ಚಿಕ್ಕಬಳ್ಳಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾಗತೀಕರಣ ಹಾಗೂ ಉದಾರೀಕರಣ ನೀತಿಗಳ ಭಾಗವಾಗಿ ರೂಪಿಸಿ ಅನುಷ್ಠಾನಗೊಳಿಸುತ್ತಿರುವ ಜನ ವಿರೋಧಿ ಕಾರ್ಮಿಕ ಕಾಯ್ದೆಗಳಿಂದ ದೇಶದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರ ಬದುಕು ಅತಂತ್ರವಾಗಿದೆ ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ (ಸಿಡಬ್ಲ್ಯೂಎಫ್ಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಟೀಕಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಶಾಖೆ ವತಿಯಿಂದ (ಸಿಡಬ್ಲ್ಯೂಎಫ್ಐ) ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕಾರ್ಮಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಜಾಗದ ಸ್ಥಳದಲ್ಲಿ ಸೂಕ್ತ ರಕ್ಷಣ ಇಲ್ಲದಂತಾಗಿದೆ ಎಂದರು.
ರೈತರು ಕಾರ್ಮಿಕರಾಗುತ್ತಿದ್ದಾರೆ: ದೇಶದಲ್ಲಿ ಹೆಚ್ಚು ಉದ್ಯೋಗ ಅವಕಾಶಗಳನ್ನು ಒದಗಿಸುವ ಕೃಷಿ ರಂಗ ಇಂದು ದಿವಾಳಿಯಾಗಿ ಕೃಷಿ ಭೂಮಿ ರಿಯಲ್ ಎಸ್ಟೇಟ್‌ಗಳಿಗೆ ಹೆಚ್ಚು ಬಳಕೆಯಾಗುತ್ತಿರುವುದರಿಂದ ಕೃಷಿ ಭೂಮಿ ಕಣ್ಮರೆಯಾಗುತ್ತಿದ್ದು, ಇದರಿಂದ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಕಾರ್ಮಿಕರ ಸಂಖ್ಯೆ ಅಧಿಕವಾಗುತ್ತಿದೆ ಎಂದರು. ನಗರ ಪ್ರದೇಶಗಳು ವಿಸ್ತರಣೆಯಾಗಿ ಹಳ್ಳಿಗಳು ಇಲ್ಲವಾಗುತ್ತಿವೆ. ರೈತರು ಬೆಳೆಯುವ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಕಾರ್ಮಿಕರಾಗುತ್ತಾ ನಗರಗಳಿಗೆ ಕೆಲಸ ಹುಡುಕಿ ವಲಸೆ ಬರುವಂತಾಗಿದೆ ಎಂದರು.
ಅರ್ಹರಿಗೆ ಸವಲತ್ತು ಸಿಗುತ್ತಿಲ್ಲ: ರಾಜ್ಯದ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 8 ಸಾವಿರ ಕೋಟಿ ಕಲ್ಯಾಣ ನಿಧಿ ಕಾರ್ಮಿಕರಿಗೆ ಬಳಕೆಯಾಗದೇ ಕೊಳೆಯುತ್ತಿದೆ. ಅರ್ಹ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಂಘದ ಜಿಲ್ಲಾ ಸಂಚಾಲಕ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಬರದಿಂದ ತತ್ತರಿಸಿರುವ ಜಿಲ್ಲೆಯಲ್ಲಿ ರೈತಾಪಿ ಕೂಲಿ ಕಾರ್ಮಿಕರು ಇಂದು ಅಸಂಘಟಿತರಾಗಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಇವರನ್ನು ಸಂಘಟಿತರನ್ನಾಗಿ ಮಾಡಿ ಕಾರ್ಮಿಕರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರನ್ನು ಸಂಘಟಿಸಲಾಗುತ್ತಿದೆ ಎಂದರು.
ಕಾರ್ಮಿಕರ ಭವಿಷ್ಯ ಬಗ್ಗೆ ಚಿಂತನೆ ಇಲ್ಲ: ಸಂಘದ ಸಹ ಸಂಚಾಲಕ ಜಿ.ಸಿದ್ದಗಂಗಪ್ಪ ಮಾತನಾಡಿ, ಸಮಾಜದಲ್ಲಿ ಶ್ರಮಪಟ್ಟು ಕೆಲಸ ಮಾಡುವ ಕಾರ್ಮಿಕರಿಗೆ ಇಂದು ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಸರ್ಕಾರಗಳು ಕೂಡ ಕಾರ್ಮಿಕ ವಿರೋಧಿ ನೀತಿ, ಕಾಯ್ದೆಗಳನ್ನು ರೂಪಿಸಿ ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿವೆ ಎಂದರು. ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಭವಿಷ್ಯದ ಬಗ್ಗೆ ಸರ್ಕಾರಗಳಿಗೆ ಚಿಂತನೆ ಇಲ್ಲ. ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಕಾರ್ಮಿಕರೇ ಸಂಘಟಿತರಾಗಬೇಕು. ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕೂಲಿ ಕಾರ್ಮಿಕರಿದ್ದು, ಎಲ್ಲರನ್ನು ಸಂಘಟಿಸಿ ಶೀಘ್ರದಲ್ಲಿಯೇ ಜಿಲ್ಲಾ ಸಂಘಟನಾ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಸಂಘದ ಖಜಾಂಚಿ ಬಿ.ಎನ್.ಮುನಿಕೃಷ್ಣಪ್ಪ, ಚಿಕ್ಕಬಳ್ಳಾಪುರದ ಎಸ್.ಲಕ್ಷ್ಮಯ್ಯ, ಚಿಂತಾಮಣಿ ಮುನಿವೆಂಕಟರೆಡ್ಡಿ, ಲಕ್ಷ್ಮೀನಾರಾಯಣ್, ಕೋಡಿಹಳ್ಳಿ ವೆಂಕಟೇಶಪ್ಪ, ಗೌರಿಬಿದನೂರು ಗಂಗಾಧರಪ್ಪ, ನಲ್ಲಪ್ಪ, ಗೋಪಾಲ್, ಬಾಗೇಪಲ್ಲಿ ಬಿ.ಸಾವಿತ್ರಮ್ಮ, ರಘುರಾಮರೆಡ್ಡಿ, ಬಾಲಾಜಿ, ಮುನಿಚಂದ್ರ, ಶಿಡ್ಲಘಟ್ಟದ ಸುದರ್ಶನ್, ಲಕ್ಷ್ಮಣ್, ಜಯರಾಮ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ನೂರಾರು ಕಟ್ಟಡ ನಿರ್ಮಾಣ ಕಾರ್ಮಿಕರು ಸಮಾವೇಶದಲ್ಲಿ ಭಾಗವಹಿಸಿದ್ದರು.
ದೇಶದ ನಿಜವಾದ ವಾರಸುದಾರರು ಕಟ್ಟಡ ಹಾಗೂ ಇತರೆ ನಿರ್ಮಾಣದ ಕಾರ್ಮಿಕರು. ದೇಶದ ಭವಿಷ್ಯ ಅಳಿವು ಉಳಿವು ನಿಂತಿರುವುದು ಕಾರ್ಮಿಕರಿಂದ. ಆದರೆ ಇಂದು ಕಾರ್ಮಿಕರನ್ನು ಎಲ್ಲಾ ಹಂತದಲ್ಲಿ ಶೋಷಣೆ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ವೇತನ, ಕೆಲಸದ ಭದ್ರತೆ ಇಲ್ಲದೇ ಕಾರ್ಮಿಕರನ್ನು ಹೆಚ್ಚು ಶೋಷಣೆ ಮಾಡಲಾಗುತ್ತಿದೆ. ದೇಶದಲ್ಲಿ ಕೃಷಿ ಭೂಮಿ ಕಡಿಮೆಯಾದಂತೆ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ.
-ಮಹಾಂತೇಶ್, ಪ್ರಧಾನ ಕಾರ್ಯದರ್ಶಿ, ಸಿಡಬ್ಲ್ಯೂಎಫ್ಐ