ಹುಣಸೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕ ಆಸ್ಪತ್ರೆಯಲ್ಲಿ ಪಿಎಚ್‌ಸಿ ಕೇಂದ್ರಗಳ ವೈದ್ಯರನ್ನು ಕರ್ತವ್ಯಕ್ಕೆ ನಿಯೋಜಿಸಿ, ಬಡವರಿಗೆ ಸೇವೆ ಕಲ್ಪಿಸಬೇಕು ಎಂದು ಸಚಿವ ಎಚ್.ಟಿ.ಸೋಮಶೇಖರ್ ಸೂಚಿಸಿದರು.
ನಗರದ ಎ.ಸಿ.ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ವೈದ್ಯರ ಸೇವೆ ಅಗತ್ಯವಾಗಿದೆ. ಜಿಲ್ಲೆಯಲ್ಲಿ ಖಾಸಗಿ ವೈದ್ಯರು ಬಾಗಿಲು ತೆರೆಯದ ಬಗ್ಗೆ ದೂರಿದ್ದು, ಇವರಿಗೆ ನೊಟೀಸ್ ನೀಡಿ ಬಾರದಿದ್ದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ರೈತರು, ರೋಗಿಗಳ ವಾಹನಗಳನ್ನು ಓಡಾಡಲು ಅವಕಾಶ ನೀಡಬೇಕು. ಮುಂದೆ ರೈತರಿಗೆ ಹಸಿರು ಕಾರ್ಡ್ ವಿತರಿಸುವ ಚಿಂತನೆ ಇದೆ. ಈಗಾಗಲೇ ವಶಪಡಿಸಿಕೊಂಡಿರುವ ವಾಹನಗಳ ಬಗ್ಗೆ ಸಾಕಷ್ಟು ದೂರುಗಳಿದ್ದು, ವಶಕ್ಕೆ ಪಡೆದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ತರಕಾರಿ ಸಾಗಣೆಗೆ ತೊಂದರೆ ನೀಡಬೇಡಿ: ಸಾಮಾನ್ಯರ ಅಗತ್ಯ ವಸ್ತುಗಳು ಹಾಗೂ ತರಕಾರಿ ಸಾಗಣೆಗೆ ತೊಂದರೆ ನೀಡಬೇಡಿ, ಮೈಸೂರಿನಿಂದ ಮಂಗಳೂರಿನವರೆಗೂ ತರಕಾರಿ ಮಾರಾಟಕ್ಕೆ ಎಪಿಎಂಸಿಯವರೊಂದಿಗೆ ಚರ್ಚಿಸಿ, ಕ್ರಮವಹಿಸಬೇಕು. ಎಪಿಎಂಸಿಗೆ ಬರುವ ರೈತರಿಗೆ ಮಾಸ್ಕ್ ವಿತರಿಸಬೇಕು. ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಹೊರಗಿನಿಂದ ವೈದ್ಯರು ಬರದಂತಾಗಿದೆ. ಡಯಾಲಿಸೀಸ್ ಮಾಡಿಸಲು ಪಾಸ್‌ಗಾಗಿ ಪರದಾಡುತ್ತಿದ್ದಾರೆ. ತರಕಾರಿ ಮಾರಿ ಊರಿಗೆ ಹೋಗುವವರ ವಾಹನವನ್ನು ಪೊಲೀಸರು ಹಿಡಿದಿದ್ದು, ಇದರಲ್ಲೂ ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿದರು.
ಸಭೆಯಲ್ಲಿ ಮಾಜಿ ಮಂತ್ರಿ ಎಚ್. ವಿಶ್ವನಾಥ್, ಎಸ್‌ಪಿ ರಿಶ್ಯಂತ್, ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಚಂದ್ರಶೇಖರ್, ಪೌರಾಯುಕ್ತ ಮಂಜುನಾಥ್, ಡಿವೈಎಸ್‌ಪಿ ಸುಂದರರಾಜ್, ಉಪವಿಭಾಗಾಧಿಕಾರಿ ವೀಣಾ, ತಹಶೀಲ್ದಾರ್ ಬಸವರಾಜ್, ಇಒ ಗಿರೀಶ್, ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ತಾಪಂ ಅಧ್ಯಕ್ಷೆ ಪದ್ಮಮ್ಮ, ವೃತ್ತ ನಿರೀಕ್ಷಕ ಪೂವಯ್ಯ, ಹರಾಜು ಮಾರುಕಟ್ಟೆ ಅಧಿಕಾರಿಗಳಾದ ಆರ್. ಎಂ.ಒ.ಮಂಜುರಾಜ್, ಅರಸ್, ಅಧೀಕ್ಷಕ ವೀರಭದ್ರ ನಾಯ್ಕ ಹಾಜರಿದ್ದರು.