ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಕೂಲಿ ಕಾರ್ಮಿಕರು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಗಳೂ ಇದೀಗ ಕೋವಿಡ್ 19 ಭೀತಿಯಿಂದಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಜಿಲ್ಲೆಯ ಸುರಪುರ ಕ್ಷೇತ್ರದ 180ಜನರು ಕೂಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಇದೀಗ ಕೊರೊನಾ ಮಹಾಮಾರಿ ತಲ್ಲಣ ಸೃಷ್ಟಿಸಿದ್ದು, ಇತ್ತ ಸ್ವಗ್ರಾಮಗಳಿಗೆ ಹಿಂತಿರುಗಲೂ ಆಗದೇ ಅಲ್ಲಿಯೂ ಇರಲು ಆಗದೇ ಪರದಾಡುತ್ತಿದ್ದಾರೆ.
ಕೋವಿಡ್ 19 ಭೀತಿಯಿಂದ ಅಲ್ಲಿನ ಜನರು ಕಾರ್ಮಿಕರನ್ನು ತೆರಳುವಂತೆ ಒತ್ತಾಯಿಸುತ್ತಿದ್ದು, ಕೆಲ ದಿನಗಳ ಹಿಂದೆಯಷ್ಟೇ ಜಿಲ್ಲಾಡಳಿತ ಈ ಬಗ್ಗೆ ಅಲ್ಲಿನ ಅಧಿಕಾರಿ ವರ್ಗದೊಂದಿಗೆ ಮಾತನಾಡಿದ್ದೇವೆ. ಅವರಿಗೆ ಯಾವುದೇ ತೊಂದರೆಯಾಗದ ರೀತಿ ವ್ಯವಸ್ಥೆ ಮಾಡಿಸುತ್ತೇವೆ ಎಂದು ಹೇಳಿತ್ತು.
ಅಲ್ಲಿನ ಜನರು ಕಳೆದ ಒಂದು ವಾರದಿಂದ ಸಂಕಷ್ಟವನ್ನು ಎದುರಿಸುತ್ತಿದ್ದು, ಗುಡಿಸಲಿನಲ್ಲಿಯೇ ಮಕ್ಕಳೊಂದಿಗೆ ಪರಿತಪಿಸುವ ವಾತಾವರಣ ನಿರ್ಮಾಣವಾಗಿದೆ. ಜೈಲಿಗೆ ಹೋದರೂ ಪರವಾಗಿಲ್ಲ ಅಲ್ಲಿಂದ ಪಾದಯಾತ್ರೆ ಮೂಲಕ ಹೊರಡುತ್ತೇವೆ ಎನ್ನುವ ವಿಡಿಯೋ ಸಂದೇಶ ರವಾನಿಸಿದ್ದು, ಶಾಸಕ ರಾಜುಗೌಡರು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು. ಆದರೇ ವಾಹನ ಬಿಡುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಈವರೆಗೆ ಯಾರು ನಮ್ಮ ಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಗೋಳು ತೋಡಿಕೊಂಡಿದ್ದಾರೆ. ಎಲ್ಲೆಡೆ ಸಂಚಾರವೂ ಬಂದ್ ಆಗಿರುವುದರಿಂದ ಅಧಿಕಾರಿಗಳು ಹಾಗೂ ಶಾಸಕ ನರಸಿಂಹ ನಾಯಕ ಅಸಹಾಯಕರಾಗುವಂತಾಗಿದೆ. ಆದರೇ ಅಲ್ಲಿನ ಕಾರ್ಮಿಕರಿಗೆ ಮೂಲ ಸೌಕರ್ಯ ಒದಗಿಸಲು ಜಿಲ್ಲಾಡಳಿತದಿಂದ ಪತ್ರ ಬರೆಯಲಾಗಿದೆ ಎನ್ನುವ ಮಾಹಿತಿ ಅ ಧಿಕಾರಿ ವಲಯದಿಂದ ಲಭ್ಯವಾಗಿದೆ.
-ಅನಿಲ ಬಸೂದೆ