ಕೊಪ್ಪಳ: ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕಾಲೇಜು ಶುಲ್ಕ ಕಟ್ಟಲಾಗದ ಕಷ್ಟದ ಪರಿಸ್ಥಿತಿಯಲ್ಲೂ ಎಟಿಎಂನಲ್ಲಿ ರಾತ್ರಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡೇ ಇಲ್ಲೊಬ್ಬ ವಿದ್ಯಾರ್ಥಿ ಸ್ನಾತಕೋತ್ತರ ಪದವಿಯಲ್ಲಿ ಬಳ್ಳಾರಿ ವಿಶ್ವವಿದ್ಯಾಲಯಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದಾನೆ. ಗಂಗಾವತಿ ತಾಲೂಕಿನ ಗುಂಡೂರು ಗ್ರಾಮದ ರಮೇಶ ಛಲವಾದಿ ಗಂಗಾವತಿಯ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದಲ್ಲಿ ಪ್ರಸಕ್ತ ವರ್ಷ ಬಳ್ಳಾರಿ ವಿವಿಗೆ ಮೊದಲ ರ್‍ಯಾಂಕ್ ಪಡೆದಿದ್ದಾನೆ.
ಕಿತ್ತು ತಿನ್ನುವ ಬಡತನದಲ್ಲೇ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಗುಂಡೂರಿನಲ್ಲಿ ಮುಗಿಸಿ, 10ನೇ ತರಗತಿ ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿದ್ದಾನೆ. ಪಿಯುಸಿಯಿಂದ ಪದವಿ, ಸ್ನಾತಕೋತ್ತರ ಪದವಿವರೆಗೂ ಗಂಗಾವತಿಯ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭ್ಯಾಸ ಮಾಡಿದ್ದಾನೆ. ಸ್ನಾತಕೋತ್ತರ ಪದವಿವರೆಗೂ ಶಾಲಾ, ಕಾಲೇಜಿನ ಶುಲ್ಕವನ್ನು ತಾನೇ ದುಡಿದು ಪಾವತಿಸಿದ್ದಾನೆ. ರಮೇಶನ ಮನೆಯಲ್ಲಿ 7 ಜನರಿದ್ದಾರೆ. ಆಸ್ತಿಯಿಲ್ಲ, ತಂದೆ-ತಾಯಿ ದುಡಿಮೆಯೂ ಇಲ್ಲ. ಮನೆಗೆ ಈತನೇ ಹಿರಿಯ ಮಗನಾದ್ದರಿಂದ ನಿತ್ಯದ ಜೀವನ ಈತನಿಂದಲೇ ನಡೆಯಬೇಕು. ತಂದೆ ಷಣ್ಮುಖಪ್ಪ ಆಗಿಷ್ಟು ಈಗಿಷ್ಟು ಹಮಾಲಿ
ಮಾಡುತ್ತಿದ್ದರು. ಅವರೊಂದಿಗೆ ಹಮಾಲಿ ಕೆಲಸ ಮಾಡುತ್ತಿದ್ದ ರಮೇಶ, ರಜೆ ದಿನದಲ್ಲಿ ಬೆಂಗಳೂರಿಗೆ ತೆರಳಿ ಸಿಮೆಂಟ್ ಕೆಲಸ ಮಾಡುತ್ತಿದ್ದ. ಕೆಲ ದಿನಗಳಿಂದ ಮನೆ ಜವಾಬ್ದಾರಿ ಈತನ ಮೇಲಿತ್ತು. ಪೇಪರ್, ಹಾಲು ಹಾಕಿ, ಮದುವೆ ಸಮಾರಂಭದಲ್ಲಿ ಊಟಕ್ಕೆ ಬಡಿಸುವ ಕೆಲಸಕ್ಕೂ ತೆರಳಿ ನಿತ್ಯದ ಖರ್ಚಿಗೆ ನಾಲ್ಕಾರು ರೂ. ಸಂಗ್ರಹಿಸಿ ಉಳಿದ ಹಣವನ್ನೇ ಶುಲ್ಕ ಪಾವತಿಸುತ್ತಿದ್ದ.
ಎಟಿಎಂನಲ್ಲೇ ರಾತ್ರಿ ಓದು: ರಮೇಶ 7 ವರ್ಷದಿಂದ ಇಂದಿಗೂ ಎಟಿಎಂನಲ್ಲಿ ಕೆಲಸ ಮಾಡು ತ್ತಿದ್ದಾನೆ. ಹಗಲು ಕಾಲೇಜಿಗೆ ತೆರಳಿ ಅಭ್ಯಾಸ ಮಾಡುತ್ತಿದ್ದರೆ, ರಾತ್ರಿ ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿ ಅಲ್ಲಿಯೇ ಅಭ್ಯಾಸ ಮಾಡುತ್ತಿದ್ದ. ಈ ಕೆಲಸದಿಂದ ಬಂದ 6 ಸಾವಿರ ರೂ. ಹಣವೇ ಮನೆಯ ನಿರ್ವಹಣೆ ಜತೆಗೆ ಕಾಲೇಜಿಗೆ ಬಳಕೆ ಮಾಡಿಕೊಳ್ಳುತ್ತಿದ್ದ. ಅಂತಹ ಕಷ್ಟದ ಪರಿಸ್ಥಿತಿಯಲ್ಲೂ ಬಿ.ಇಡಿ ಮುಗಿಸಿದ್ದಾನೆ. ಪ್ರಸ್ತುತ ಕೊಲ್ಲಿ ನಾಗೇಶ್ವರರರಾವ್ ಗಂಗಯ್ಯ ಕಾಲೇಜಿನಲ್ಲಿ ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ಬಳ್ಳಾರಿ ವಿವಿಗೆ ಮೊದಲ ರ್‍ಯಾಂಕ್ ಪಡೆದಿದ್ದಾನೆ.
ಎಟಿಎಂನಲ್ಲಿ ರಾತ್ರಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡು, ಹಗಲು ಕಾಲೇಜಿಗೆ ತೆರಳುತ್ತಿದ್ದೆ, ಕಾಲೇಜಿನ ಎಲ್ಲ ಕೆಲಸವನ್ನೂ ರಾತ್ರಿ ಎಟಿಎಂನಲ್ಲೇ ಮಾಡಿಕೊಳ್ಳುತ್ತಿದ್ದೆ. ಅದರಿಂದ ಬಂದ ಹಣದಲ್ಲೇ ಮನೆ ನಿರ್ವಹಣೆ ಮಾಡಿಕೊಳ್ಳುತ್ತಿದ್ದೆ. ನನಗೆ ಹಲವರು ಸಹಾಯ ಮಾಡಿದ್ದಾರೆ. ಈಗ ಪಿಎಚ್‌ಡಿ ಮಾಡುತ್ತಿದ್ದು, ಮುಂದೆ ಉಪನ್ಯಾಸಕನಾಗುವ ಆಸೆಯಿದೆ.
●ರಮೇಶ ಗುಂಡೂರು
ರಮೇಶ ಗುಂಡೂರು ಪ್ರತಿಭಾವಂತ ವಿದ್ಯಾರ್ಥಿ. ಆದರೆ ಮನೆಯಲ್ಲಿ ಬಡತನದ ಪರಿಸ್ಥಿತಿಯಿದೆ. ಸ್ವಂತ ಕೆಲಸ ಮಾಡಿಕೊಂಡೇ ಓದು ಮುಂದುವರಿಸಿ ಇಂದು ಬಳ್ಳಾರಿ ವಿವಿಗೆ ಮೊದಲ ರ್‍ಯಾಂಕ್ ಪಡೆದಿದ್ದಾನೆ. ಎಟಿಎಂನಲ್ಲಿ ರಾತ್ರಿ ಕೆಲಸ ಮಾಡಿ ಹಗಲು ಕಾಲೇಜಿಗೆ
ಬರುತ್ತಿದ್ದ. ಒಂದು ದಿನವೂ ತರಗತಿ ತಪ್ಪಿಸುತ್ತಿರಲಿಲ್ಲ. ಆತ ಇಂದು ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.
●ಮಮತಾ ಬೇಗಂ, ಕಾಲೇಜು ಉಪನ್ಯಾಸಕಿ
ದತ್ತು ಕಮ್ಮಾರ