ನಾಗಮಂಗಲ: ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು. ಸಮಾಧಾನಗೊಳ್ಳದ ಕಾರ್ಯಕರ್ತರ ಬಗ್ಗೆ ಸಹನೆ ಕಳೆದುಕೊಂಡ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಮೈಕ್ ಕಿತ್ತೆಸೆದ ಪ್ರಸಂಗವೂ ಭಾನುವಾರ ನಡೆಯಿತು. ಲೋಕಸಭೆ ಉಪ ಚುನಾವಣೆ ಪ್ರಚಾರ ಸಂಬಂಧ ಪಟ್ಟಣದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಚೆಲುವರಾಯ ಸ್ವಾಮಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆದಿದ್ದರು. ಸಭೆಗೆ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಸಹ ಆಗಮಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಪ್ರಾಸ್ತಾವಿಕವಾಗಿ ಮಾತನಾಡಲು ಆರಂಭಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ ವಿರುದಟಛಿ ಸಿಡಿದೆದ್ದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಪರಿಸ್ಥಿತಿ ಉದ್ವಿಗ್ನಗೊಂಡು ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಗಮನಿಸಿದ ಚೆಲುವರಾಯಸ್ವಾಮಿ, ಕಾರ್ಯಕರ್ತರನ್ನು ಸಮಾಧಾನಪಡಿಸಲು ಮೈಕ್ ಹಿಡಿದು ನಿಂತರು. ಆದರೂ ಕಾರ್ಯಕರ್ತರು ಅದಕ್ಕೆ ಕಿವಿಗೊಡದಿದ್ದಾಗ ಸಹನೆ ಕಳೆದುಕೊಂಡ ಚೆಲುವರಾಯಸ್ವಾಮಿ ಕೋಪದಿಂದಲೇ ಮೈಕ್ ಕೆಳಗೆ ಕುಕ್ಕಿದರು. ಈ ವೇಳೆ ಕೂಗಾಡುತ್ತಿದ್ದ ಕಾಂಗ್ರೆಸ್‌ನವರು ಸ್ವಲ್ಪ ಸಮಾಧಾನಗೊಂಡರು.