ಬೆಂಗಳೂರು: ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮೇಯರ್ ಆರ್.ಸಂಪತ್‌ರಾಜ್ ತಿಳಿಸಿದರು.
ಶನಿವಾರ ಗಾಂಧಿನಗರದಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ, ರಸ್ತೆ ಡಾಂಬರೀಕರಣ ಕಾಮಗಾರಿ ಹಾಗೂ ಗುಂಡಿ ದುರಸ್ತಿ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ವೇಳೆ ಮೇಯರ್ ಅವರನ್ನು ಭೇಟಿ ಮಾಡಿದ ಸ್ಥಳೀಯ ಕಾಮಗಾರಿ ವಿಳಂಬದಿಂದಾಗಿ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ 129 ಕೋಟಿ ರೂ. ವೆಚ್ಚದಲ್ಲಿ 17 ರಸ್ತೆಗಳನ್ನು ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಈಗಾಗಲೇ ಶೇ.60 ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಕೆಲವು ಕಡೆ ಕಾಮಗಾರಿ ವಿಳಂಬ ಆಗಿರುವುದರಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ ಎಂದರು.
ಸ್ಥಳೀಯರ ಆಕ್ರೋಶ: ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ ನಡೆಸುವ ವೇಳೆ ಸ್ಥಳಿಯರು, ನಮ್ಮ ಮನೆಯ ಪಂಪ್‌ಗ್ಳಿಗೆ ಸ್ಯಾನಿಟರಿ ನೀರು ಸೇರುತ್ತಿದ್ದು, ನೀರು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಈಗಾಗದರೆ ನಾವು ಏನು ಮಾಡುವುದು. ಆ ಕಲುಷಿತ ನೀರನ್ನು ಹೇಗೆ ಬಳಸಲು ಸಾಧ್ಯ ಎಂದು ಕಿಡಿಕಾರಿದರು. ತ್ವರಿತವಾಗಿ ರಸ್ತೆ ಕಾಮಗಾರಿ ಮುಗಿಸಿ, ನಮ್ಮ ಸಮಸ್ಯೆಗೆ ಮುಕ್ತಿಕೊಡಿ ಎಂದು ಮನವಿ ಮಾಡಿಕೊಂಡರು.
ಆಗ ಮೇಯರ್ ಪಕ್ಕದಲ್ಲಿಯೇ ಇದ್ದ ಸಂಪ್ ನೀರಿನ ವಾಸನೆ ಗ್ರಹಿಸಿದಾಗ ದುರ್ವಾಸನೆ ಇರುವುದು ಕಂಡುಬಂತು. ಇದರಿಂದ ಕೆರಳಿದ ಮೇಯರ್, ಸಮಸ್ಯೆಗೆ ತಿಳಿದರೂ ಏಕೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.