ್ರದ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next