Advertisement

ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಕಾಮಗಾರಿ; ಪ್ರಯಾಣಿಕರ ಪರದಾಟ

12:23 AM May 12, 2019 | Sriram |

ಉಡುಪಿ: ಮಣಿಪಾಲ 169ಎ ರಾ.ಹೆ. ಕಾಮಗಾರಿ ಸಾರ್ವಜನಿಕರ ಪಾಲಿಗೆ ಪರದಾಡುವಂತಾಗಿದೆ. ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ಇದ್ದ ಬಸ್‌ ನಿಲ್ದಾಣಗಳನ್ನು ತೆಗೆದು ಕಾಮಗಾರಿ ಮಾಡಿರುವುದರಿಂದ ಗೊಂದಲದ ಗೂಡಾಗಿದೆ.

Advertisement

ಬೇಕಾಬಿಟ್ಟಿ ನಿಲುಗಡೆ
ಚತುಷ್ಪಥ ರಸ್ತೆಯನ್ನಾಗಿ ಅಗಲೀಕರಣ ಮಾಡುವ ತರಾತುರಿಯಲ್ಲಿ ಇದ್ದ ಬಸ್‌ ನಿಲ್ದಾಣ ನೆಲಸಮ ಮಾಡಿರುವುದ‌ರಿಂದ ಉಡುಪಿ-ಮಣಿಪಾಲ ಮಾರ್ಗದ ಪ್ರಯಾಣಿಕರು ಎಲ್ಲೆಂದರಲ್ಲಿ ಬಸ್‌ಗಾಗಿ ನಿಲ್ಲುವಂತಾಗಿದೆ. ಇದರೊಂದಿಗೆ ಬಸ್‌ನವರೂ ಬೇಕಾಬಿಟ್ಟಿ ನಿಲುಗಡೆ ಮಾಡುತ್ತಿದ್ದಾರೆ.

ಸುರಕ್ಷತೆ ಇಲ್ಲ: ದೂರು
ರಸ್ತೆ ಅಗಲೀಕರಣ ಕಾಮಗಾರಿ ಅಕ್ಟೋಬರ್‌ 2018ರಲ್ಲಿ ಸುಮಾರು 98.46 ಕೋ.ರೂ ಅನುದಾನದಲ್ಲಿ ಆರಂಭಗೊಂಡಿತ್ತು. ಕಾಮಗಾರಿಯು ಆನೇಕ ಅಡೆತಡೆಗಳ ನಡುವೆಯು ಕುಂಟುತ್ತಾ ಸಾಗುತ್ತಿದೆ. ರಸ್ತೆ ಸುರಕ್ಷತಾ ಕ್ರಮವಹಿಸಿದ ಕಾಮಗಾರಿ ವಿರುದ್ಧ ಸಾರ್ವಜನಿಕರು ಪೊಲೀಸ್‌ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ.

ಪರ್ಯಾಯ ವ್ಯವಸ್ಥೆ ಬೇಕಿತ್ತು
ಯಾವುದೇ ಕಾಮಗಾರಿ ಪ್ರಾರಂಭಿಸುವ ಮುನ್ನ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಆದರೆ ಕಾಮಗಾರಿಯನ್ನು ಕೈಗೆತ್ತಿಕೊಂಡ ಗುತ್ತಿಗೆದಾರರು ಹಾಗು ಎಂಜಿನಿಯರ್‌ಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಬಸ್‌ ನಿಲ್ದಾಣವನ್ನು ಕಿತ್ತೆಸೆಸಿದ್ದಾರೆ. ಇದರಿಂದಾಗಿ ಸಾರ್ವಜನಿಕರು ರಸ್ತೆಯ ಎರಡು ಇಕ್ಕೆಲದಲ್ಲಿ ಉರಿಯುವ ಬಿಸಿಲಿನಲ್ಲಿ ನಿಂತು ಬಸ್‌ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ.

ಮಳೆಯಲ್ಲಿ ನಿಲ್ಲುವ ಪರಿಸ್ಥಿತಿ!
ಮುಂದಿನ 20 ದಿನಗಳಲ್ಲಿ ಮಳೆಯ ಆರಂಭವಾಗಲಿದೆ. ಅನಂತರ ಬಾಕಿ ಇರುವ ಕಾಮಗಾರಿಗಳು ನಿಧಾನವಾಗಲಿವೆ. ಇದೇ ವೇಳೆ ಪ್ರಯಾಣಿಕರು ಸೂಕ್ತ ನಿಲ್ದಾಣವಿಲ್ಲದೆ ಮಳೆಯಲ್ಲೇ ನಿಲ್ಲಬೇಕಾತ್ತದೆ.

Advertisement

ತಾತ್ಕಾಲಿಕ ವ್ಯವಸ್ಥೆ ಬೇಕು
ಎಂಜಿಎಂ ಕಾಲೇಜು, ಇಂದ್ರಾಳಿ ಶಾಲೆ, ಕಡಿಯಾಳಿ ಪ್ರದೇಶದಲ್ಲಿ ಶಾಲೆ ಹಾಗೂ ಕಾಲೇಜು ವಿದ್ಯಾಥಿಗಳ ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ಮಾಡುತ್ತಾರೆ. ಆದರಿಂದ ಪ್ರದೇಶದಲ್ಲಿ ತಾತ್ಕಲಿ ಶೆಡ್‌ ಹಾಕಿ ನಿಲ್ದಾಣ ನಿರ್ಮಿಸಬೇಕಾಗಿದೆ. ಮಣಿಪಾಲದಲ್ಲೂ ಬಸ್‌ ನಿಲುಗಡೆಗೆ ಸೂಕ್ತ ವ್ಯವಸ್ಥೆ, ವಾಹನ ದಟ್ಟನೆ ತಪ್ಪಿಸಲು ವ್ಯವಸ್ಥೆಗಳನ್ನು ಮಾಡಬೇಕಿದೆ.

ಟೈಗರ್‌ ಸರ್ಕಲ್‌ ಟ್ರಾಫಿಕ್‌ ಕಿರಿಕ್‌
ಟೈಗರ್‌ ಸರ್ಕಲ್‌ ಭಾಗದಲ್ಲಿ ಈಗ ಕಾಂಕ್ರಿಟೀಕರಣ ನಡೆಯುತ್ತಿರುವುದರಿಂದ ವಾಹನ ದಟ್ಟನೆಗೂ ಕಾರಣವಾಗಿದೆ. ಬಸ್‌ಗಳ ನಿಲುಗಡೆಗೂ ಸರಿಯಾದ ಜಾಗವಿಲ್ಲ. ಮಣಿಪಾಲದವರೆಗೆ ಬರುವ ಬಸ್‌ಗಳು ಸರ್ಕಲ್‌ನಲ್ಲಿ ತಿರುಗುವ ಯತ್ನ, ಅತ್ತ ಕಾರ್ಕಳದಿಂದ ಬರುವ ಬಸ್‌ಗಳ ಧಾವಂತ, ಇತರ ವಾಹನಗಳ ಸವಾರರು ನುಗ್ಗಿಕೊಂಡು ಹೋಗುತ್ತಿರುವುದರಿಂದ ಪಾದಚಾರಿಗಳು ರಸ್ತೆ ದಾಟುವುದು ಕಷ್ಟವಾಗಿದೆ. ಯಾರು ಎಲ್ಲಿಗೆ ಹೋಗುತ್ತಿದ್ದಾರೆ ಎನ್ನುವುದೇ ತಿಳಿಯದಾಗಿದೆ. ಇಲ್ಲಿ ಪೊಲೀಸರು, ಟ್ರಾಪಿಕ್‌ ನಿಯಂತ್ರಕರು ಇದ್ದರೂ ನಿಯಮ ಪಾಲನೆ ಮಾಡದಿರುವುದರಿಂದ ನಿಭಾಯಿಸುವುದು ಕಷ್ಟವಾಗಿದೆ.

ಪ್ರಯಾಣಿಕರ ನಿದ್ದೆಗೆಡಿಸಿದೆ
ಉಡುಪಿ- ಮಣಿಪಾಲ ಮಾರ್ಗದ ಬಸ್‌ ಹಿಡಿಯೋದು ಬಹಳ ಕಷ್ಟವಾಗಿದೆ. ರಸ್ತೆಯಲ್ಲಿ ನಿಂತು ಸುಸ್ತಾಗಿ ನೆರಳು ಆಶ್ರಯಿಸಿದರೆ ಬಸ್‌ ತಪ್ಪಿ ಹೋಗುತ್ತಿದೆ. ಬಸ್‌ ಚಾಲಕರು ಸಹ ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿದ್ದಾರೆ.
– ಚಂದ್ರಕಲಾ ಭಟ್‌, ಪ್ರಯಾಣಿಕರು

ತಾತ್ಕಾಲಿಕ ಸೌಕರ್ಯ ಬೇಕು
ಪ್ರಯಾಣಿಕರಿಗೆ ಯಾವುದೇ ಮೂಲಭೂತ ವ್ಯವಸ್ಥೆ ಕಲ್ಪಿಸದೆ ಹಳೆ ಬಸ್‌ ನಿಲ್ದಾಣ ನೆಲಸಮ ಮಾಡಿದ್ದಾರೆ. ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ತಾತ್ಕಾಲಿಕ ಸೌಕರ್ಯ ಬೇಕು.
– ಶ್ರುತಿ,ವಿದ್ಯಾರ್ಥಿನಿ

Advertisement

Udayavani is now on Telegram. Click here to join our channel and stay updated with the latest news.

Next