ಪಿಯುಸಿಯಲ್ಲಿ ಒಳ್ಳೆ ಅಂಕ ಪಡೆದೆ. ಆದರೆ, ಎಂ.ಬಿ.ಬಿ.ಎಸ್. ಓದುವಷ್ಟು ಮನೆಯ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರಲಿಲ್ಲ. ಎಂಜಿನಿಯರಿಂಗ್ ಫ್ರೀ ಸೀಟ್ ಸಿಕ್ಕರೂ ಆಸಕ್ತಿ ಇರಲಿಲ್ಲ. ಬಿ.ಎಸ್ಸಿ.ಗೆ ಸೇರಿಕೊಂಡೆ, ನಂತರ ಗಣಿತದಲ್ಲಿ ಆಸಕ್ತಿ ಹೆಚ್ಚಾಗಿದ್ದ ನಾನು ಎಂ.ಎಸ್ಸಿ. ಮ್ಯಾಥಮ್ಯಾಟಿಕ್ಸ್ ಓದಿ ಗೋಲ್ಡ್ ಮೆಡಲ್ ಪಡೆದು ಅಪ್ಪ- ಅಮ್ಮನಿಂದ ಶಹಬ್ಟಾಶ್! ಎನಿಸಿಕೊಂಡೆ.
ಎಂ.ಎಸ್ಸಿ. ಮುಗಿಸಿ ಮ್ಯಾಥಮ್ಯಾಟಿಕ್ಸ್ ಲೆಕ್ಚರರ್ ಆಗಬೇಕೆಂದು ಕನಸು ಕಂಡಿದ್ದೆ. ಅದೇ ನನಗೆ ಪರ್ಫೆಕ್ಟ್ ಪ್ರೂಫೆಷನ್ ಅಂತ ಮನೆಯವರೆಲ್ಲ ನಿರ್ಧರಿಸಿದ್ದರೂ, ಅಷ್ಟರಲ್ಲಿ ಬಿ.ಎಡ್. ಕಂಪಲ್ಸರಿ ಮಾಡಿಬಿಟ್ಟಿದ್ದರು. ಜೊತೆಗೆ 2 ವರ್ಷ ಓದಬೇಕಾಗಿತ್ತು. “ನೀನು ಬಿ.ಎಡ್. ಓದಿ ಸರ್ಕಾರಿ ಕೆಲಸ ಪಡೆದು ನಮ್ಮನ್ನು ಸಾಕಬೇಕಾಗಿದೇಯೇ? ಓದು ಸಾಕು ಬಿಡು. ಒಂದೊಳ್ಳೆ ಹುಡುಗನನ್ನು ನೋಡಿ ನಿನಗೆ ಮದುವೆ ಮಾಡಿ ನನ್ನಜವಾಬ್ದಾರಿ ನಾನು ನಿಭಾಯಿಸುತ್ತೇನೆ, ವಿವಾಹ ನಂತರ ನೀನು ಏನೂ ಬೇಕಾದರೂ ಓದಿಕೋ’ ಎಂದು ಅಪ್ಪ ಹುಡುಗನನ್ನು ನೋಡಿ ನಿಶ್ಚಿತಾರ್ಥ ಮಾಡಿಮುಗಿಸಿಬಿಟ್ಟರು.
ಮದುವೆಗೆ ಇದ್ದ ಆರು ತಿಂಗಳ ಗ್ಯಾಪ್‌ನಲ್ಲಿ ನಾನು ಸುಮ್ಮನೆ ಕೂರದೇ ಪ್ರೈವೇಟ್ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡಿದೆ, ಜೊತೆಗೆ ಮನೆಯಲ್ಲಿ ಟ್ಯೂಷನ್ ಕೂಡ ತೆಗೆದುಕೊಂಡು ಸ್ವಲ್ಪ ಹಣ ಗಳಿಸಿದೆ. ಈ ನಡುವೆ ನನ್ನ ಭಾವಿ ಪತಿ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರಿಂದ ಕರ್ನಾಟಕ ವಿದ್ಯುತ್ ಕಾರ್ಖಾನೆಯಲ್ಲಿ ಹೈದ್ರಾಬಾದ್ ಕರ್ನಾಟಕದ ಮಹಿಳೆಯರಿಗಾಗಿ ಕರೆಯಲಾಗಿದ್ದ ಪ್ರಥಮದರ್ಜೆ ಸಹಾಯಕ ಹುದ್ದೆಗೆ ನನ್ನ ಅರ್ಜಿ ಸಲ್ಲಿಸಿದ್ದರು. ಒಂದೇ ಒಂದು ಹುದ್ದೆ ಖಾಲಿ ಇದ್ದುದರಿಂದ ಆ ಜಾಬ್ ನನಗೆ ಆಗುತ್ತದೆ ಎಂಬ ಭರವಸೆ ಇರಲಿಲ್ಲ. ಮದುವೆಯಾಯಿತು, ಗೃಹಿಣಿಯೇ ಪರ್ಫೆಕ್ಟ್ ಪ್ರೂಫೆಷನ್ ಆಗಿ ಬಿಡುತ್ತೇನೋ ಅಂದುಕೊಂಡಿದ್ದೆ. ನಾನು 3 ತಿಂಗಳ ಗರ್ಭವತಿಯಾಗಿದ್ದಾಗ ಆ ಹುದ್ದೆಗೆ ಪರೀಕ್ಷೆಯಿಟ್ಟಿದ್ದರು, ಹುಷಾರಿಲ್ಲವಾದ್ದರಿಂದ ಹೋಗಲು ಹಿಂಜರಿದಿದ್ದೆ. ಮನೆಯವರ ಪ್ರೋತ್ಸಾಹದ ಮೇರೆಗೆ ಪರೀಕ್ಷಾ ಕೇಂದ್ರಕ್ಕೆ ಹೋದಾಗ ಒಂದೇ ಒಂದು ಪೋಸ್ಟ್ ಇದ್ದರೂ ಅಲ್ಲಿ ಪರೀಕ್ಷೆ ಬರೆಯಲು ನೆರೆದಿದ್ದ ಹೈ.ಕ. ಹುಡುಗಿಯರನ್ನ ನೋಡಿ ಖಂಡಿತ ಇದು ಆಗದ ಮಾತು, ಸುಮ್ಮನೆ ಪರೀಕ್ಷೆ ಬರೆದರಾಯಿತು ಅಂತ ಬರೆದೆ. ಬಹುತೇಕ ಪ್ರಶ್ನೆಗಳು ವಿಜ್ಞಾನ, ಗಣಿತಕ್ಕೆ ಸಂಬಂಧಿಸಿದ್ದರಿಂದ ನನಗೆ ಅಷ್ಟೇನೂ ಕಷ್ಟವೆನಿಸಿರಲಿಲ್ಲ.
1 ತಿಂಗಳು ಕಾದೆ, 2 ತಿಂಗಳು, 6 ತಿಂಗಳು ಆದರೂ ರಿಸಲ್ಟ್ ಬರಲೇ ಇಲ್ಲ, ಡುಮ್ಕಿ ಹೊಡೆದಿರಬಹುದು ಎಂದುಕೊಂಡು ನನ್ನ ತಾಯ್ತನದ ಖುಷಿಯಲ್ಲಿ ಆರಾಮಾಗಿದ್ದೆ. ಮಗು ಸ್ವಲ್ಪ ದೊಡ್ಡವನಾದ ಮೇಲೆ ಪ್ರೈವೇಟ್ ಕಾಲೇಜಿನಲ್ಲಿ ಲೆಕ್ಚರರ್ ಕೆಲಸಕ್ಕೆ ಸೇರಿದರಾಯಿತು ಎಂದು ಕೊಂಡಿರುವಾಗಲೇ, ಕರ್ನಾಟಕ ವಿದ್ಯುತ್ ಕಾರ್ಖಾನೆಯಿಂದ ಫೋನ್ ರಿಂಗಣಿಸಿ, ನಿಮ್ಮದು ಪ್ರಥಮದರ್ಜೆ ಸಹಾಯಕ ಹುದ್ದೆಗೆ ಆರ್ಡರ್ ಕಳುಹಿಸಿದ್ದೇವೆ, 2-3 ದಿನದಲ್ಲಿ ನಿಮ್ಮ ಕೈ ಸೇರುತ್ತೆ. 15 ದಿನಗಳೊಳಗಾಗಿ ಬಂದು ಕೆಲಸಕ್ಕೆ ಸೇರಿಕೊಳ್ಳಿ ಎಂದಾಗ ಸ್ವರ್ಗ ನೆತ್ತಿಯ ಮೇಲೆ ಇದ್ದಷ್ಟು ಖುಷಿ.
ಮಗ ಆಗಲೇ 6 ತಿಂಗಳಿನವನಾಗಿದ್ದ, ಒಳ್ಳೆಯ ಸಂಬಳ, ಒಳ್ಳೆ ಪೋಸ್ಟ್ ಅಂತ ಸೇರಿಕೊಂಡೆ. ಇರೋದು ಒಂದೇ ಪೋಸ್ಟ್, ಹೋಗಲಿ ಬಿಡಿ, ನಂದು ಆಗಲ್ಲ ಎಂದು ಹೇಳಿದಾಗ, “ಆ ಒಂದು ಪೋಸ್ಟ್ ನಿನ್ನ ಹೆಸರಿಗೆ ಅಂತ ದೇವರು ಬರೆದಿದ್ದರೆ, ಪ್ರಯತ್ನ ಮಾಡೋದರಲ್ಲಿ ತಪ್ಪೇನಿದೇ?’ ಎಂಬ ನನ್ನ ಪತಿಯ ಮಾತು ಈಗಲೂ ನಿಜವೆನಿಸುತ್ತದೆ.
-ಸೌಮಶ್ರೀ ಸುದರ್ಶನ್ ಹಿರೇಮಠ್