Advertisement

ಕಾರ್ಮಿಕ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ

03:20 PM May 02, 2018 | |

ಹುಣಸೂರು: ನಗರದಲ್ಲಿ ವಿಶ್ವ ಕಾರ್ಮಿಕ ದಿನದ ಅಂಗವಾಗಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಮಿಕರು ಮೆರವಣಿಗೆ ನಡೆಸಿದರು. ನಗರದ ಮುನೇಶ್ವರ ಕಾವಲ್‌ ಮೈದಾನದಿಂದ ಹೊರಟ ಮೆರವಣಿಗೆಯಲ್ಲಿ ಕನಿಷ್ಠವೇತನ ಜಾರಿಗೊಳ್ಳಲಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ, ಎಲ್ಲ ನೌಕರರನ್ನು ಕಾಯಂಗೊಳಿಸಿ, ಕಾರ್ಮಿಕರ ಹಕ್ಕುಗಳನ್ನು ರಕ್ಷಣೆ ಮಾಡಿ ಎಂಬಿತ್ಯಾದಿ ಘೋಷಣೆ ಮೊಳಗಿಸಿದರು.

Advertisement

ಆನಂತರ ಬಸ್‌ ನಿಲ್ದಾಣದ ಮುಂಭಾಗದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು. ನಗರಸಭೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಸಿಐಟಿಯು ತಾಲೂಕು ಅಧ್ಯಕ್ಷ ಬಸವರಾಜು ವಿ.ಕಲ್ಕುಣಿಕೆ ಮಾತನಾಡಿ, ನರೇಂದ್ರ ಮೋದಿ ಸರಕಾರ ಬಂದ ನಂತರ ಕಾರ್ಮಿಕ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ.

ಮಾಲಿಕರೊಂದಿಗೆ ಶಾಮೀಲಾಗಿ ಕಾರ್ಮಿಕರ ನ್ಯಾಯಯುತ ಹಕ್ಕುಗಳನ್ನು ಪಡೆಯದಂತೆ ಹುನ್ನಾರ ನಡೆಸುತ್ತಿದೆ. ಖಾಸಗಿ ಕಂಪನಿ ಮಾಲಿಕರಿಗೆ ಆದ್ಯತೆ ನೀಡಿ ಕಾರ್ಮಿಕರನ್ನು ಅತಂತ್ರ ಸ್ಥಿತಿಗೆ ತಳ್ಳುತ್ತಿದೆ. ಕನಿಷ್ಠ ಕಾರ್ಮಿಕ ವೇತನ ಜಾರಿಗೊಳಿಸುವಲ್ಲಿ ಹಾಗೂ ಕಾಯಂಗೊಳಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫ‌ಲಗೊಂಡಿವೆ. ಬೃಹತ್‌ ಕಂಪನಿ ಮಾಲಿಕರ ಪರವಾಗಿ ಕಾನೂನು ಜಾರಿಗೆ ತಂದು ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.

ಸಿಪಿಐ(ಎಂ) ತಾಲೂಕು  ಕಾರ್ಯದರ್ಶಿ ವಕೀಲ ಜಗದೀಶ್‌ ಸೂರ್ಯ ಮಾತನಾಡಿ, ಕಳೆದ 40 ವರ್ಷಗಳಿಂದ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತರನ್ನು ಹಾಗೂ 10 ವರ್ಷಗಳಿಂದ ಬಿಸಿಯೂಟ ಕೆಲಸ ಮಾಡುತ್ತಿರುವ ನೌಕರರಿಗೆ ಕನಿಷ್ಠ ವೇತನವನ್ನೂ ನೀಡದೆ ಸರಕಾರಗಳು ಅನ್ಯಾಯವೆಸಗುತ್ತಿವೆ. ಈಗಲಾದರೂ ಎಚ್ಚೆತ್ತುಕೊಂಡು ಅವರನ್ನು ಕಾಯಂ ಮಾಡಬೇಕೆಂದು ಒತ್ತಾಯಿಸಿದರು.

ಕಾರ್ಮಿಕ ದಿನಾಚರಣೆಯಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಮಂಗಳಗೌರಿ, ಕಾರ್ಯದರ್ಶಿ ಪುಷ್ಪ, ಪಂಚಾಯ್ತಿ ನೌಕರರ ಸಂಘದ ಅಧ್ಯಕ್ಷ ದಿನೇಶ್‌, ಮುನಿಸ್ವಾಮಿ, ಆರುಗಂ, ಬಿಸಿಯೂಟ ನೌಕರರ ಸಂಘದ ಮೀನಾ, ಮಂಜುಳ, ಮಾರಿಸ್ಪಿನ್ನರ್ ಕಾರ್ಖಾನೆ ನೌಕರರ ಸಂಘದ ಹಂಸ, ಮಲ್ಲಿಕಾರ್ಜುನ್‌, ಸುರೇಶ್‌, ಪ್ರಾಂತ ರೈತ ಸಂಘದ ಸಿದ್ದೇಗೌಡ, ಚಿಕ್ಕಣ್ಣೇಗೌಡ, ಡಿವೈಎಫ್ಐ ಮಹೇಶಕುಮಾರ್‌, ಎಸ್‌ಎಫ್ಐ ಕುಮಾರಸ್ವಾಮಿ ಮತ್ತಿರರು ಭಾಗವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next