Advertisement

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

11:30 AM Apr 19, 2024 | Team Udayavani |

ಬೆಂಗಳೂರು: ಅನೈತಿಕ ಸಂಬಂಧವೊಂದು ಇಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜೆ.ಪಿ.ನಗರದ ಸಾರಕ್ಕಿ ಪಾರ್ಕ್‌ನಲ್ಲಿ ಗುರುವಾರ ಸಂಜೆ ನಡೆದಿದೆ.

Advertisement

ಗೊರಗುಂಟೆಪಾಳ್ಯ ನಿವಾಸಿ ಸುರೇಶ್‌ (45) ಮತ್ತು ಜೆ.ಪಿ.ನಗರದ ಶಾಕಾಂಬರಿ ನಗರ ನಿವಾಸಿ ಅನುಷಾ (24) ಕೊಲೆ ಯಾದವರು.

ಗುರುವಾರ ಸಂಜೆ 4.15ಕ್ಕೆ ಸಾರಕ್ಕಿ ಪಾರ್ಕ್‌ನಲ್ಲಿ ಸುರೇಶ್‌, ಅನುಷಾಳಿಗೆ ಚಾಕು ಇರಿದುಕೊಂದರೆ, ಸುರೇಶ್‌ನನ್ನು ಅನುಷಾಳ ತಾಯಿ ಗೀತಾ ಸಿಮೆಂಟ್‌ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದಿದ್ದಾರೆ. ಘಟನೆ ಸಂಬಂಧ ಗೀತಾರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಗೊರಗುಂಟೆಪಾಳ್ಯ ನಿವಾಸಿ ಸುರೇಶ್‌ ಇವೆಂಟ್‌ ಮ್ಯಾನೆಜ್‌ಮೆಂಟ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಸಂಸ್ಥೆಯಲ್ಲಿ ಅನುಷಾ ಕೂಡ ಕೆಲಸ ಮಾಡುತ್ತಿದ್ದರು. ಸುರೇಶ್‌ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಈ ನಡುವೆ ಅನುಷಾ ಜತೆ ಸುರೇಶ್‌ಗೆ ಪ್ರೇಮಾಂಕುರವಾಗಿದ್ದು, ಇಬ್ಬರು ಕಳೆದ 5 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು.

ಇತ್ತೀಚೆಗೆ ಅನುಷಾ, ತನ್ನಿಂದ ಅಂತರ ಕಾಯ್ದುಕೊಳ್ಳುವಂತೆ ಸುರೇಶ್‌ಗೆ ಸೂಚಿಸಿ, ಕೆಲಸ ಕೂಡ ಬಿಟ್ಟಿದ್ದಳು. ಹೀಗಾಗಿ ಜೀವನ ನಿರ್ವಹಣೆಗಾಗಿ ಆಕೆ, ಮಕ್ಕಳ ಕೇರ್‌ ಟೆಕರ್‌ ಆಗಿ ಕೆಲಸ ಮಾಡಿಕೊಂಡಿದ್ದಳು. ಆದರೂ, ಸುರೇಶ್‌ ಆಗಾಗ್ಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದ. ಆಗಲೂ ಆಕೆ ಮತ್ತೂಮ್ಮೆ ಸಂಬಂಧ ಮುಂದುವರಿಸುವುದು ಬೇಡ. ಒಂದು ವೇಳೆ ಇದೇ ರೀತಿ ತೊಂದರೆ ಕೊಟ್ಟರೆ ಪೊಲೀಸ್‌ ಠಾಣೆಗೆ ದೂರು ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾಳೆ. ಆಗ ಆರೋಪಿ ಸಂಪರ್ಕ ಕಡಿತಗೊಳಿಸಿಕೊಳ್ಳಬೇಡ ಎಂದು ಮನವಿ ಮಾಡಿದ್ದ ಎಂದು ಪೊಲೀಸರು ಹೇಳಿದರು.

Advertisement

ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟಿದ್ದ: ಪ್ರೇಮಿಯ ಕಿರುಕುಳದಿಂದ ಬೇಸತ್ತಿದ್ದ ಅನುಷಾ ಬುಧವಾರ ಜೆ.ಪಿ.ನಗರ ಠಾಣೆಗೆ ಸುರೇಶ್‌ ವಿರುದ್ಧ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ಠಾಣೆಗೆ ಕರೆಸಿದ್ದ ಪೊಲೀಸರು, ಸುರೇಶ್‌ಗೆ ಮತ್ತೂಮ್ಮೆ ಅನುಷಾಗೆ ತೊಂದರೆ ಕೊಡಬೇಡ. ಒಂದು ವೇಳೆ ತೊಂದರೆ ಕೊಟ್ಟರೆ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದರು.

ಇತ್ತ ಮನೆಗೆ ತೆರಳಿದ್ದ ಅನುಷಾಗೆ ಕೆಲ ಹೊತ್ತಿನ ಬಳಿಕ ಕರೆ ಮಾಡಿದ ಸುರೇಶ್‌, ಕೊನೆಯದಾಗಿ ಮಾತಾಡಬೇಕು. ಸಾರಕ್ಕಿ ಪಾರ್ಕ್‌ಗೆ ಬರುವಂತೆ ಹೇಳಿದ್ದಾನೆ. ಇತ್ತ ಪುತ್ರಿಯ ವರ್ತನೆಯಿಂದ ಅನುಮಾನಗೊಂಡ ತಾಯಿ ಗೀತಾ, ಅನುಷಾ ಹಿಂದೆಯೇ ಬಂದಿದ್ದಾರೆ ಎಂದು ಪೊಲೀಸರು ಹೇಳಿದರು.

ಸಾರ್ವಜನಿಕವಾಗಿ ಜೋಡಿ ಕೊಲೆ: ಪಾರ್ಕ್‌ಗೆ ಬಂದ ಅನುಷಾ ಜತೆ ಸುರೇಶ್‌ ಮತ್ತೆ ದೂರವಾಗುತ್ತಿರುವ ವಿಚಾರ ಪ್ರಸ್ತಾಪಿಸಿ ಗಲಾಟೆ ಆರಂಭಿಸಿದ್ದಾನೆ. ಅದೇ ವೇಳೆ ಪಾರ್ಕ್‌ಗೆ ಬಂದ ಗೀತಾ, ಪುತ್ರಿಯ ಜತೆ ವಾಗ್ವಾದ ಮಾಡುತ್ತಿದ್ದ ಸುರೇಶ್‌ನನ್ನು ಪ್ರಶ್ನಿಸಿದ್ದಾರೆ. ಗಲಾಟೆ ವಿಕೋಪಕ್ಕೆ ಹೋದಾಗ, ಆರೋಪಿ ಕೃತ್ಯ ಎಸಗಲೆಂದ ತಂದಿದ್ದ ಚಾಕುವಿನಿಂದ ಅನುಷಾಗೆ ಐದಾರು ಬಾರಿ ಇರಿದು ಕೊಲೆಗೈದಿದ್ದಾನೆ. ಇತ್ತ ಪುತ್ರಿ ರಕ್ಷಣೆಗೆ ಧಾವಿಸಿದ ಗೀತಾಗೂ ಆರೋಪಿ ಇರಿಯಲು ಯತ್ನಿಸಿದ್ದಾನೆ. ಆದರೆ, ಆಕೆ ತಪ್ಪಿಸಿಕೊಂಡು, ಕಲ್ಲಿನಿಂದ ಸುರೇಶ್‌ ತಲೆಗೆ ಹೊಡೆದಿದ್ದಾರೆ. ಕೆಳಗೆ ಬಿದ್ದ ಸುರೇಶ್‌ ಮೇಲೆ ಕೋಪಗೊಂಡು ಸಿಮೆಂಟ್‌ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಹೆಚ್ಚು ವರಿ ಪೊಲೀಸ್‌ ಆಯುಕ್ತ ಸತೀಶ್‌ ಕುಮಾರ್‌, ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್‌ ಜಗಲಸರ ಹಾಗೂ ಇತರೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಗುರುವಾರ ಸಂಜೆ 4.15ರ ಸುಮಾರಿಗೆ ಸಾರಕ್ಕಿ ಪಾರ್ಕ್‌ನಲ್ಲಿ ಸುರೇಶ್‌ ಮತ್ತು ಅನುಷಾ ಎಂಬವರ ಕೊಲೆಯಾಗಿದೆ. ಸುರೇಶ್‌ ಮತ್ತು ಅನುಷಾನ ನಡುವೆ ಆತ್ಮೀಯತೆ ಇತ್ತು. ಇದೀಗ ಆಕೆ ಆತನಿಂದ ದೂರವಾಗಲು ಯತ್ನಿಸಿದಾಗ ಘಟನೆ ನಡೆದಿದೆ ಎಂಬುದು ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ. ●ಲೋಕೇಶ್‌ ಜಗಲಸರ, ದಕ್ಷಿಣ ವಿಭಾಗ ಡಿಸಿಪಿ.

Advertisement

Udayavani is now on Telegram. Click here to join our channel and stay updated with the latest news.

Next