Advertisement

ಕೆಎಫ್‌ಡಿ ತಡೆಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಿ

06:22 PM Oct 07, 2020 | Suhan S |

ಶಿವಮೊಗ್ಗ: ಮಂಗನ ಕಾಯಿಲೆ ಹರಡದಂತೆ ತಡೆಯಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ತಿಳಿಸಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಮಂಗನ ಕಾಯಿಲೆ ನಿಯಂತ್ರಣಕ್ಕಾಗಿಅಂತರ್‌ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಸಾಲಿನಲ್ಲಿ 5128 ಶಂಕಿತ ಮಂಗನ ಕಾಯಿಲೆ ಪ್ರಕರಣಗಳ ಪೈಕಿ 185 ಪ್ರಕರಣಗಳಲ್ಲಿ ಕೆಎಫ್‌ಡಿ ದೃಢಪಟ್ಟಿದೆ. ಇದರಲ್ಲಿ ತೀರ್ಥಹಳ್ಳಿ ತಾಲೂಕು 147, ಸಾಗರ 37 ಮತ್ತು ಶಿವಮೊಗ್ಗ ತಾಲೂಕಿನಲ್ಲಿ ಒಂದು ಪ್ರಕರಣ ದೃಢಪಟ್ಟಿದ್ದು, ಮೃತಪಟ್ಟ ಎರಡು ಮಂಗಗಳಲ್ಲಿ ಪಾಸಿಟಿವ್‌ ದೃಢಪಟ್ಟಿದೆ. ಶೇ.79 ಪ್ರಕರಣಗಳು ತೀರ್ಥಹಳ್ಳಿ ತಾಲೂಕಿನಲ್ಲಿಹಾಗೂ ಶೇ.20 ಪ್ರಕರಣಗಳುಸಾಗರ ತಾಲೂಕಿನಲ್ಲಿ ವರದಿಯಾಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಶ ಸುರಗಿಹಳ್ಳಿ ಅವರು ಮಾಹಿತಿ ನೀಡಿದರು.

ಲಸಿಕೆ ಪಡೆಯಬೇಕು: ಮಂಗನ ಕಾಯಿಲೆ ಹರಡುವ ಸಾಧ್ಯತೆ ಇರುವ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಎಲ್ಲರಿಗೂ ಲಸಿಕೆ ಹಾಕಬೇಕು. ಒಟ್ಟು ಮೂರು ಡೋಸ್‌ ಲಸಿಕೆ ಹಾಕಲಾಗುತ್ತಿದ್ದು, ಎಲ್ಲಾಮೂರು ಡೋಸ್‌ಗಳನ್ನು ಸಹ  ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು. ಕಳೆದ ವರ್ಷ ಮೂರು ಡೋಸ್‌ ತೆಗೆದುಕೊಂಡ ಯಾವುದೇ ಪ್ರಕರಣಗಳಲ್ಲಿ ಸಾವು ಸಂಭವಿಸಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು. ಪ್ರಸ್ತುತ 32500 ಲಸಿಕೆ ಹಾಗೂ 35ಸಾವಿರ ಡಿಎಂಪಿ ತೈಲ ಲಭ್ಯವಿದ್ದು, ಅಗತ್ಯವಿರುವಷ್ಟು ಲಸಿಕೆ ಹಾಗೂ ತೈಲವನ್ನು ತರಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಮನೆ- ಮನೆ ಸಮೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಜಾನುವಾರುಗಳಿಗೆ ಲಸಿಕೆ: ಮಂಗನ ಕಾಯಿಲೆ ಹರಡುವ ಸಾಧ್ಯತೆಗಳಿರುವ ವ್ಯಾಪ್ತಿಯ ಎಲ್ಲಾ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ಹಾಕಬೇಕು. ಈಗಾಗಲೇ ಒಂದು ಹಂತ ಲಸಿಕೆ ಹಾಕಲಾಗಿದ್ದು, ನವೆಂಬರ್‌ ತಿಂಗಳಿನಲ್ಲಿ ಎರಡನೇ ಹಂತದ ಲಸಿಕೆ ಹಾಕಬೇಕು.ಜಾನುವಾರುಗಳನ್ನು ಮೇಯಲು ಕಾಡಿಗೆ ಬಿಡಬಾರದು. ಜಾನುವಾರುಗಳನ್ನು ಪ್ರತಿದಿನ ತೊಳೆಯಬೇಕು ಎಂದು ಅವರು ಹೇಳಿದರು.

Advertisement

ಪ್ರವೇಶ ನಿರ್ಬಂಧ: ಕಳೆದ ವರ್ಷ ಕೆಲವು ನಿಗದಿತ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ನವೆಂಬರ್‌ನಿಂದ ಮೇ ಅವ ಯಲ್ಲಿ ಅರಣ್ಯದೊಳಗೆ ಪ್ರವೇಶವನ್ನು ನಿರ್ಬಂಧಗೊಳಿಸಲಾಗಿತ್ತು. ಮಂಗನ ಕಾಯಿಲೆ ಮೂರು ಲಸಿಕೆ ಪಡೆದಿರುವ ಬಗ್ಗೆ ದೃಢೀಕರಣ ಪಡೆದಿರುವವರನ್ನು ಮಾತ್ರ ಈ ಬಾರಿಯೂ ಅರಣ್ಯ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಅರಣ್ಯ ಪ್ರದೇಶದಲ್ಲಿ ಮಂಗ ಸತ್ತಿರುವುದು ಕಂಡು ಬಂದ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಹಾಗೂ ಪಿಡಿಒಗೆ ಮಾಹಿತಿ ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಡಾ| ಪಲ್ಲವಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಮೂಲಸೌಕರ್ಯ ಕಲ್ಪಿಸಿ :  ತಾಲೂಕು ಮಟ್ಟದಲ್ಲಿ ಸಹ ಅಂತರ್‌ ಇಲಾಖಾ ಸಮನ್ವಯ ಸಮಿತಿ ರಚಿಸಿ ಸಭೆ ನಡೆಸಬೇಕು. ಮಂಗನ ಕಾಯಿಲೆ ಕಾಣಿಸಿಕೊಳ್ಳುವ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಟ ಸೌಲಭ್ಯ ಸಜ್ಜುಗೊಳಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೆಎಫ್‌ಡಿ ವಾರ್ಡ್‌ ಸಜ್ಜುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next