Advertisement

ಫೆ.1ರಿಂದ ಕಾರ್ಮಿಕರ ಸಮ್ಮೇಳನ

01:14 PM Jan 28, 2020 | Suhan S |

ಬಳ್ಳಾರಿ: ಬೆಂಗಳೂರಿನಲ್ಲಿ ಫೆ. 1 ಮತ್ತು 2ರಂದು ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ ವತಿಯಿಂದ ರಾಜ್ಯಮಟ್ಟದ 3ನೇ ಕಾರ್ಮಿಕ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ವಿವಿಧಕ್ಷೇತ್ರಗಳ ಕಾರ್ಮಿಕರಿಗೆ ಸಂಬಂಧಿ ಸಿದ ಹಲವು ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್‌ ಹೇಳಿದರು.

Advertisement

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಐಯುಟಿಯುಸಿ ರಾಜ್ಯ ಸಮಿತಿಯು ಸಂಘಟಿತ, ಅಸಂಘಟಿತ ವಲಯಗಳ ಕಾರ್ಮಿಕರ ಸಮಸ್ಯೆಗಳನ್ನು ಮತ್ತು ದುಡಿಯುವ ಜನರ ಜೀವನಕ್ಕೆ ಸಂಬಂಧಪಟ್ಟ ವಿಷಯಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ 3ನೇ ರಾಜ್ಯಮಟ್ಟದ ಕಾರ್ಮಿಕರ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ದುಡಿವ ಜನರ ಮೇಲೆ ಆಳುವ ವರ್ಗ, ಸರ್ಕಾರದ ಬಹುವಿಧದ ದಾಳಿ ಕುರಿತು, ಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ, ಅವರ ಸೇವೆ ಕಾಯಂಗೊಳಿಸಲು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ, ಆಶಾ, ಅಂಗನವಾಡಿ, ಬಿಸಿಯೂಟ ನೌಕರರಿಗೆ ಕಾರ್ಮಿಕ ಸ್ಥಾನಮಾನಕ್ಕಾಗಿ ಹೋರಾಟ ಬೆಳೆಸುವ ಬಗ್ಗೆ ಗ್ರಾಮೀಣ ಕೃಷಿ ಕಾರ್ಮಿಕರು,  ಕಟ್ಟಡ ಕಾರ್ಮಿಕರು, ಅಂಗಡಿ-ಮನೆಗೆಲಸ ಇತ್ಯಾದಿ ಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಸಮ್ಮೇಳನದಲ್ಲಿ ಆಶಾ, ಅಂಗನವಾಡಿ, ಬಿಸಿಯೂಟ, ಸ್ಕೀಮ್‌ ಕಾರ್ಯಕರ್ತೆಯರಿಗೆ ಸರ್ಕಾರಿ ನೌಕರರ ಅಥವಾ ಕಾರ್ಮಿಕರ ಸ್ಥಾನಮಾನ ನೀಡಬೇಕು. ಗುತ್ತಿಗೆ ಕಾರ್ಮಿಕರು, ನೌಕರರನ್ನು ಕಾಯಂಗೊಳಿಸಬೇಕು. ಗುತ್ತಿಗೆ ಕಾರ್ಮಿಕರಿಗೆ 60 ವರ್ಷಗಳವರೆಗೆ ಸೇವಾ ಭದ್ರತೆ ಖಾತ್ರಿಪಡಿಸಬೇಕು. ಅದಕ್ಕಾಗಿ ವಿಶೇಷ ಕಾಯ್ದೆ ಜಾರಿಗೊಳಿಸಬೇಕು. ರಾಜ್ಯದ ಎಲ್ಲ ಸಣ್ಣ, ಮಧ್ಯಮ ಕೈಗಾರಿಕೆಗಳಪುನಶ್ಚೇತನಕ್ಕೆ ಕ್ರಮಕೈಗೊಳ್ಳಬೇಕು. ಎಲ್ಲ ಕಾರ್ಮಿಕರಿಗೆ ಕನಿಷ್ಠ ವೇತನ 21 ಸಾವಿರ ರೂ. ಗಳನ್ನು ನಿಗದಿಪಡಿಸಬೇಕು. ನಿವೃತ್ತ ಕಾರ್ಮಿಕರಿಗೆ 10 ಸಾವಿರ ರೂ. ಪಿಂಚಣಿ ಸೌಲಭ್ಯ ನಿಗದಿಪಡಿಸಬೇಕು. ಎಲ್ಲ ಜಿಲ್ಲೆಗಳಲ್ಲಿರುವ ಇಎಸ್‌ಐ ಡಿಸ್ಪೆನ್ಸರಿಗಳನ್ನು ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕು ಸೇರಿದಂತೆ ಇನ್ನಿತರೆ ಹಕ್ಕುಗಳನ್ನು ಈಡೇರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.  ಇದೇ ವೇಳೆ ಕಾರ್ಮಿಕ ಸಮಾವೇಶ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಫೆ. 3ರಂದು ಅಖೀಲ ಭಾರತ ಕಾರ್ಮಿಕ ಸಮ್ಮೇಳನ ಜಾರ್ಖಂಡ್‌ ರಾಜ್ಯದ ಧನಬಾದ್‌ ನಗರದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಆರ್‌. ಸೋಮಶೇಖರಗೌಡ, ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್‌, ಜಿಲ್ಲಾ ಉಪಾಧ್ಯಕ್ಷ ಪಿ.ಶರ್ಮಾಸ್‌ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next