ಗೌರಿಬಿದನೂರು: ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಇದರ ಬಗ್ಗೆ ರೈತರಿಗೆ ತಿಳವಳಿಕೆ ನೋಟಿಸ್ ನೀಡದೆ ಭೂಸ್ವಾಧೀನ ಪ್ರಕ್ರಿಯೆ ನಡೆಸದೆ ಪರಿಹಾರವೂ ನೀಡದೆ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರಜಾ ಸಂಘರ್ಷ ಸಮಿತಿ ಸಂಘಟನೆ ಜಿಲ್ಲಾ ಸಹ ಸಂಚಾಲಕ ಆರ್. ಎನ್.ರಾಜು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿ ನಲ್ಲಿ ಸುಮಾರು 92 ಎಕರೆಯಷ್ಟು ಭೂಮಿ ಈ ಯೋಜನೆಗೆ ಸ್ವಾಧಿನ ಪಡಿಸುಕೊಳ್ಳುತ್ತಿದ್ದು, ಇದಕ್ಕೆ ಪರಿಹಾರ ನೀಡದೆ ರೈತರಿಗೆ ಹೆದರಿಸಿ ಜಮೀನುಗಳಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಡಿ.ಪಾಳ್ಯ ಹೋಬಳಿಯ ಜೋಗಿರೆಡ್ಡಿ ಹಳ್ಳಿಯಲ್ಲಿ ನಡೆಯುತ್ತಿರುವ ಕಾಮಗಾರಿ ಸಾಕ್ಷಿಯಾಗಿದೆ.
ಪರಿಹಾರ ನೀಡದೆ ಕಾಮಗಾರಿ ಮಾಡುತ್ತಿರುವುದು ರೈತರಿಗೆ ಮಾಡುತ್ತಿರುವ ಮೋಸ ಇದಾಗಿದ್ದು, ಈ ಯೋಜನೆಯಿಂದ ಕೇವಲ ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಹಣ ಕಮಿಷನ್ ರೂಪದಲ್ಲಿ ಹೋಗುತ್ತಿದೆ. ಇದು ಒಂದು ಕಿಕ್‌ಬ್ಯಾಕ್ ಯೋಜನೆ ಯಾಗಿದ್ದು, ರೈತರು ಭೂಮಿ ಕಳೆದುಕೊಂಡು ಬೀದಿ ಪಾಲಾಗುತ್ತಾರೆ. ಪರಿಹಾರ ನೀಡದೆ ಯಾವುದೇ ಕಾರಣಕ್ಕೂ ಕಾಮಗಾರಿ ನಡೆಯಬಾರದು ಎಂಬ ವಾದ ನಮ್ಮದು. ಇದಕ್ಕಾಗಿ ಎಂಥ ಹೋರಾಟಕ್ಕೂನಾವು ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಶಾಸಕರಿಂದ ರೈತರಿಗೆ ಅನ್ಯಾಯ: ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವರು ಈ ಯೋಜನೆಯಿಂದ ತಾಲೂಕಿಗೆ ಅನುಕೂಲ ವಾಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಹೇಳುತ್ತಿದ್ದಾರೆ. ಈ ಹಿಂದೆ ಪವರ್ ಗ್ರೀಡ್ ಹೋರಾಟದಲ್ಲಿ ರೈತರಿಗೆ ಅನ್ಯಾಯವಾದಾಗ ಈ ಪ್ರೆಶ್ನೆ ಮಾಡಿದಾಗ ನೀವು ನ್ಯಾಯಲಯಕ್ಕೆ ಹೋಗಿ ಎಂದು ಬೇಜಾವಾಬ್ದಾರಿ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿ ಯಲ್ಲಿ ರೈತ ಮುಖಂಡರಾದ ಸಾಲಾರ್‌ಖಾನ್, ಚಿಗಟಗೇರೆ ಶ್ರೀನಿವಾಸ್ ಹಾಜರಿದ್ದರು.