ಮುಳಬಾಗಿಲು: ತಾಲೂಕಿನ ದೇವರಾಯಸಮುದ್ರ ಗ್ರಾಮದಲ್ಲಿ ನಿರ್ಮಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಇನ್ನೂ ಪೂರ್ಣಗೊಂಡಿಲ್ಲ. ಗಡುವು ಮುಗಿದು ತಿಂಗಳುಗಳೇ ಕಳೆದರೂ ಕಾಮಗಾರಿ ಆಮೆಗತಿಯಲ್ಲೇ ಸಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಸರ್ಕಾರ 2008, ಆಗಸ್ಟ್‌ನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಮೂಲ ಸೌಕರ್ಯಗಳಿಲ್ಲದ ಖಾಸಗಿ ಕಟ್ಟಡದಲ್ಲಿ ಆರಂಭಿಸಿತ್ತು. ಆಗ 35 ಮಕ್ಕಳು ಇದ್ದರು. ಶಾಲೆ ಪ್ರಾರಂಭಿಸಿ 9 ವರ್ಷಗಳ ನಂತರ ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆ ಇದ್ದ ಕಾರಣ ನಗರದಲ್ಲಿನ ಖಾಸಗಿ ಕಟ್ಟಡಕ್ಕೆ ಶಾಲೆಯನ್ನು ವರ್ಗಾಯಿಸಲಾಯಿತು.
ಶಾಲೆ ಸ್ಥಳಾಂತರ: ವಿಪರ್ಯಾಸವೆಂದರೆ 2018, ಡಿಸೆಂಬರ್‌ನಲ್ಲಿ ರಾಜಕಾಲುವೆಯ ಮೇಲೆ ನಿರ್ಮಿಸಿದ್ದ ಶೌಚಾಲಯದ ಗೋಡೆ ಕುಸಿದು 7ನೇ ತರಗತಿಯ ವಿದ್ಯಾರ್ಥಿನಿ ಮೃತ ಪಟ್ಟಿದ್ದರು. ಇದರಿಂದ ಆ ವಸತಿ ಶಾಲೆಯಲ್ಲಿದ್ದ 163 ಮಕ್ಕಳನ್ನು ಜಿಲ್ಲಾಡಳಿತ ಬೇತಮಂಗಲ ಬಳಿಯ ಚಿಗರಾಪುರದ ನೂತನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೊರಾರ್ಜಿ ವಸತಿ ಶಾಲೆಗೆ ಸ್ಥಳಾಂತರಿಸಿದ್ದು, ಈಗ ಒಂದು ವರ್ಷವಾಗಿದೆ.
16.97 ಕೋಟಿ ರೂ. ವೆಚ್ಚ: ಇದರ ನಡುವೆ ಸರ್ಕಾರ ದೇವರಾಯಸಮುದ್ರಕ್ಕೆ ಮಂಜೂರಾದ ಮೊರಾರ್ಜಿ ಶಾಲೆಗೆ ಕಾಯಂ ಕಟ್ಟಡ ಕಲ್ಪಿಸಲು ಕೀಲುಹೊಳಲಿ ಗ್ರಾಮದ ಬಳಿ 12 ಎಕರೆ ಜಮೀನನ್ನು ಗುರುತಿಸಿ, 2016-17ನೇ ಸಾಲಿನಲ್ಲಿ 16.97 ಕೋಟಿ ರೂ. ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು. ಅಂತೆಯೇ ಮಂಜೂರು ಮಾಡಲಾಗಿದ್ದ ಕಟ್ಟಡ ಕಾಮಗಾರಿ ಗುತ್ತಿಗೆ ಯನ್ನು ಶ್ರೀವಿನಯ್ ಇನ್ಫೋಟೆಕ್ (ಪ್ರ)ಲಿ.ಗೆ ನೀಡಲಾಗಿತ್ತು.
ಪೋಷಕರಿಗೆ ನಿರಾಸೆ: 18 ತಿಂಗಳ ಕಾಲಮಿತಿಯಲ್ಲಿ ಶಾಲಾ ಸಂಕೀರ್ಣ ಮತ್ತು ಸಿಬ್ಬಂದಿ ವಸತಿ ಗೃಹಗಳ ಕಾಮಗಾರಿಯನ್ನು ಮುಗಿಸಲು 2018ರ ಜ.3 ರಂದು ಕಾರ್ಯದೇಶವನ್ನು ನೀಡಿ ನಾಮಫಲಕವನ್ನು ನಿರ್ಮಾಣ ಹಂತದ ಶಾಲಾ ಕಟ್ಟಡ ಮುಂದೆ ಅಳವಡಿಸಲಾಗಿದೆ. ನಿಗದಿತ ಅವಧಿಯಲ್ಲಿ ಸೂಚಿಸಿರುವ ಕಾಮಗಾರಿಯ ನಿರ್ವಹಣೆ ಮತ್ತು ಮೇಲುಸ್ತುವಾರಿ ಮಾಡಲು ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು, ಗುಣಮಟ್ಟ ಇಲಾಖೆಯ ಅಭಿಯಂತರರಿಗೆ ವಹಿಸಲಾಗಿದೆ.
ವಿಪರ್ಯಾಸವೆಂದರೆ ಒಂದು ವರ್ಷ 8 ತಿಂಗಳು ಕಳೆದರೂ ಕಾಮಗಾರಿಯು ಪೂರ್ಣಗೊಳ್ಳದೇ ಇರುವುದು ಮಕ್ಕಳು ಮತ್ತು ಪೋಷಕರಿಗೆ ನಿರಾಸೆ ಉಂಟಾಗಿದೆ.
-ಎಂ.ನಾಗರಾಜಯ್ಯ