Advertisement
ಸಮಾವೇಶಕ್ಕೆ ಸೂಚನೆ, ಮುಖಂಡರ ನಿರಾಸಕ್ತಿ: ಸಿಎಂ ಕುಮಾರಸ್ವಾಮಿ ವಾರದ ಹಿಂದೆ ಕೋಲಾರ ಜಿಲ್ಲೆಯ ಮುಖಂಡರ ಸಭೆ ಕರೆದು ಮಾ.5 ರಂದು ತಾವು ಕೋಲಾರಕ್ಕೆ ಆಗಮಿಸುತ್ತಿದ್ದು ಸಮಾವೇಶ ಆಯೋಜಿಸುವಂತೆ ಸಲಹೆ ನೀಡಿದ್ದರು. ಹೀಗಾಗಿ ಜಿಲ್ಲಾ ಮುಖಂಡರ ಸಭೆ ಕರೆಯಲಾಗಿತ್ತು. ಆದರೆ, ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಇತರರು ಸಮಾವೇಶ ನಡೆಸಲು ಆಸಕ್ತಿ ತೋರಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಮಾವೇಶ ರದ್ದಾಗಿತ್ತು.
Related Articles
Advertisement
ಲೋಕ ಕಣಕ್ಕಿಳಿಯದ ಮುನ್ಸೂಚನೆಯೇ?: ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಪ್ರಬಲ ಸ್ಪರ್ಧಿಯಾಗಿದ್ದ ಜೆಡಿಎಸ್ ಇದೀಗ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಾದಿಯತ್ತ ಸಾಗಿರುವುದು ನಿಷ್ಟಾವಂತ ಕಾರ್ಯಕರ್ತರಿಗೆ ನೋವು ತರಿಸಿದೆ. ಮೈತ್ರಿ ಇಲ್ಲದಿರುವಾಗಲೇ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕೊನೇ ಕ್ಷಣದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಅನುಕೂಲ ಕಲ್ಪಿಸುವರೆಂಬ ಆರೋಪ ಎದುರಿಸುತ್ತಿರುವ ಜೆಡಿಎಸ್ ವರಿಷ್ಠರು, ಈಗಲೂ ಅವರ ಹಾದಿ ಸುಗಮವಾಗಿಸಲು ಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ತೇಲಾಡುತ್ತಿದೆ. ಜೆಡಿಎಸ್ ಅಭ್ಯರ್ಥಿಯನ್ನೇ ಹಾಕದ ಮೇಲೆ ಇಲ್ಲಿನ ಕಾರ್ಯಕರ್ತರು, ಮುಖಂಡರೊಂದಿಗೆ ಚರ್ಚಿಸುವ ಅಗತ್ಯವೇನಿದೆ. ಕಾಲಹರಣ ಮಾಡುವುದೇಕೆ ಎಂಬ ಕಾರಣದಿಂದಲೇ ಬೆಂಗಳೂರಿಗೆ ವಾಪಸ್ಸಾದರೇ ಎಂಬ ಅನುಮಾನ ಮೂಡುವಂತಾಗಿದೆ.
ಸ್ಪೀಕರ್ ಬಣದಲ್ಲಿ ಮುಖಂಡರು: ಈ ನಡುವೆ ಸಂಸದ ಕೆ.ಎಚ್.ಮುನಿಯಪ್ಪ ವಿರೋಧಿ ಬಣದೊಂದಿಗೆ ಪûಾತೀತವಾಗಿ ಹಲವು ಜೆಡಿಎಸ್ ಮುಖಂಡರು ಕೈಜೋಡಿಸಿದ್ದಾರೆ. ಇದರಲ್ಲಿ ಶಾಸಕ ಶ್ರೀನಿವಾಸಗೌಡರು ಹೊರತಾಗಿಲ್ಲ. ರಾಜ್ಯದ ಮೈತ್ರಿ ಸರ್ಕಾರದಲ್ಲಿ ಸ್ಥಾನ ಹೊಂದಾಣಿಕೆಯಾಗಿ ಕೋಲಾರವನ್ನು ಕೆ.ಎಚ್.ಮುನಿಯಪ್ಪರಿಗೆ ಬಿಟ್ಟುಕೊಟ್ಟರೆ ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಹೊಡೆತ ಬೀಳುವುದಂತೂ ಗ್ಯಾರೆಂಟಿ ಎಂಬುದು ಕಾರ್ಯಕರ್ತರ ಮಾತಾಗಿದೆ.
ಸ್ಪೀಕರ್ ರಮೇಶ್‌ಕುಮಾರ್ ಸೇರಿ ಈ ಬಣದ ಪ್ರಮುಖ ಮುಖಂಡರಾದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಇತರರು ಕೋಚಿಮುಲ್ ಕಾರ್ಯಕ್ರಮದಲ್ಲಿ ಗೈರಾಗಿದ್ದು ಎದ್ದು ಕಾಣಿಸುತ್ತಿತ್ತು. ಸಂಸದ ಕೆ.ಎಚ್.ಮುನಿಯಪ್ಪ ಅವರು ಕೋಚಿಮುಲ್ ಕಾರ್ಯಕ್ರಮ ಆರಂಭವಾಗುವ ಮುನ್ನವೇ ರೈಲ್ವೆ ಕಾರ್ಯಕ್ರಮದ ನೆಪವೊಡ್ಡಿ ತೆರಳಿದ್ದರು. ಒಟ್ಟಾರೆ ಮುಖ್ಯಮಂತ್ರಿಯಾದ ಮೊದಲ ಬಾರಿಗೆ ಜಿಲ್ಲೆಗೆ ಬಂದರೂ ಕಾರ್ಯಕರ್ತರತ್ತ ಮುಖ ಮಾಡದ ಕುಮಾರಸ್ವಾಮಿ ವರ್ತನೆ ಹಿಂದೆ ಸಂಸದ ಕೆ.ಎಚ್.ಮುನಿಯಪ್ಪ ಅವರ ರಾಜಕೀಯ ತಂತ್ರಗಾರಿಕೆಯೂ ಇರಬಹುದೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.