ರಾಯಚೂರು: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಯಾವುದೇ ಹೆಚ್ಚುವರಿ ಹಣ ಮೀಸಲಿಡದೆ ಕೂಲಿ ಕಾರ್ಮಿಕರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ಆರೋಪಿಸಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ (ಗ್ರಾಕೂಸ್) ಕಾರ್ಯಕರ್ತರು ಡಾ| ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಊಟದ ತಟ್ಟೆ ಬಾರಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ನಂತರ ಡಿಸಿ ಕಚೇರಿವರೆಗೆ ಸಾಗಿ ಜಿಪಂ ಸಿಇಒ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು. ಉದ್ಯೋಗ ಖಾತ್ರಿಯಡಿ ಕಾನೂನಿನಲ್ಲಿ ಸಾಕಷ್ಟು ಸಮಸ್ಯೆಗಳಿಂದ ಲಕ್ಷಾಂತರ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ. ಕಳೆದ ವರ್ಷದಂತೆ ಈ ವರ್ಷ ಕೂಡ 55 ಸಾವಿರ ಕೋಟಿ ಮೀಸಲಿಡಲಾಗಿದೆ. ಆದರೆ, ದೇಶದ ಜನರಿಗೆ ಸರಿಯಾಗಿ ಕೂಲಿ ಕೆಲಸ ಸಿಗುತ್ತಿಲ್ಲ. 300 ದಿನಕ್ಕೆ ಕೂಲಿ ಸಮಯ ಹೆಚ್ಚಿಸುವ ಮೂಲಕ ಅನುದಾನ ಹೆಚ್ಚಳಕ್ಕೆ ಆಗ್ರಹಿಸಿದರು.
ಕೂಲಿ ಹಣವನ್ನು ಆಯಾ ರಾಜ್ಯದ ಕನಿಷ್ಠ ಕೂಲಿಗೆ ಸಮನಾಗಿ ನೀಡಬೇಕು. ಕಾರ್ಮಿಕರಿಗೆ ಕೂಲಿ ಹಣ ಪಾವತಿಸುವಲ್ಲಿ ವಿಳಂಬವಾಗುತ್ತಿದ್ದು, ನಷ್ಟ ಪರಿಹಾರ ನೀಡಬೇಕು. ಆಧಾರ್ ಹಾಗೂ ಇಎಫ್‌ಎಂಎಸ್ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ದಿಷ್ಟ ಕಾಲಾವಧಿಯೊಳಗೆ ಪರಿಹರಿಸಬೇಕು. ಇಲ್ಲದಿದ್ದರೆ ಹಣ ಪಾವತಿಯಲ್ಲಿ ಆಧಾರ್ ಜೋಡಣೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ವ್ಯವಸ್ಥೆ ಜಾರಿಗೊಳಿಸಬೇಕು. ಇದರ ಎಲ್ಲ ಹಣ ಸರ್ಕಾರದ ಬಜೆಟ್‌ನಿಂದಲೇ ಬರಬೇಕು. ಕಾರ್ಮಿಕರ ಎಲ್ಲ ಬೇಡಿಕೆಗಳ ಈಡೇರಿಕೆಗೆ ಬಜೆಟ್‌ನಲ್ಲಿ ಹೆಚ್ಚುವರಿ ಹಣ ಮೀಸಲಿಡಬೇಕು
ಹಾಗೂ ಎಲ್ಲ ರಾಜ್ಯಗಳಿಗೆ ಹಣ ಬಿಡುಗಡೆಗೆ ವಿಳಂಬ ಮಾಡಬಾರದು. ಯೋಜನೆ ಅನುಷ್ಠಾನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಸದಸ್ಯರಾದ ವೆಂಕಟೇಶ, ಮರಿಯಮ್ಮ, ವಿದ್ಯಾ ಪಾಟೀಲ, ದುರ್ಗಶ್ರೀ, ಮಾಳಮ್ಮ, ಹನುಮೇಶ, ಆರ್. ಭೀಮಣ್ಣ, ಗುರುರಾಜ, ಶಾಂಭವಿ, ಬಸವರಾಜ ಇದ್ದರು.