ಮೈಸೂರು: ವರುಣಾ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಹಿಂದೆಂದೂ ಆಗದಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಮಾಡಿದ ಕೆಲಸಕ್ಕೆ ಈ ಚುನಾವಣೆಯಲ್ಲಿ ಮತ ನೀಡುವ ಮೂಲಕ ಕೂಲಿ ಕೊಡಿ ಎಂದು ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.
ಗುರುವಾರ ವರುಣಾ ಕ್ಷೇತ್ರದ ಕಿರಗಸೂರು ಪಂಚಾಯ್ತಿ ವ್ಯಾಪ್ತಿಯ ಡಣಾಯಕನಪುರ, ಮನ್ನೇಹುಂಡಿ, ಕೂಡೂರು, ಬಿಳಿಗೆರೆಹುಂಡಿ, ಹುಣಸೂರು ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿ ಮಾತನಾಡಿದರು. ದೇಶದ ಶೇ.70 ಸಂಪತ್ತು ಶೇ.1 ಶ್ರೀಮಂತರ ಕೈಯಲ್ಲಿದ್ದು,
ಶ್ರೀಮಂತರು ಶ್ರೀಮಂತರಾಗೇ ಇದ್ದು, ಬಡವರು ಬಡವರಾಗಿಯೇ ಇದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಬಡವರಿಗಾಗಿ ಏನಾದರೂ ಕಾರ್ಯಕ್ರಮ ನೀಡಿದೆಯೇ? ಕರ್ನಾಟಕದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಹರಕಲು ಸೀರೆ, ಮುರುಕಲು ಸೈಕಲ್ ಬಿಟ್ಟರೆ ಏನನ್ನಾದರೂ ಕೊಟ್ಟಿತ್ತೆ? ಎಂದು ಪ್ರಶ್ನಿಸಿದರು.
ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರಿಗೆ, ಪರಿಶಿಷ್ಟ ಜಾತಿ, ಪಂಗಡದವರಿಗೆ, ರೈತರು, ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ, ಅಲ್ಪ ಸಂಖ್ಯಾತರಿಗೆ ಪ್ರತಿಯೊಂದು ವರ್ಗಕ್ಕೂ ಕಾರ್ಯಕ್ರಮಗಳನ್ನು ನೀಡಿ ಇಡೀ ದೇಶವೇ ಕರ್ನಾಟಕದತ್ತ ನೋಡುವ ಹಾಗೆ ಮಾಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಕಾಂಗ್ರೆಸ್ಅನ್ನು ಬೆಂಬಲಿಸುವುದರೊಂದಿಗೆ ವರುಣಾ ಕ್ಷೇತ್ರದಲ್ಲಿ ತನಗೆ ಆಶೀರ್ವಾದ ಮಾಡಿ ಆಯ್ಕೆಮಾಡಬೇಕೆಂದು ಮನವಿ ಮಾಡಿದರು.
ಮುಖ್ಯಮಂತ್ರಿಗಳ ನಿವೃತ್ತ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ, ಜಿಪಂ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಂ, ಜಿಪಂ ಮಾಜಿ ಸದಸ್ಯರಾದ ರತ್ನಮ್ಮ, ಗೋಪಾಲರಾಜ್, ಕೆಂಪೀರಯ್ಯ, ಮಹಾದೇವ, ವರುಣಾ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಡಿ.ಆರ್.ಮೂರ್ತಿ, ಮರಳೂರು ಮಹೇಶ್, ಹುಣಸೂರು ಬಸವಣ್ಣ, ಮನ್ನೇಹುಂಡಿ ಮಹೇಶ್, ಸುಶೀಲಾ ಶ್ರೀಧರ್, ಪಟ್ಟೇಹುಂಡಿ ಕಲ್ಪನಾ, ಮಹಾದೇವಣ್ಣ ಇದ್ದರು.