ಗಂಗಾವತಿ: ಕಳೆದ 6 ತಿಂಗಳಿಂದ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಧನ ವೇತನವಿಲ್ಲದೇ ಪರದಾಡುವ ಪರಿಸ್ಥಿತಿ ಬಂದೊದಗಿದೆ.
ಹಲವು ಬಾರಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಜತೆ ರಾಜ್ಯ-ಕೇಂದ್ರ ಸರಕಾರದ ಅನೇಕ ಯೋಜನೆ ಜನರ ಮನೆಗೆ ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯ ಮಹತ್ವದ್ದು.
ಜಿಲ್ಲಾಡಳಿತ ಆದೇಶ ಮಾಡಲಿ: ಹೀಗಾಗಿ ಅಂಗನವಾಡಿ ಕೆಲಸಗಾರರಿಗೆ ಪ್ರತಿ ತಿಂಗಳು ಗೌರವಧನ ವೇತನ ಪಾವತಿಸುವ ವ್ಯವಸ್ಥೆಯಾಗಬೇಕು. ಸರಕಾರ ನೇರವಾಗಿ ಗೌರವಧನ ಪಾವತಿಸುವ ನಿಯಮ ರೂಪಿಸು ಅಗತ್ಯವಿದೆ. ಪ್ರತಿ ತಿಂಗಳು ವೇತನ ಪಾವತಿ ಬಿಲ್ ತಯಾರಿಸಿ ತಾಪಂಗೆ ಕಳಿಸಿ ನಂತರ ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ ಸಹಿಯೊಂದಿಗೆ ಪ್ರತಿ ತಾಲೂಕು ಖಜಾನಾಧಿಕಾರಿಗಳಿಗೆ ಹೋಗುತ್ತದೆ. ಈಗಾಗಲೇ ಪ್ರತಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಬ್ಯಾಂಕ್ ವಿವರ ಪ್ರತಿ ತಾಲೂಕು ಶಿಶು ಅಭಿವೃದ್ಧಿ ಕಚೇರಿಯಲ್ಲಿದೆ. ನೇರವಾಗಿ ಗೌರವ ವೇತನ ಪಾವತಿಸಲು ಜಿಲ್ಲಾಡಳಿತ ಸೂಕ್ತ ಆದೇಶ ಮಾಡಬೇಕಿದೆ.
ಹಲವು ಜವಾಬ್ದಾರಿ ಹೊತ್ತ ಕಾರ್ಯಕರ್ತೆಯರು: ಅಂಗನವಾಡಿ ಕಾರ್ಯದ ಜತೆಗೆ ಕಾರ್ಯಕರ್ತೆಯರು ಪ್ರತಿ ನಿತ್ಯ ಮಾತೃಪೂರ್ಣ ಯೋಜನೆಯಂತೆ ಬಾಣಂತಿಯರಿಗೆ ಪೌಷ್ಟಿಕ ಆಹಾರ ತಯಾರಿಸಿ ಬಡಿಸಬೇಕು. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಆಹಾರ ತಯಾರಿಸಿ ಕೊಡಬೇಕು. ಅಂಗನವಾಡಿ ಕೇಂದ್ರದ ಸುತ್ತಲಿನ ನಿವಾಸಿಗಳ ಮಾಹಿತಿ ಸಂಗ್ರಹ ಮಾಡಬೇಕು. ಚುನಾವಣೆ ಮತದಾನ ಪಟ್ಟಿ ತಯಾರಿಸಿ ಸಂಬಂಧಪಟ್ಟ ಮತದಾರರಿಗೆ ಗುರುತಿನ ಕಾರ್ಡ್ ವಿತರಿಸಬೇಕು. ಮಕ್ಕಳ ದಾಖಲಾತಿ, ಆಹಾರ ಪೂರೈಕೆ ಸೇರಿ ಸಮಸ್ತ ವಿವರ ರೆಜಿಸ್ಟರ್‌ಗಳಲ್ಲಿ ದಾಖಲಿಸುವ ಕೆಲಸ ಮಾಡಬೇಕು. ಆರೋಗ್ಯ, ಕಂದಾಯ ಸೇರಿ ಪ್ರಮುಖ ಇಲಾಖೆಗಳ ಯೋಜನೆ ಅನುಷ್ಠಾನ ಮಾಡುವ ಮಹತ್ವದ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರ ಮೇಲಿದೆ.
ಕಾರ್ಯಕರ್ತೆರ ಗೌರವ ವೇತನ ಪ್ರತಿ ತಿಂಗಳು ಪಾವತಿಯಾಗುವಂತೆ ನಿಯಮ ರೂಪಿಸಬೇಕಿದೆ. ಈ ಕುರಿತು ಜನಪ್ರತಿನಿಧಿಗಳು ಗೌರವ ವೇತನ ಪ್ರತಿ ತಿಂಗಳು ಪಾವತಿಸುವಂತೆ ಏಕೆ ತಾಲೂಕು ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿಲ್ಲ?. ಸರಿಯಾದ ವೇಳೆ ವೇತನ ಬಂದರೆ ಕುಟುಂಬ ನಿರ್ವಹಣೆ ಸುಲಭವಾಗುತ್ತದೆ. ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ.
•ಜನಪ್ರತಿನಿಧಿಗಳ ನಿರ್ಲಕ್ಷ್ಯ
•ಬೇಡಿಕೆ ಈಡೇರಿಕೆಗೆ ಆಗ್ರಹ
•ಹಲವು ಕೆಲಸಗಳ ಹೊರೆ
•ಶೀಘ್ರ ಗೌರವ ಧನ ನೀಡಿ
•ಕೆ.ನಿಂಗಜ್ಜ