Advertisement
ಹೌದು, ಕಟ್ಟಡ ನಿರ್ಮಾಣ ಕಾರ್ಮಿಕರಿಗಾಗಿ ಮೂರು ತಿಂಗಳ ಹಿಂದೆಯೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವ್ಯಾಪ್ತಿಯಲ್ಲಿ ಉಚಿತ ಬಸ್ ಪಾಸ್ ವಿತರಣೆ ಯೋಜನೆಗೆ ಚಾಲನೆ ನೀಡಲಾಗಿದೆ. ಆದರೆ, ಈ ಪಾಸುಗಳನ್ನು ಪಡೆಯುವವರೇ ಇಲ್ಲ. ಬೆಂಗಳೂರಲ್ಲಿ 3 ಲಕ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿದ್ದಾರೆ ಎಂಬ ಅಂದಾಜಿದೆ. ಆದರೆ, ಇದುವರೆಗೆ ಪಾಸು ಪಡೆದವರ ಸಂಖ್ಯೆ ಕೇವಲ 260. à ನೀರಸ ಪ್ರತಿಕ್ರಿಯೆಗೆ ಮಾಹಿತಿ ಕೊರತೆ ಕಾರಣ.
Related Articles
Advertisement
ನೀತಿಸಂಹಿತೆ ಅಡ್ಡಿ?: ಚುನಾವಣಾ ಪೂರ್ವದಲ್ಲೇ ಕಾರ್ಮಿಕರಿಗೆ ಉಚಿತ ಪಾಸು ವಿತರಣೆ ಯೋಜನೆ ಘೋಷಣೆ ಆಗಿತ್ತು. ಆದರೆ, ಉದ್ಘಾಟನೆ ಹೊತ್ತಿಗೆ ಚುನಾವಣೆ ಘೋಷಣೆಯಾಗಿದ್ದರಿಂದ ಮಾದರಿ ನೀತಿಸಂಹಿತೆ ಜಾರಿಯಾಯಿತು. ಇದರಿಂದ ಆರಂಭದಲ್ಲೇ ಬ್ರೇಕ್ ಬಿದ್ದಿತು ಎಂದು ಮಂಡಳಿ ಕಾರ್ಯದರ್ಶಿ ಸುನೀಲ್‌ಕುಮಾರ್ ಸ್ಪಷ್ಟಪಡಿಸಿದರು.
ಪಾಸ್ ಅಗತ್ಯವಿಲ್ಲ: ಆದರೆ, ಬಹುತೇಕ ಕಾರ್ಮಿಕರಿಗೆ ಈ ಯೋಜನೆ ಬಗ್ಗೆ ಮಾಹಿತಿಯೇ ಇಲ್ಲ. ಈ ನಿಟ್ಟಿನಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ಹಿಂದೆಬಿದ್ದಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕಾರ್ಮಿಕರಿಗೆ ಬಸ್ ಪಾಸ್‌ಗಳ ಅವಶ್ಯಕತೆ ಇಲ್ಲ. ಏಕೆಂದರೆ, ಎಲ್ಲ ಗುತ್ತಿಗೆದಾರರು ಕಾರ್ಮಿಕರನ್ನು ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಿರುತ್ತಾರೆ. ಇನ್ನೂ ಕೆಲವರು ಕಾಮಗಾರಿ ನಡೆಯುವ ಸ್ಥಳದಲ್ಲೇ ವಾಸ ಇರುತ್ತಾರೆ ಅಥವಾ ಸ್ವಂತ ದ್ವಿಚಕ್ರ ವಾಹನಗಳನ್ನು ಹೊಂದಿರುತ್ತಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಕೇಂದ್ರ ಸಂಘದ ಅಧ್ಯಕ್ಷ ಎನ್.ಪಿ. ಸ್ವಾಮಿ ಆರೋಪಿಸುತ್ತಾರೆ.
ಲಕ್ಷಾಂತರ ಕಾರ್ಮಿಕರಲ್ಲಿ ಬಹುತೇಕರು ನೋಂದಣಿ ಆಗದಿರುವುದಕ್ಕೂ ಮಂಡಳಿಯ ಪ್ರಚಾರದ ಕೊರತೆಯೇ ಕಾರಣ. ಜತೆಗೆ ನೋಂದಣಿ ಪ್ರಕ್ರಿಯೆ ಕೂಡ ಗೊಂದಲದಿಂದ ಕೂಡಿದೆ. ಇದರಿಂದ ಕಾರ್ಮಿಕರು ಹಿಂದೇಟು ಹಾಕುತ್ತಾರೆ ಎಂದು ಎನ್.ಪಿ. ಸ್ವಾಮಿ ದೂರಿದರು. ಉಚಿತ ಪಾಸು ಯೋಜನೆ ಬಗ್ಗೆ ಸಾಕಷ್ಟು ಪ್ರಚಾರ ಕೈಗೊಳ್ಳಲಾಗುತ್ತಿದೆ.
ಈ ಹಿಂದೆಯೇ ಬಿಎಂಟಿಸಿಯ 11 ಪ್ರಮುಖ ಬಸ್ ನಿಲ್ದಾಣಗಳಲ್ಲಿ ಈ ಸಂಬಂಧ ಅಭಿಯಾನ ನಡೆಸಲಾಗಿದ್ದು, ಸ್ಥಳದಲ್ಲೇ ಅರ್ಜಿ ಭರ್ತಿ ಮಾಡಿ, ಪಾಸು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈಗ ಮತ್ತೆ ವಿವಿಧೆಡೆ ಅಭಿಯಾನ, ಕರಪತ್ರಗಳ ಹಂಚಿಕೆ ಮೂಲಕ ಮಾಹಿತಿ ನೀಡಲು ಮಂಡಳಿ ಯೋಜನೆ ರೂಪಿಸಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದರು.
ಬಿಎಂಟಿಸಿಗೂ ಆದಾಯ: ಈ ಯೋಜನೆ ಅಡಿ ಬಿಎಂಟಿಸಿಯಿಂದ ವಾರ್ಷಿಕ ಪಾಸುಗಳನ್ನು ವಿತರಿಸಲಾಗುತ್ತದೆ. ಇದಕ್ಕೆ ಪ್ರತಿಯಾಗಿ ತಲಾ ಪಾಸಿಗೆ ಮಂಡಳಿಯು ತನ್ನ ಕಾರ್ಮಿಕ ಕಲ್ಯಾಣ ನಿಧಿಯಿಂದ ತಿಂಗಳಿಗೆ 1,050 ರೂ. ಪಾವತಿಸುತ್ತದೆ. ಒಂದೊಮ್ಮೆ ಎಲ್ಲ ಮೂರು ಲಕ್ಷ ಕಾರ್ಮಿಕರೂ ಉಚಿತ ಪಾಸು ಪಡೆದರೆ ಬಿಎಂಟಿಸಿಗೆ ಮಾಸಿಕ ಅಂದಾಜು 31 ಕೋಟಿ ರೂ. ಆದಾಯ ಬರಲಿದೆ. ಹಾಗಾಗಿ, ಸಾರಿಗೆ ಸಂಸ್ಥೆಗೂ ಇದರಿಂದ ಲಾಭ ಆಗಲಿದೆ.
ಪ್ರಸ್ತುತ ಆನ್‌ಲೈನ್ ಜತೆಗೆ ಸರ್ಕಾರೇತರ ಸಂಸ್ಥೆಯೊಂದರಿಂದ ನೋಂದಣಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದ್ದು, ಈಗಾಗಲೇ ರಾಜ್ಯದಲ್ಲಿ ಸುಮಾರು 8ರಿಂದ 9 ಲಕ್ಷ ಕಾರ್ಮಿಕರ ನೋಂದಣಿ ಪ್ರಕ್ರಿಯೆ ವಿವಿಧ ಹಂತಗಳಲ್ಲಿದೆ. ಅದರಲ್ಲಿ ಬೆಂಗಳೂರಿನಲ್ಲಿ ಇರುವವರನ್ನು ಹುಡುಕಿ, ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ. ಅಂಥವರ ವಿವರವನ್ನು ಬಿಎಂಟಿಸಿಗೆ ನೀಡಿ, ಆ ಮೂಲಕ ಪಾಸು ಒದಗಿಸಲಾಗುತ್ತಿದೆ.-ಸುನೀಲ್‌ಕುಮಾರ್, ಕಾರ್ಯದರ್ಶಿ, ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ * ವಿಜಯಕುಮಾರ್ ಚಂದರಗಿ