Advertisement

ಕಾಮಗಾರಿ ತ್ವರಿತಕ್ಕೆ ಒತ್ತಾಯ

03:03 PM Jan 09, 2018 | |

ರಾಯಚೂರು: ನಗರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಅನೇಕ
ವರ್ಷಗಳು ಮುಗಿಸದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಕಾಮಗಾರಿಗಳನ್ನು ಮುಗಿಸಬೇಕು ಎಂಬುದು ಸೇರಿ ಅನೇಕ ವಿಷಯಗಳ ಕುರಿತು ಬಿಜೆಪಿ ಮುಖಂಡರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ನಗರ ಜಿಲ್ಲಾ ಕೇಂದ್ರವಾಗಿದ್ದು, ನಿತ್ಯ ಸಾವಿರಾರು ಜನ ವಿವಿಧ ಕಾರ್ಯಗಳ ನಿಮಿತ್ತ ನಗರಕ್ಕೆ ಬರುತ್ತಾರೆ. ಮೂರು ಲಕ್ಷಕ್ಕೂ ಅಧಿಕ ಜನ ಇಲ್ಲಿ ವಾಸಿಸುತ್ತಿದ್ದು, ಆದರೆ, ಸೂಕ್ತ ಸೌಲಭ್ಯಗಳೇ ಸಿಗದಾಗಿದೆ ಎಂದು ದೂರಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರೋತ್ಥಾನ ಯೋಜನೆಯಡಿ 75 ಕೋಟಿ ರೂ. ಅನುದಾನ ನೀಡಲಾಗಿತ್ತು.
ಆದರೆ, ಈವರೆಗೆ ಬಳಸಿಲ್ಲ. ಯಾವೊಂದು ಕಾಮಗಾರಿ ನಿರ್ದಿಷ್ಟ ಅವಧಿಯಲ್ಲಿ ಮುಗಿಸಲು ಕಾಲಾವಕಾಶವೇ ನೀಡಿಲ್ಲ.
ಕೈಗೊಂಡ ಕಾಮಗಾರಿಗಳು ಕಳಪೆ ಗುಣಮಟ್ಟದಲ್ಲಿ ನಿರ್ವಹಿಸುತ್ತಿದ್ದರೂ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ
ವಿಫಲವಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದರು. 

ನಗರದಲ್ಲಿ ಯುಜಿಡಿ ಕಾಮಗಾರಿ ಆರಂಭಿಸಿ ಅನೇಕ ವರ್ಷ ಕಳೆದರೂ ಇನ್ನೂ ಮುಗಿಸಿಲ್ಲ. ಯೋಜನೆ ಸ್ಪಷ್ಟತೆ ಕುರಿತು ಜನರಿಗೆ ತಿಳಿಸಬೇಕು. ನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಸುವ ಕಾಮಗಾರಿ ಕೂಡ ಇನ್ನೂ ಆಮೆವೇಗದಲ್ಲಿ ನಡೆಯುತ್ತಿದೆ. ಕಾಮಗಾರಿಗಳ ವಿಳಂಬಕ್ಕೆ ಕಾರಣಗಳನ್ನು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿದ್ದ ಅನುದಾನ ಬಳಸಿಲ್ಲ. ಆರ್‌ಟಿಪಿಎಸ್‌ ಆರಂಭದಿಂದಲೂ ಜಿಲ್ಲೆಗೆ ನಿರಂತರ ವಿದ್ಯುತ್‌ ಪೂರೈಸಬೇಕು ಎಂಬ ಬೇಡಿಕೆ ಇದೆ. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಬೇಕು. ನಗರದ ಕೆಲ ರಸ್ತೆಗಳ ವಿಸ್ತರಣೆಗೆ ಮಾಸ್ಟರ್‌ ಪ್ಲ್ಯಾನ್‌ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಈ ಬಗ್ಗೆ ಸ್ಪಷ್ಟ ಕಾರಣ ನೀಡಬೇಕು ಎಂದು ಆಗ್ರಹಿಸಿದರು. ಮಾಜಿ ಶಾಸಕ ಎ.ಪಾಪಾರೆಡ್ಡಿ, ನಗರ ಘಟಕ ಅಧ್ಯಕ್ಷ ಯು.ದೊಡ್ಡಮಲ್ಲೇಶ, ಅಶೋಕ ಗಸ್ತಿ, ಮಾಜಿ ಶಾಸಕ ಬ್ಯಾಗವಾಟ್‌ ಬಸನಗೌಡ, ಬಸವರಾಜ ಕಳಸ, ರವೀಂದ್ರ ಜಲ್ದಾರ್‌, ಕಡಗೋಳ ರಾಮಚಂದ್ರ, ಆರ್‌. ಕೆ.ಅಮರೇಶ, ಎ.ಚಂದ್ರಶೇಖರ, ಗುಡ್ಸಿ ನರಸರೆಡ್ಡಿ, ಡಾ| ಬಸವನಗೌಡ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next