ಶಿರಸಿ: ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ನೋಂದಾಯಿತ ಕಾರ್ಮಿಕರಿಗೆ ಇಲಾಖೆಯಿಂದ ಯಾವುದೇ ಆಹಾರ ಕಿಟ್ ವಿತರಣೆ ಮಾಡಿಲ್ಲ ಮತ್ತು ನೋಂದಾಯಿತ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮಾಡುವಂತೆ ಕೇಂದ್ರ ಕಚೇರಿ ಅಥವಾ ಕಾರ್ಮಿಕ ಮಂಡಳಿಯಿಂದ ನಿರ್ದೇಶನವಾಗಲಿ, ಸೂಚನೆಯಾಗಲಿ ಬಂದಿಲ್ಲ ಎಂಬ ಮಾಹಿತಿ ಜಿಲ್ಲಾ ಕಾರ್ಮಿಕ ಅಧಿಕಾರಿ ನಿಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಕಾರ್ಮಿಕರ ಹಿತಾಸಕ್ತಿಯಿಂದ ಮಾಹಿತಿ ಹಕ್ಕು ಅಧಿನಿಯಮದಲ್ಲಿ ಸಲ್ಲಿಸಿದ ಅರ್ಜಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ನೀಡಿದ ಉತ್ತರದಲ್ಲಿ ಮೇಲಿನಂತೆ ಪ್ರಸ್ತಾಪಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಯ ಪತ್ರವನ್ನು ಪ್ರಕಟಿಸಿ ವಿವರಿಸಿದರು. ಕಾರ್ಮಿಕ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮಂಡಳಿಯ ಹಣವನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಾರದೇ ಆಹಾರ ಕಿಟ್ ವಿತರಣೆಯಾಗಿರುವುದು, ಕಾರ್ಮಿಕ ಇಲಾಖೆಗೂ ಮತ್ತು ಕಾರ್ಮಿಕರ ಆಹಾರ ಕಿಟ್ಟಿಗೂ ಸಂಬಂಧವಿಲ್ಲದೇ ವಿತರಣೆಯಾಗಿರುವುದು ಆಶ್ಚರ್ಯಕರ ಎಂದಿದ್ದಾರೆ.
ಸಂಕಷ್ಟದಲ್ಲಿರುವ ನೋಂದಾಯಿತ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸದೇ ಕಾರ್ಮಿಕರ ಮಂಡಳಿ ಕಾರ್ಮಿಕರ ನಿಧಿಯಿಂದ ಆಹಾರ ಕಿಟ್ ಸಾರಸಗಟಾಗಿ ಸಾರ್ವಜನಿಕರಿಗೆ ವಿತರಣೆ ಮಾಡಿ ಕಾರ್ಮಿಕರ ವಿರೋಧಿ ನೀತಿ ಪ್ರದರ್ಶಿಸಿದ್ದಲ್ಲದೇ, ಕಾರ್ಮಿಕ ಕಲ್ಯಾಣ ಮಂಡಳಿಯ ನಿಧಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ. ಜಿಲ್ಲೆಯಲ್ಲಿ ಇಲಾಖೆಯಲ್ಲಿ ನೋಂದಾಯಿತ 65,371 ಸದಸ್ಯರಿದ್ದು, ಜಿಲ್ಲಾ ಕಚೇರಿಯಿಂದ 18,528 ಹಾಗೂ ಮಂಡಳಿಯಿಂದ 9,355 ಒಟ್ಟು 27,883 ನೋಂದಾಯಿತ ಕಾರ್ಮಿಕರಿಗೆ ಹಣ ಸಂದಾಯಕ್ಕೆ ಬ್ಯಾಂಕಿಗೆ ಪಾವತಿಸಲು ಇಲಾಖೆಯಿಂದ ನೋಂದಾಯಿತ ಕಾರ್ಮಿಕರ ಪಟ್ಟಿ ನೀಡಿದ್ದು ಇರುತ್ತದೆ. ಅಲ್ಲದೇ ಇದರ ಜೊತೆಯಲ್ಲಿ 26,389 ಕಾರ್ಮಿಕರಿಗೆ ಆಧಾರ ಸಂಖ್ಯೆ ಮೇರೆಗೆ ನೇರವಾಗಿ ಬೆಂಗಳೂರಿನ ಮಂಡಳಿಯಿಂದ ಸಹಾಯಧನ ಜಮೆ ಮಾಡಲಾಗಿದೆ ಎಂದು ಇಲಾಖೆ ನೀಡಿದ ಮಾಹಿತಿಯಲ್ಲಿ ಉಲ್ಲೇಖೀಸಲಾಗಿದೆ. ನೀಡಿದ ಮಾಹಿತಿ ಮತ್ತು ವಾಸ್ತವ್ಯಕತೆಗೆ ಸರಿಹೊಂದದೇ ಇಂದಿಗೂ ಜಿಲ್ಲೆಯಲ್ಲಿ ಹತ್ತು ಸಾವಿರಕ್ಕಿಂತ ಮಿಗಿಲಾದ ನೋಂದಾಯಿತ ಕಾರ್ಮಿಕರ ಖಾತೆಗೆ ಸಹಾಯಧನ ಸಂದಾಯವಾಗದೇ ಇರುವುದು ವಿಷಾದಕರ. ಕಷ್ಟಕಾಲದಲ್ಲಿ ಕಾರ್ಮಿಕರಿಗೆ ಸಹಾಯವಾಗಬೇಕಿದ್ದ ಸರಕಾರವು ಸಹಾಯಧನ ವಿತರಣೆಯಲ್ಲಿ ಗೋಂದಲ ಉಂಟು ಮಾಡಿದೆ ಎಂದು ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.