Advertisement

Punjalkatte-Charmadi ರಾ. ಹೆದ್ದಾರಿ: ಮರು ಕಾಮಗಾರಿಗೆ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಚಾಲನೆ

12:41 AM Aug 12, 2024 | Team Udayavani |

ಬೆಳ್ತಂಗಡಿ: ಬಹು ನಿರೀಕ್ಷಿತ ಪುಂಜಾಲಕಟ್ಟೆ- ಚಾರ್ಮಾಡಿ ರಾ.ಹೆ.-73ರ ಕಾಮಗಾರಿ ಗುತ್ತಿಗೆದಾರ ಡಿ.ಪಿ. ಜೈನ್‌ ನಷ್ಟವಾಗಿದೆ ಎಂದು ಹೇಳಿ ಅರ್ಧದಲ್ಲೇ ಕಾಮಗಾರಿಯಿಂದ ಹಿಂದೆ ಸರಿದ ಕಾರಣ ಮುಗ್ರೋಡಿ ಕಂಪೆನಿಗೆ ಹೆಚ್ಚುವರಿಗೆ ಕಾಮಗಾರಿ ಹೊಣೆಯನ್ನು ನೀಡಲಾಗಿದ್ದು, ರವಿವಾರ ಸಂಸದ ಬ್ರಿಜೇಶ್‌ ಚೌಟ ಹಾಗೂ ಶಾಸಕ ಹರೀಶ್‌ ಪೂಂಜ ಸಮ್ಮುಖದಲ್ಲಿ ಕಾಮಗಾರಿಗೆ ಮರು ಚಾಲನೆ ನೀಡಲಾಯಿತು.

Advertisement

ಕಾಶಿಬೆಟ್ಟು ಬಳಿ ಚಾಲನೆ ನೀಡಿ ಮಾತನಾಡಿದ ಸಂಸದರು, ಜಿಲ್ಲೆಯಲ್ಲಿ ಈ ಹಿಂದೆ ಅನುಭವ ಇಲ್ಲದ ಗುತ್ತಿಗೆದಾರರು ಕಾಮಗಾರಿ ನಡೆಸಿದ್ದರು. ಈಗ ಅನುಭವಿ ಗುತ್ತಿಗೆದಾರರ ವ್ಯವಸ್ಥೆ ಮಾಡಲಾಗಿದೆ. ರಸ್ತೆಯ ಹೊಂಡಗಳನ್ನು ಮುಚ್ಚುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. 35 ಕಿ.ಮೀ. ವ್ಯಾಪ್ತಿಯ ಹೆದ್ದಾರಿಯಲ್ಲಿ ಸುಮಾರು 7 ಸ್ಥಳಗಳಲ್ಲಿ ಸಂಪೂರ್ಣ ಕೆಟ್ಟು ಹೋಗಿದ್ದು, ಮೊದಲ ಹಂತದಲ್ಲಿ ತತ್‌ಕ್ಷಣ ಈ ಸ್ಥಳಗಳಲ್ಲಿ ಕಾಮಗಾರಿ ನಡೆಯಲಿದೆ. ಬಳಿಕ ಇತರ ಕಾಮಗಾರಿಗಳು ಮುಂದುವರಿಯಲಿವೆ ಎಂದರು.

ಶಾಸಕ ಹರೀಶ್‌ ಪೂಂಜ ಮಾತನಾಡಿ, ಸಂಸದ ಬ್ರಿಜೇಶ್‌ ಚೌಟ ಅವರು ಸಮಸ್ಯೆಯನ್ನು ಅರಿತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳಲ್ಲಿ ಮಾತನಾಡಿ ಸುವ್ಯವಸ್ಥೆ ಕಲ್ಪಿಸಿದ್ದಾರೆ. ಇನ್ನುಮುಂದೆ ಹೆದ್ದಾರಿ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.

“ಮುಗ್ರೋಡಿ ಕಂಪೆನಿಗೆ ಹೆಚ್ಚುವರಿ ಗುತ್ತಿಗೆ ಜವಾಬ್ದಾರಿ’
ಬೆಳ್ತಂಗಡಿ: ಪುಂಜಾಲಕಟ್ಟೆ – ಚಾರ್ಮಾಡಿ ಅಭಿವೃದ್ಧಿ ಕಾಮಗಾರಿಗೆ ಭೌಗೋಳಿಕ ಹಿನ್ನೆಲೆಯಲ್ಲಿ ಕೆಲಸ ನಿರ್ವಹಿಸಲು ಸಮಸ್ಯೆ ಎದುರಾಗಿದೆ. ಆದ್ದರಿಂದ ಶಾಸಕ ಹರೀಶ್‌ ಪೂಂಜ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿ ಅನೇಕ ಯೋಜನೆ ರೂಪಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ಜತೆಗೂ ಚರ್ಚಿಸಲಾಗಿದೆ. ಇದರ ಒಂದು ಭಾಗವಾಗಿ ಡಿ.ಪಿ. ಜೈನ್‌ ಅವರ ಮೂಲಕ, ಅವರ ಹೆಸರಲ್ಲೇ ಮುಗ್ರೋಡಿ ಕಂಪೆನಿ ಇನ್ನು ಮುಂದೆ ಹೆದ್ದಾರಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಹೇಳಿದರು.

ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 13ರಂದು ಮಧ್ಯಾಹ್ನ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಈ ಸಂಬಂಧ ಸಭೆ ಕರೆದಿದ್ದಾರೆ. ಮಳೆಗಾಲದ ಸಂದರ್ಭದಲ್ಲೂ ನಿರಾಳವಾಗಿ ಸಂಚರಿಸಲು ಪೂರಕವಾಗುವಂತೆ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುವುದು. ಚಾರ್ಮಾಡಿ ವರೆಗಿನ ಹೆಚ್ಚಿನ ತೊಂದರೆಗಳನ್ನು ಗಮನಿಸಿ ಕಾಮಗಾರಿಯನ್ನು ನೂತನ ಗುತ್ತಿಗೆದಾರರಿಗೆ ನೀಡಲಾಗಿದೆ ಎಂದರು.

Advertisement

ಗುರುವಾಯನಕೆರೆ ವರಕಬೆಯಿಂದ ಉಜಿರೆ ಪೆಟ್ರೋಲ್‌ ಬಂಕ್‌ವರೆಗೆ ಸರ್ವಿಸ್‌ ರಸ್ತೆ ಇದ್ದು, ಇದನ್ನು ನಿಡಿಗಲ್‌ವರೆಗೆ ವಿಸ್ತರಿಸಲಾಗುವುದು. ಹಳೆಕೋಟೆ ವಾಣಿ ಕಾಲೇಜು ಬಳಿ ಮೇಲ್ಸೇತುವೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಭೂಮಿ ಒತ್ತುವರಿ ಅಧಿಸೂಚನೆ ಆಗಿದ್ದು, ಜನವರಿ ಒಳಗೆ ಎಲ್ಲವೂ ಪೂರ್ಣಗೊಳ್ಳಲಿದೆ ಎಂದರು.

ಶಾಸಕ ಹರೀಶ್‌ ಪೂಂಜ ಮಾತನಾಡಿ, 700 ಕೋ.ರೂ. ಅನುದಾನದ ಟೆಂಡರ್‌ ಪ್ರಕ್ರಿಯೆ ಇದಾಗಿದೆ. ಮೂರ್‍ನಾಲ್ಕು ಬಾರಿ ಸಂಸದರೊಂದಿಗೆ ದಿಲ್ಲಿಯಲ್ಲಿ ಚರ್ಚಿಸಿದ್ದು, ಈಗ ಸೂಕ್ತ ಪ್ರತಿಫಲ ಸಿಕ್ಕಿದೆ ಎಂದರು. ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್‌, ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next