ಹಟ್ಟಿ ಚಿನ್ನದ ಗಣಿ: ಸ್ಥಳೀಯ ಚಿನ್ನದಗಣಿ ಕಂಪನಿ ಆಡಳಿತ ವರ್ಗ ವೈದ್ಯಕೀಯ ಅನರ್ಹತೆ ಯೋಜನೆಯಡಿ ಕಾರ್ಮಿಕರ ಮಕ್ಕಳಿಗೆ ಅನುಕಂಪ ಆಧಾರಿತ ನೇಮಕಾತಿ ಬದಲಿಗೆ ಕೇವಲ ಹಣಕಾಸು ಸೌಲಭ್ಯ ಪಡೆಯಬಹುದೆಂದು ಪ್ರಕಟಣೆ ನೀಡುತ್ತಿದ್ದಂತೆ ಚಿನ್ನದ ಗಣಿ ಕಂಪನಿ ಮತ್ತು ಕಾರ್ಮಿಕರ ಸಂಘದ ಮುಖಂಡರ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾರ್ಮಿಕ ಸಂಘದ ಮುಖಂಡರು ಹಾಗೂ ಟಿಯುಸಿಐ ಕಾರ್ಯಕರ್ತರು, ಕಾರ್ಮಿಕರ ಮಕ್ಕಳಿಗೆ ಉದ್ಯೋಗ ನೀಡುವ ಯೋಜನೆಗಳು ಜಾರಿಯಾಗಿವೆ ಎಂದು ಜ.12ರಂದು ಘೋಷಿಸಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ್ದರು. ಇದರ ಜತೆಗೆ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಜ.14ರಂದು ಪ್ರಕಟಣೆ ಹೊರಡಿಸಿ ಹಿರಿಯ ಕಾರ್ಮಿಕರನ್ನು ಆತಂಕಕ್ಕೆ ಈಡು ಮಾಡಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ವಿಆರ್‌ಎಸ್ ಹಾಗೂ ಮೆಡಿಕಲ್ ಅನ್‌ಫಿಟ್ ಯೋಜನೆಯನ್ನು ಅರ್ಹ ಕಾರ್ಮಿಕರಿಗೆ ಅನ್ವಯಿಸಲು ಆಡಳಿತ ವರ್ಗ ಒಪ್ಪಿಕೊಂಡಿದೆ ಎಂದು ಪ್ರಕಟಿಸಿದ್ದರು.
ಕಾರ್ಮಿಕ ಸಂಘದ ಮುಖಂಡರು ಉದ್ಯೋಗ ನೀಡುವ ಯೋಜನೆಗಳು ಜಾರಿಯಾಗಿವೆ ಎಂದು ಘೋಷಿಸುವ ಜತೆಗೆ ಮಧ್ಯವರ್ತಿ ಹಾಗೂ ದಲ್ಲಾಳಿಗಳಿಗೆ ಹಣ ನೀಡಿ ಹಾಳಾಗುವ ಬದಲಿಗೆ ಅರ್ಹತೆ ಹೊಂದಿದ ಕಾರ್ಮಿಕರು ಸಂಘದ ಕಚೇರಿ ಪೈ ಭವನದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಸೂಚಿಸಿದ ಫಲವಾಗಿ ಹಲವಾರು ಕಾರ್ಮಿಕರು ಕಳೆದ ನಾಲ್ಕೈದು ದಿನಗಳಿಂದ ಹೆಸರು ನೋಂದಣಿಗೆ ಮುಂದಾಗಿದ್ದರು.
ಜ.12ರಂದು ಕಾರ್ಮಿಕ ಸಂಘದ (ಟಿಯುಸಿಐ) ಮುಖಂಡರು ಆಡಳಿತ ವರ್ಗದ ಜತೆಗೆ ನಡೆಸಿದ ಮಾತುಕತೆಯಲ್ಲಿ ವಿಆರ್‌ಎಸ್ ಹಾಗೂ ಅನ್‌ಫಿಟ್ ಯೋಜನೆಗಳ ಜಾರಿ ಸಂಬಂಧ ನಿರ್ದೇಶಕ ಮಂಡಳಿ ಕೈಗೊಂಡ ನಿರ್ಣಯದ ಪ್ರತಿಯನ್ನು ಕಾರ್ಮಿಕ ಸಂಘದ ಮುಖಂಡರಿಗೆ ನೀಡಿದ್ದರೂ ಅದನ್ನು ಅವರು ಸರಿಯಾಗಿ ಅರ್ಥೈಸಿಕೊಳ್ಳದೇ ಕಾರ್ಮಿಕರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗಣಿ ಆಡಳಿತ ವರ್ಗ ಈಗ ಜಾರಿ ಮಾಡಿರುವ ಹಣಕಾಸು ಸೌಲಭ್ಯದ ಮೆಡಿಕಲ್ ಅನ್‌ಫಿಟ್ ಯೋಜನೆ ಕಾರ್ಮಿಕ ವರ್ಗಕ್ಕೆ ಅಪಾಯಕಾರಿಯಾಗಿದೆ. ನಿರ್ದೇಶಕ ಮಂಡಳಿ ನಿರ್ಣಯದ ಪ್ರಕಾರ ಕೆಲಸ ಮಾಡಲು ಅನರ್ಹರಿರುವ ಕಾರ್ಮಿಕರನ್ನು ಗಣಿ ಆಡಳಿತ ವರ್ಗವೇ ನೇರವಾಗಿ ವಜಾ ಮಾಡಲು ಅವಕಾಶವಿದೆ. ಹಣಕಾಸಿನ ಸೌಲಭ್ಯ ಪಡೆಯಲು ಕನಿಷ್ಠ 2 ವರ್ಷ ಸೇವೆ ಉಳಿದಿರಬೇಕು. ಅದಕ್ಕಿಂತ ಕಡಿಮೆ ಸೇವೆ ಉಳಿದ ಅನರ್ಹ ಕಾರ್ಮಿಕರಿಗೆ ಯಾವುದೇ ಹಣಕಾಸಿನ ಸೌಲಭ್ಯವಿಲ್ಲದೆ ಮನೆಗೆ ಕಳಿಸುವ ಅಧಿಸೂಚನೆ ಇದಾಗಿದೆ. ಕಾರ್ಮಿಕ ಸಂಘದ ಮುಖಂಡರು ಕಾರ್ಮಿಕರಿಗೆ ಏನು ಉತ್ತರ ನೀಡುತ್ತಾರೆಂಬುದು ಕುತೂಹಲದ ವಿಷಯವಾಗಿದೆ.