Advertisement

ಕಾರ್ಮಿಕರಿಗೆ ಶಕ್ತಿ ತುಂಬುವ ಕೆಲಸ ಮಾಡಿ

02:29 PM Aug 02, 2022 | Team Udayavani |

ಜೇವರ್ಗಿ: ಕಟ್ಟಡ ಹಾಗೂ ಅಸಂಘಟಿತ ವಲಯಗಳ ಕಾರ್ಮಿಕರು ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಸರ್ಕಾರದ ಸೌಲಭ್ಯ ಪಡೆಯಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ ಭವಿಷ್ಯ ರೂಪಿಸಬೇಕು ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.

Advertisement

ಪಟ್ಟಣದ ಕನ್ನಡ ಭವನದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಯೂನಿಯನ್‌ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತದಲ್ಲಿ ಅಣ್ಣ ಬಸವಣ್ಣ ಕಾಯಕದ ಮಹತ್ವ ಎತ್ತಿ ಹಿಡಿದಿದ್ದು, ಅನೇಕ ಜನ ಮಹನೀಯರು ಕಾರ್ಮಿಕರ ಹಿತಕ್ಕಾಗಿ ಧ್ವನಿ ಎತ್ತಿ ಕಾನೂನುಗಳ ಜಾರಿಗೆ ಕಾರಣರಾಗಿದ್ದಾರೆ. ಕಾಯಕದಲ್ಲಿ ಕೈಲಾಸ ಕಾಣುವವರು ಕಾರ್ಮಿಕರು. ಕಾರ್ಮಿಕರು ಕಳಂಕ ರಹಿತ ಜೀವನ ಸಾಗಿಸುವವರು. ಅವರಿಲ್ಲದೇ ಬದುಕು ನಡೆಸುವುದು ಅಸಾಧ್ಯ. ಸರ್ಕಾರಿ ಸೌಲಭ್ಯ ಪಡೆಯಲು ಕಡ್ಡಾಯವಾಗಿ ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಬೇಕು. ಕಾರ್ಮಿಕ ಬಂಧುಗಳೇ ನಿಮ್ಮ ಮಕ್ಕಳನ್ನು ಕೂಲಿಗೆ ಕಳಸದೇ ಶಾಲೆಗೆ ಕಳುಹಿಸಿ ಭವಿಷ್ಯ ರೂಪಿಸಬೇಕು. ಕಟ್ಟಡ ಹಾಗೂ ಅಸಂಘಟಿತ ಹಾಗೂ ಕಾರ್ಖಾನೆಗಳ ಕಾರ್ಮಿಕರ ಕಲ್ಯಾಣಕ್ಕಾಗಿ ಮೂರು ಪ್ರತ್ಯೇಕ ಮಂಡಳಿಗಳ ಮೂಲಕ ಕಾರ್ಮಿಕ ಇಲಾಖೆಯು ಕಲ್ಯಾಣ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ. ಪ್ರಸಕ್ತ ಬಜೆಟ್‌ನಲ್ಲಿ ಮುಖ್ಯಮಂತ್ರಿಯವರು 100 ಶಿಶುಪಾಲನಾ ಕೇಂದ್ರಗಳ ಸ್ಥಾಪನೆ ಘೋಷಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಎದುರಿಸಿದ ಸಂಕಷ್ಟಗಳನ್ನು ಕಂಡು ದೇಶದ ಎಲ್ಲ ಕಾರ್ಮಿಕರ ದತ್ತಾಂಶ ಒಂದೆಡೆ ಸಿಗಲಿ ಎಂಬ ಉದ್ಧೇಶದಿಂದ ಇ-ಶ್ರಮ್‌ ಪ್ರೋಟಲ್‌ ಪ್ರಾರಂಭಿಸಲಾಗಿದೆ. ಎಲ್ಲ ಕಾರ್ಮಿಕರು ನೋಂದಾಯಿಸಿಕೊಳ್ಳಬೇಕು. ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಯೂನಿಯನ್‌ ತಾಲೂಕು ಘಟಕದ ಪದಾಧಿಕಾರಿಗಳು ತಾಲೂಕಿನ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುವುದರ ಜತೆಗೆ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಶರಣಮ್ಮ ತಳವಾರ ಉದ್ಘಾಟಿಸಿದರು. ಇದೇ ವೇಳೆ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಕಾರ್ಮಿಕರಿಗೆ ಕಿಟ್‌ ಗಳನ್ನು ನರಿಬೋಳ ವಿತರಣೆ ಮಾಡಿದರು. ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಯೂನಿಯನ್‌ ಕಾರ್ಯಾಧ್ಯಕ್ಷ ದೇವೀಂದ್ರ ತಳವಾರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಧ್ಯಕ್ಷ ಮಂಜುನಾಥ ಗುತ್ತೇದಾರ ನೇತೃತ್ವ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜೆಡಿಎಸ್‌ ಮುಖಂಡ ವಿಜಯಕುಮಾರ ಹಿರೇಮಠ, ಚಂದ್ರಶೇಖರ ಸೀರಿ, ಕಾರ್ಮಿಕ ನಿರೀಕ್ಷಕ ಪ್ರಸನ್ನಕುಮಾರ, ಅಂಜನಾ ರಾಠೊಡ, ಮಾಳಪ್ಪ ಪೂಜಾರಿ, ಭೀಮಾಶಂಕರ ಜನಿವಾರ, ರಾಜು ರದ್ಧೇವಾಡಗಿ, ನಿಂಗಪ್ಪ ದೇವಣಗಾಂವ, ಕಸಾಪ ಅಧ್ಯಕ್ಷ ಎಸ್‌. ಕೆ. ಬಿರಾದಾರ, ಮಲ್ಲಿಕಾರ್ಜುನ ಗಂವ್ಹಾರ, ರವಿಚಂದ್ರ ಗುತ್ತೇದಾರ, ಶರಣಪ್ಪ ನೇರಡಗಿ, ಪರಮೇಶ್ವರ ಬಿರಾಳ, ಬಸವರಾಜ, ಮರೆಪ್ಪ ಖಂಡಾಳಕರ್‌, ನಾಗರಾಜ ಮೋರ್ಕಂಡೆ, ಭಾಗೇಶ ಹೋತಿನಮಡು ಆಗಮಿಸಿದ್ದರು. ಸಂಘದ ಉಪಾಧ್ಯಕ್ಷ ಶಿವಪ್ಪ, ಬಸವರಾಜ ಸಾಹು, ಮಡಿವಾಳಪ್ಪ ನಾಟೀಕಾರ, ಚಂದ್ರಕಾಂತ ಗಂವ್ಹಾರ, ಕಲ್ಲಪ್ಪ ಆಂದೋಲಾ, ಮೌನೇಶ ಬಿರಾಳ, ಗುರಪ್ಪ ಜೈನಾಪೂರ ಸೇರಿದಂತೆ ಮತ್ತೀತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next