ಮಂಡ್ಯ: ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಜೀವನ ಭದ್ರತೆ, ದುಡಿಮೆಗೆ ತಕ್ಕ ಪ್ರತಿಫಲ, ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ಯಾವೊಂದು ಬೇಡಿಕೆಗಳಿಗೂ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಸ್ಪಂದಿಸಿಲ್ಲವೆಂಬ ಆರೋಪ ಪ್ರಬಲವಾಗಿ ಕೇಳಿಬರುತ್ತಿದೆ.
ವೇತನ ಆಯೋಗದಂತೆ ಕಾರ್ಮಿಕರಿಗೆ ಕನಿಷ್ಠ ವೇತನವನ್ನು 21 ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆನ್ನುವುದು ನಮ್ಮ ಬೇಡಿಕೆಯಾಗಿತ್ತು. ಆದರೆ, ಕೇಂದ್ರ ಸರ್ಕಾರ ಶೇ.50ರಷ್ಟು ಹೆಚ್ಚಿಸುವ ಭರವಸೆ ನೀಡಿದೆ. ಅದು ಹೇಗೆ ಎನ್ನುವುದನ್ನೂ ಸ್ಪಷ್ಟಪಡಿಸಿಲ್ಲ. ಅದನ್ನೂ ಗೊಂದಲದಲ್ಲಿಟ್ಟಿದೆ. ಈಗಾಗಲೇ ಡಿಸೆಂಬರ್ ತಿಂಗಳಲ್ಲಿ 1500 ರೂ. ನೀಡುವುದಾಗಿ ಭರವಸೆ ನೀಡಿದ್ದು ಇದುವರೆಗೂ ಕೊಟ್ಟಿಲ್ಲ ಎಂದು ಕಾರ್ಮಿಕ ಮುಖಂಡರ ಆರೋಪವಾಗಿದೆ.
ಹಾಲಿ ಅಂಗನವಾಡಿ ನೌಕರರಿಗೆ 9000 ರೂ. ಹಾಗೂ ಬಿಸಿಯೂಟ ನೌಕರರಿಗೆ 2700 ರೂ. ನೀಡಲಾಗುತ್ತಿದೆ. ಈಗ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಪ್ರಕಾರ ಅಂಗನವಾಡಿ ನೌಕರರಿಗೆ ದಿನಕ್ಕೆ 35 ರೂ. ಹೆಚ್ಚಾಗುತ್ತದೆ. ಆಶಾ ಕಾರ್ಯಕರ್ತೆಯರಿಗೆ ನೀಡುವ ವೇತನದ ಬಗ್ಗೆ ಸ್ಪಷ್ಟಪಡಿಸಿಲ್ಲ. ಕಾರ್ಮಿಕರಿಗೆ ಜೀವನಭದ್ರತೆ ದೊರಕಿಸುವ ಪ್ರಯತ್ನವನ್ನೇ ನಡೆಸದೆ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರು ಕೇಳಿಬರುತ್ತಿದೆ.
ಹೊರಗುತ್ತಿಗೆ ಪದ್ಧತಿಯನ್ನು ಕೈಬಿಡಬೇಕು ಎನ್ನುವುದು ಕಾರ್ಮಿಕ ಸಂಘಟನೆಗಳ ಪ್ರಮುಖ ಆಗ್ರಹವಾಗಿತ್ತು. ಆದರೆ, ಅದರ ಬಗ್ಗೆ ಎಲ್ಲಿಯೂ ಚಕಾರ ಎತ್ತಿಲ್ಲ. ಹೊರಗುತ್ತಿಗೆ ಹೆಸರಿನಲ್ಲಿ ಕಾರ್ಮಿಕರ ಶೋಷಣೆ ನಡೆಯುತ್ತಿದೆ. ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮ, ಯೋಜನೆಗಳನ್ನು ನೀಡದೆ ಶೋಷಣೆ ಮುಂದುವರೆಯುವಂತೆ ಮಾಡಿದೆ ಎಂಬ ಅಸಮಾಧಾನ ಹೊರಹಾಕಿದ್ದಾರೆ.
ಮಹಿಳೆಯರ ದೌರ್ಜನ್ಯ ತಡೆ, ಸಬಲೀಕರಣಕ್ಕೆ ಪೂರಕವಾದ ಒಂದೇ ಒಂದು ಘೋಷಣೆಯನ್ನೂ ಮಾಡಿಲ್ಲ. ಮಹಿಳೆಯರ ಸಂರಕ್ಷಣೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಮರೆತಿದೆ. ಕಾರ್ಮಿಕರ ಸರ್ವಾಂಗೀಣ ಅಭಿವೃದ್ಧಿಯನ್ನು ಗುರಿಯಾಗಿಸಿಕೊಳ್ಳದೆ ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು ರೂ. 3 ಸಾವಿರ ಪಿಂಚಣಿ ನೀಡಿ ಕೈತೊಳೆದುಕೊಂಡಿದೆ. ಇದರಿಂದ ಕಾರ್ಮಿಕರಿಗೆ ಸಿಗುವ ಲಾಭವಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡಬಾರದೆಂಬ ಬೇಡಿಕೆಗೆ ಚಕಾರ ಎತ್ತಿಲ್ಲ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವ ವಿಚಾರವಾಗಿ ಸ್ವಾಮಿನಾಥನ್ ವರದಿ ಜಾರಿ ಬಗ್ಗೆ ಮಾತಾಡಿಲ್ಲ. ಕಾರ್ಮಿಕರ ಯಾವುದೇ ಬೇಡಿಕೆಗಳಿಗೆ ಸ್ಪಂದಿಸದ ಇದೊಂದು ನಿರಾಶಾದಾಯಕ ಬಜೆಟ್ ಎಂದು ಟೀಕಿಸಿದ್ದಾರೆ.