Advertisement

ಕೋರೆಗಳಲ್ಲಿ ಸ್ಫೋಟಕ ಬಳಕೆ; ಕಾರ್ಮಿಕರು, ನಿವಾಸಿಗಳಲ್ಲಿ ಭೀತಿ!

11:01 PM Jan 22, 2021 | Team Udayavani |

ಕಾರ್ಕಳ: ಶಿವಮೊಗ್ಗ  ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದ ಸ್ಫೋಟ ಘಟನೆ ಬೆಚ್ಚಿಬೀಳಿಸಿದ ಬೆನ್ನಲ್ಲೇ, ಇಂಥದ್ದೇ ಸ್ಫೋಟ ಕಾರ್ಕಳ ತಾಲೂಕಿನಲ್ಲೂ ನಡೆದಿದ್ದನ್ನು ಜನರು ನೆನಪಿಸುವಂತಾಗಿದೆ.

Advertisement

20 ವರ್ಷಗಳ ಹಿಂದೆ ಪೆರ್ವಾಜೆ ಕಲ್ಲೊಟ್ಟೆ ಪ್ರದೇಶದಲ್ಲಿ ಭಾರೀ ಸದ್ದು  ಕೇಳಿಬಂದಿತ್ತು. ಸ್ಫೋಟದ ತೀವ್ರತೆಗೆ ಜನ ಬೆಚ್ಚಿ ಬಿದ್ದಿದ್ದರು. ಕಲ್ಲುಕೋರೆಯಲ್ಲಿ ಬಳಸುತ್ತಿದ್ದ ಟ್ರ್ಯಾಕ್ಟರ್‌ ಕಂಪ್ರಸರ್‌ ಸ್ಫೋಟವಾಗಿ ತಮಿಳುನಾಡಿನ ನಾಲ್ಕು ಮಂದಿ ಕಾರ್ಮಿಕರು ಮೃತ ಪಟ್ಟಿದ್ದರು. ಪರಿಸರದ ಅನೇಕ ಮನೆಗಳಿಗೆ ಹಾನಿಯಾಗಿತ್ತು. ಸ್ಫೋಟದ ತೀವ್ರತೆ 1 ಕಿ.ಮೀ. ಪ್ರದೇಶದ ವರೆಗೂ ವ್ಯಾಪಿ ಸಿತ್ತು.

ಹಲವು ಕಲ್ಲು ಕೋರೆಗಳು  :

ಕಲ್ಲುಗಳ ನಾಡು ಎಂದೇ ಕಾರ್ಕಳ ಪ್ರಸಿದ್ಧಿ ಪಡೆದಿದೆ. ಇಲ್ಲಿ ಕೋರೆಗಳ ಸಂಖ್ಯೆಯೂ ಅಧಿಕ. ಇಲ್ಲಿ ಅನುಮತಿ ಪಡೆದು ಕೋರೆ ನಡೆಸುವುದರೊಂದಿಗೆ ಅನಧಿಕೃತ ಕೋರೆಗಳೂ ಇವೆ ಎನ್ನಲಾಗಿದೆ. ಇಲ್ಲೂ ಸ್ಫೋಟಕ ಬಳಸಿಯೇ ಕಲ್ಲು ಒಡೆಯಲಾಗುತ್ತಿದೆ.  ಗಣಿ ಇಲಾಖೆ ಪ್ರಕಾರ ಕಾರ್ಕಳ ತಾ|ನಲ್ಲಿ 47, ಹೆಬ್ರಿ 6 ಕ್ರಷರ್‌ ಕೋರೆಗಳು ಕಾರ್ಯಾಚರಿಸುತ್ತಿವೆ. ಇನ್ನುಳಿದಂತೆ ಹಲವು ಕಡೆಗಳಲ್ಲಿರುವುದು  ಅನಧಿಕೃತ ಕೋರೆಗಳು ಎನ್ನಲಾಗಿದೆ. ಒಂದು ಮಾಹಿತಿ ಪ್ರಕಾರ 200ಕ್ಕೂ ಅಧಿಕ ಕೋರೆಗಳು ಹಾಗೂ 25ಕ್ಕೂ ಅಧಿಕ ಕ್ರಶರ್‌ಗಳಿವೆ. ಕಲ್ಯಾ ಮತ್ತು ಕುಕ್ಕುಂದೂರು ಗ್ರಾ.ಪಂ ಗಳಲ್ಲಿ ಅತ್ಯಧಿಕ ಕಲ್ಲಿನ ಕೋರೆಗಳಿವೆ.

ನಿಯಮ ಪಾಲನೆ ಸಂದೇಹ :

Advertisement

ನಿಯಮಾನುಸಾರ  ಶಾಲೆ, ವಸತಿ ಪ್ರದೇಶಗಳ ವ್ಯಾಪ್ತಿಯಲ್ಲಿ  ಕೋರೆ ನಡೆಸಲು ಅನುಮತಿ ಇಲ್ಲ. ಆದರೆ ಜನವಸತಿ ಪ್ರದೇಶಗಳಿರುವ  ಅನೇಕ ಕಡೆ  ಕೋರೆಗಳಿವೆ. ಪರವಾನಿಗೆ ಪಡೆದ ಪರಿಣತರೇ ಸ್ಫೋಟಿಸಬೇಕು ಎನ್ನುವ ನಿಯಮವಿದ್ದರೂ ಎಷ್ಟರ ಮಟ್ಟಿಗೆ ಇವುಗಳು ಪಾಲನೆಯಾಗುತ್ತಿವೆ ಎನ್ನುವ ಬಗ್ಗೆ  ಅನುಮಾನವಿದೆ.

ಅಮಾಯಕ  ಜೀವಗಳು ಬಲಿ :

ಕಲ್ಲು  ಕೋರೆಗಳಲ್ಲಿ  ಹೊರ ರಾಜ್ಯ, ಜಿಲ್ಲೆಗಳ ಕಾರ್ಮಿಕರೇ ಹೆಚ್ಚಿದ್ದು, ಅವರೆಲ್ಲ  ಅಸುರಕ್ಷತೆ ಭೀತಿ ಎದುರಿಸುತ್ತಿದ್ದಾರೆ. 2019ರಲ್ಲಿ ಹೆಬ್ರಿ ಭಾಗದ ಕೋರೆಯೊಂದರಲ್ಲಿ ಸ್ಫೋಟ ಸಂಭವಿಸಿ ಓರ್ವ ಕಾರ್ಮಿಕ ಮೃತ ಪಟ್ಟಿದ್ದ., ಬೆಳ್ಮಣ್‌ ಭಾಗದಲ್ಲಿ ಕೂಡ ಜಿಲೆಟಿನ್‌ ಕಡ್ಡಿ  ಸ್ಫೋಟಿಸಿ  ಕಾರ್ಮಿಕನೋರ್ವ ಮೃತಪಟ್ಟಿದ್ದ. ಹೀಗೆ ಘಟನೆಗಳು ಮರುಕಳಿಸುತ್ತಲೇ ಇದೆ. ಇದರಿಂದ ಆಸುಪಾಸಿನ ನಿವಾಸಿಗಳು ಆತಂಕದಲ್ಲೇ ದಿನ ದೂಡುತ್ತಿದ್ದಾರೆ.

ಕಾಡುವ  ಅನುಮಾನಗಳು :

ಕಲ್ಲು  ಒಡೆಯಲು ಅಮೋನಿಯಂ ನೈಟ್ರೇಟ್‌ ಮತ್ತು ಡಿಟೋನೇಟರ್‌, ಜಿಲೆಟಿನ್‌ ಬಳಕೆ ಮಾಡಲಾಗುತ್ತಿದೆ. ಸ್ಫೋಟಕ ದಾಸ್ತಾನು ಹೊಂದಲು ಮತ್ತು ಸ್ಫೋಟಿಸಲು ಅನುಮತಿ ಪಡೆದಿರುವವರು ಜಿಲ್ಲೆಯಲ್ಲಿ  ಬೆರಳಕಣಿಕೆಯ ಮಂದಿಯಷ್ಟೇ ಇದ್ದಾರೆ. ಸ್ಫೋಟದ ವೇಳೆ ಸಾಕಷ್ಟು ಸುರಕ್ಷತೆ, ಮುಂಜಾಗ್ರತೆ ವಹಿಸಬೇಕು. ಅದಕ್ಕೆ ಸಂಬಂಧಿಸಿದ ಪರಿಕರಗಳನ್ನು  ಸಿದ್ಧಪಡಿಸಿಟ್ಟುಕೊಳ್ಳಬೇಕು. ತಾಲೂಕಿನಲ್ಲಿ ಅತ್ಯಧಿಕವಿರುವ ಕ್ರಷರ್‌ಗಳಿಗೆ  ಸ್ಫೋಟಕಗಳು ಎಲ್ಲಿಂದ ಬರುತ್ತವೆ ಎನ್ನುವುದೇ ನಿಗೂಢ.

ಬೀಡಿ ಸೇದಿದ್ದೆ ತಪ್ಪಾಗಿತ್ತು! :

20 ವರ್ಷ ಗಳ ಹಿಂದಿನ ಘಟನೆಯಲ್ಲಿ ಓರ್ವ ಕಾರ್ಮಿಕ ಧೂಮಪಾನ ಮಾಡಿದ್ದರಿಂದ ಜಿಲೆಟಿನ್‌ಗೆ ಬೆಂಕಿ ತಗುಲಿ ಅವಘಡಕ್ಕೆ ಕಾರಣವಾಗಿತ್ತು. ಸ್ಫೋಟದ ತೀವ್ರತೆಗೆ ಶವಗಳು ಕರಕಲಾಗಿದ್ದು, ಓರ್ವನ ಶವ 30 ಮೀ. ದೂರಕ್ಕೆ  ಎಸೆಯಲ್ಪಟ್ಟಿತ್ತು.

1 ಕೋ.ರೂ. ಮೌಲ್ಯದ ದಾಸ್ತಾನು  ಪತ್ತೆ :

2014ರಲ್ಲಿ  ತಾ|ನ ವಿವಿಧ ಕಡೆಗಳ ಕಲ್ಲಿನ ಕೋರೆಗಳಿಗೆ  ಅಂದಿನ ಎಸ್‌ಪಿ ಅಣ್ಣಾಮಲೈ ದಾಳಿ ಮಾಡಿದ್ದರು.  ಪರವಾನಿಗೆ ಇಲ್ಲದೆ  ಗಣಿಗಾರಿಕೆ ನಡೆಸುತ್ತಿರುವುದನ್ನು ಪತ್ತೆ ಹಚ್ಚಿದ್ದರು. ರೂ. 1 ಕೋ.ಗೂ ಅಧಿಕ ಮೌಲ್ಯದ ಅಮೋನಿಯಂ ನೈಟ್ರೇಟ್‌, ಎಲೆಕ್ಟ್ರಿಕ್‌ ಡಿಟೋನೇಟರ್‌ ಪತ್ತೆ ಹಚ್ಚಿ, ಸ್ಫೋಟಕ ದಾಸ್ತಾನಿರಿಸದವರ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ದರು.

 

ಸ್ಫೋಟ ನಡೆಸುವುದಕ್ಕೆ ನಿಯಮಾವಳಿಗಳ ಪಾಲನೆ ಅಗತ್ಯ. ಅದಕ್ಕೆಂದೇ ಎಕ್ಸ್‌ ಪೋಸಿವ್‌ ಇಲಾಖೆ ಇದೆ. ಅದರ ಕಚೇರಿ ಮಂಗಳೂರಿನಲ್ಲಿದೆ. ಆ್ಯಕ್ಟ್ ಪ್ರಕಾರ ಷರತ್ತುಗಳಿಗೆ ಒಳಪಟ್ಟು  ಅನುಮತಿ ಪಡೆದುಕೊಳ್ಳಬೇಕು.ಸಂದೀಪ, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಡುಪಿ

 

 

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next