Advertisement

ಸಾಲ ತೀರಿಸಿದ ಮೇಲೂ ಕೆಲಸ ಬಾಕಿ ಇದೆ !

02:33 PM Sep 03, 2018 | |

ಸಾಲಸೋಲ ಮಾಡಿ ಸೂರೊಂದನ್ನು ಕಟ್ಟಿಕೊಂಡ ಖುಷಿ, ಆ ಸಾಲದ ಕೊನೆಯ ಕಂತನ್ನು ಕಟ್ಟಿದ ಕ್ಷಣ ದುಪ್ಪಟ್ಟಾಗುತ್ತದೆ. ಮರು ಕ್ಷಣ ದಿಂದಲೇ ಸ್ವಂತ ಮನೆ ಪೂರ್ತಿಯಾಗಿ ಕೈಸೇರಿದ ಹೆಮ್ಮೆ, ನಿರಾಳತೆ ಎರಡೂ ಏಕಕಾಲಕ್ಕೇ ಆಗುತ್ತದೆ. ಆದರೆ ಈ ಖುಷಿಯಲ್ಲೇ ತೇಲುತ್ತಾ ಸಾಲ ಮರುಪಾವತಿಸಿದ ಬಳಿಕ ಪೂರೈಸಲೇಬೇಕಾದ ಒಂದಿಷ್ಟು ಕೆಲಸ ಕಾರ್ಯಗಳನ್ನು ಮರೆಯಬೇಡಿ. ತಕ್ಷಣ ಈ ಐದು ಕೆಲಸಗಳನ್ನು ಮಾಡದೇ ಇದ್ದರೆ, ಭವಿಷ್ಯದಲ್ಲಿ ಸಮಸ್ಯೆಯುಂಟಾಗಬಹುದು ಎಚ್ಚರ.

Advertisement

1. ಬ್ಯಾಂಕ್‌ನಿಂದ ಎನ್‌ಒಸಿ ಪಡೆಯಿರಿ
ನಿಮ್ಮ ಗೃಹಸಾಲದ ಎಲ್ಲಾ ಕಂತುಗಳನ್ನು ಪೂರ್ತಿಯಾಗಿ ಪಾವತಿಸಿದ ಬಳಿಕ ಸಾಲದಾತ ಬ್ಯಾಂಕ್‌ನಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಅಥವಾ ನೋ ಡ್ನೂ ಸರ್ಟಿಫಿಕೇಟ್‌ (ಎನ್‌ಡಿಸಿ) ಪಡೆದುಕೊಳ್ಳುವುದು ಅತೀ ಮುಖ್ಯ. ಸಾಲದಾತ ಸಂಸ್ಥೆ ನೀಡುವ ಈ ಪ್ರಮಾಣಪತ್ರವು ನೀವು ಸಾಲವನ್ನು ಪೂರ್ತಿಯಾಗಿ ಪಾವತಿಸಿದ್ದೀರಿ ಮತ್ತು ನಿಮ್ಮ ಹೆಸರಲ್ಲಿ ಯಾವುದೇ ಹಣ ಪಾವತಿಸಲು ಬಾಕಿ ಉಳಿದಿಲ್ಲ ಎಂದು ಪ್ರಮಾಣೀಕರಿಸುತ್ತದೆ. ಈ ಪ್ರಮಾಣಪತ್ರ ಪಡೆದುಕೊಳ್ಳುವಾಗ ನಮೂದಿಸಿರುವ ಅಂಶಗಳೆಲ್ಲವೂ ಸರಿಯಾಗಿವೆ. ಅದರಲ್ಲಿ ಯಾವುದೇ ಅಕ್ಷರ ದೋಷಗಳಿಲ್ಲ ಎಂಬುದನ್ನು ಖಾತ್ರಿಪಡಿಸಿ ಕೊಳ್ಳಿ. ಸಾಲದಾರರ ಹೆಸರು, ಸಾಲದ ಖಾತೆ ಸಂಖ್ಯೆ, ಸಾಲ ಪಡೆದ ಆಸ್ತಿ ವಿವರ, ಸಾಲ ಮುಕ್ತಾಯಗೊಂಡ ದಿನಾಂಕ ಇತ್ಯಾದಿಯನ್ನು ಇದು ಒಳಗೊಂಡಿರುತ್ತದೆ. ಜೊತೆಗೆ, ಸಾಲದಾತ ಸಂಸ್ಥೆ ಆಸ್ತಿಯ ಮೇಲೆ ಯಾವುದೇ ಅಧಿಕಾರ ಹೊಂದಿಲ್ಲ, ಮನೆಯು ಇದೀಗ ಸಂಪೂರ್ಣವಾಗಿ ಸಾಲದಾರರ ಸೊತ್ತು ಎಂಬುದೂ ಅದರಲ್ಲಿ ನಮೂದಾಗಿರಬೇಕು.

2. ಎಲ್ಲಾ ಮೂಲ ದಾಖಲೆಗಳನ್ನು ಪಡ್ಕೊಳ್ಳಿ 
ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಸಾಲದಾರರಿಂದ ಪಡೆದುಕೊಂಡಿದ್ದ ಎಲ್ಲಾ ದಾಖಲೆಗಳನ್ನು ಬ್ಯಾಂಕ್‌ ಗೃಹಸಾಲ ಮುಕ್ತಾಯಗೊಳಿಸುವ ವೇಳೆ ವಾಪಸ್‌ ನೀಡಬೇಕು. ಸಾಮಾನ್ಯವಾಗಿ ಬ್ಯಾಂಕ್‌ಗಳು ಸಾಲಕ್ಕೆ ಅರ್ಜಿ ಸಲ್ಲಿಸುವಾಗ ತಂದೊಪ್ಪಿಸಬೇಕಾದ ದಾಖಲೆಗಳ ಪಟ್ಟಿ (ಎಲ್‌ಒಡಿ) ನೀಡುತ್ತವೆ. ಋಣಮುಕ್ತರಾದಾಗ ನೀವು ಆ ಪಟ್ಟಿಯೊಂದಿಗೆ ಎಲ್ಲಾ ಮೂಲ ದಾಖಲೆಗಳನ್ನು ತಾಳೆ ನೋಡಿ, ಬ್ಯಾಂಕ್‌ ಖಾತೆ ಸ್ಟೇಟ್‌ಮೆಂಟ್‌, ಆದಾಯ ಪುರಾವೆ, ಆಸ್ತಿ ಕಡತಗಳು, ಸೇಲ್‌ ಡೀಡ್‌, ಸ್ವಾಧೀನ ಪತ್ರ ಇತ್ಯಾದಿ ಎಲ್ಲವೂ ನಿಮ್ಮ ಕೈಸೇರಿದೆ, ಹಾಳೆಗಳಾವುದೂ ಹರಿದುಹೋಗಿಲ್ಲ, ಉತ್ತಮ ಸ್ಥಿತಿಯಲ್ಲಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಕೆಲವು ಬ್ಯಾಂಕ್‌ಗಳು ಭದ್ರತಾ ಚೆಕ್‌ಗಳನ್ನು ತೆಗೆದಿಟ್ಟುಕೊಂಡಿರುತ್ತವೆ. ಅದನ್ನು ವಾಪಸ್‌ ಪಡೆಯಲು ಮರೆಯಬಾರದು. 

3.ಕ್ರೆಡಿಟ್‌ ಬ್ಯೂರೋ ಡಾಟಾ ಅಪ್ಡೆàಟ್‌ ನೋಡ್ಕೊಳ್ಳಿ
ಬಹುತೇಕ ಎಲ್ಲಾ ಬ್ಯಾಂಕ್‌ಗಳು ನೀವು ಕ್ರೆಡಿಟ್‌ ಕಾರ್ಡ್‌ ಅಥವಾ ಸಾಲ ಪಡೆಯಲು ಹೋಗಿದ್ದ ಕ್ರೆಡಿಟ್‌ ಬ್ಯೂರೋದಲ್ಲಿ ನಿಮ್ಮ ಇತಿಹಾಸ ಪರೀಕ್ಷಿಸುತ್ತವೆ. ಹಾಗಾಗಿ ನೀವು ಗೃಹಸಾಲ ಪೂರ್ಣಗೊಳಿಸಿದ ತಕ್ಷಣ ಸಾಲದಾತ ಸಂಸ್ಥೆ ಕ್ಲಪ್ತಸಮಯದಲ್ಲಿ ಕ್ರೆಡಿಟ್‌ ಬ್ಯೂರೋದಲ್ಲಿ ನೀವು ಋಣಮುಕ್ತರಾಗಿರುವುದನ್ನು ಅಪ್ಡೆಟ್‌ ಮಾಡಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಕೆಲವೊಮ್ಮೆ ಈ ಸಂಸ್ಥೆಗಳು ಬ್ಯೂರೋಕ್ಕೆ ಮಾಹಿತಿ ನೀಡಲು ಮರೆತುಬಿಡಬಹುದು. ನಿಮ್ಮ ಕ್ರೆಡಿಟ್‌ ರಿಪೋರ್ಟ್‌ನಲ್ಲಿ ಸಾಲದಿಂದ ಮುಕ್ತರಾಗಿರುವುದು ಅಪ್ಡೆàಟ್‌ ಆಗುವ ತನಕ ಬ್ಯಾಂಕ್‌ಗಳೊಂದಿಗೆ ಫಾಲೊಅಪ್‌ ಮಾಡಿಕೊಳ್ಳುತ್ತಿರಿ. ನಿಗದಿತ ಸಮಯ ಕಳೆದರೂ ಅಪ್ಡೆàಟ್‌ ಆಗಿಲ್ಲವೆಂದಾದರೆ, ನೀವು ಆನ್‌ಲೈನ್‌ ಮೂಲಕ ಕ್ರೆಡಿಟ್‌ ಬ್ಯೂರೋಕ್ಕೆ ಅಪ್ಡೆàಟ್‌ ಮಾಡುವಂತೆ ಮನವಿ ಸಲ್ಲಿಸಬಹುದು.

4.ರಿಜಿಸ್ಟ್ರಾರ್‌ನಲ್ಲಿ ಸ್ವಾಧೀನದ ಹಕ್ಕು ರದ್ದು ಖಾತ್ರಿಪಡಿಸಿ
ನಿಮ್ಮ ಮರುಪಾವತಿ ಸಾಮರ್ಥ್ಯದ ಕುರಿತು ಸಾಲದಾತ ಸಂಸ್ಥೆಗೆ ಖಾತ್ರಿ ಇಲ್ಲದಿದ್ದಾಗ, ಅವರು ನಿಮ್ಮ ಆಸ್ತಿಯ ಮೇಲೆ ಸ್ವಾಧೀನ ಹಕ್ಕು (ಅಡಮಾನ ನೋಂದಣಿ) ಹಾಕುತ್ತಾರೆ. ಇದು ಗೃಹಸಾಲವನ್ನು ಭದ್ರ ಮಾಡಿಕೊಳ್ಳಲು ಆಸ್ತಿಯನ್ನು ಅಡಮಾನವಿಡುವ ಕಾನೂನು ಹಕ್ಕನ್ನು ನೀಡುತ್ತದೆ. ನೀವು ಸಾಲ ಕಟ್ಟದೆ ಡಿಫಾಲ್ಟ್ ಆದರೆ ಬಾಕಿ ಹಣವನ್ನು ಪಡೆಯುವ ಸಲುವಾಗಿ ಆ ಆಸ್ತಿಯನ್ನು ಮಾರಾಟ ಮಾಡುವ ಹಕ್ಕನ್ನು ಸಾಲದಾತ ಸಂಸ್ಥೆಗೆ ಇದು ಒದಗಿಸುತ್ತದೆ. ಅಲ್ಲದೆ, ಸಾಲ ಪೂರ್ಣಗೊಳ್ಳುವ ತನಕ ಸಾಲದಾರ ಆಸ್ತಿಯನ್ನು ಮಾರಾಟ ಮಾಡದಂತೆ ಸ್ವಾಧೀನ ಹಕ್ಕು ತಡೆಯುತ್ತದೆ. ಹಾಗಾಗಿ, ನಿಮ್ಮ ಸಾಲ ಮುಗಿದ ತಕ್ಷಣ, ನಿಮ್ಮ ನಗರದ ಸ್ಥಳೀಯ ನೋಂದಣಿ ಕಚೇರಿಯಲ್ಲಿ ರಿಜಿಸ್ಟ್ರಾರ್‌ನ ಸ್ವಾಧೀನ ಹಕ್ಕನ್ನು ರದ್ದುಗೊಳಿಸಲಾಗಿದೆ ಎಂಬುದನ್ನು ಖಾತ್ರಿಗೊಳಿಸಿ. ಇದು ನಿಮ್ಮ ಆಸ್ತಿ ಮೇಲಿನ ನಿಮ್ಮ ಮಾಲೀಕತ್ವಕ್ಕೆ ಯಾವುದೇ ಕಾನೂನು ಅಡ್ಡಿ ಇರದಂತೆ ಮಾಡುತ್ತದೆ. ಸ್ವಾಧೀನ ಹಕ್ಕು ರದ್ದಿಗಾಗಿ ಅರ್ಜಿ ಸಲ್ಲಿಸಲು ನಿಮ್ಮ ಎನ್‌ಒಸಿ ಪ್ರಮಾಣಪತ್ರ ಒದಗಿಸಬೇಕಾಗುತ್ತದೆ.

Advertisement

5. ಋಣಭಾರ ಪ್ರಮಾಣಪತ್ರ ಪಡೆಯಿರಿ
ಋಣಭಾರ ಪ್ರಮಾಣಪತ್ರವೆಂಬುದು ಗೃಹ ಸಾಲಕ್ಕಾಗಿ ಅಡಮಾನ ಇಟ್ಟ ಆಸ್ತಿಗೆ ಸಂಬಂಧಿಸಿದ ನಿಮ್ಮ ಎಲ್ಲಾ ಹಣಕಾಸು ವಹಿವಾಟುಗಳ ವಿಸ್ತೃತ ದಾಖಲೆಗಳನ್ನು ಒಳಗೊಂಡಿರುವ ಕಾನೂನಾತ್ಮಕ ದಾಖಲೆಯಾಗಿದೆ. ನಿಮ್ಮ ಸಾಲ ಮುಕ್ತಾಯಗೊಂಡ ಬಳಿಕ ಈ ಪ್ರಮಾಣಪತ್ರದಲ್ಲಿ ಎಲ್ಲಾ ಮರುಪಾವತಿಯಾಗಿರುವುದು ಕಾಣಬೇಕು. ಈ ದಾಖಲೆಯು ನಿಮ್ಮ ಆಸ್ತಿ ಯಾವುದೇ ರೀತಿಯ ಕಾನೂನು ಅಥವಾ ಹಣಕಾಸು ಹೊಣೆಗಾರಿಕೆಯಿಂದ ಮುಕ್ತವಾಗಿದೆ ಎಂಬುದಾಗಿ ಪ್ರಮಾಣೀಕರಿಸುತ್ತದೆ. ಗೃಹಸಾಲ ಮುಕ್ತಾಯಗೊಂಡ ತಕ್ಷಣ ಈ ಪ್ರಮಾಣಪತ್ರ ಅಪ್ಡೆàಡ್‌ ಮಾಡಿಸಿಕೊಂಡರೆ, ನಿಮಗೆ ಬೇಕಾದಾಗ ನಿಶ್ಚಿಂತೆಯಿಂದ ಆಸ್ತಿ ಮಾರಾಟ ಮಾಡಬಹುದು. 

ರಾಧ 

Advertisement

Udayavani is now on Telegram. Click here to join our channel and stay updated with the latest news.

Next