“ಕಾಲು ತೊಳೆದು ಒಳಗೆ ಬಾ ಎಂದು ಎಷ್ಟು ಸಲ ಹೇಳಬೇಕು ನಿನಗೆ, ನೋಡಿಲ್ಲಿ ಹೇಗಾಗಿದೆ ನೆಲ?’ ಅಮ್ಮ ಬೊಬ್ಬಿಡುತ್ತಿದ್ದರೆ ಸುಳ್ಳು ಸುಳ್ಳೇ ಕಾಲು ತೊಳೆದೆನೆಂದು ಹೇಳಿದ ಮಗನ ಸುಳ್ಳಿಗೆ ಸಾಕ್ಷಿಯಾಗಿ ಆಗಷ್ಟೇ ಒರೆಸಿದ ಒದ್ದೆ ನೆಲದಲ್ಲಿ ಕೆಸರಿನ ಬಣ್ಣದ ಪಾದದಚ್ಚು. ಈ ಚಳಿಗೆ ಮತ್ತೆ ಕಾಲಿಗೆ ನೀರು ಹಾಕುವ ಚಿಂತೆ ಮಗನದಾದರೆ, ಈಗಷ್ಟೇ ನೆಲ ಒರೆಸಿ ಬೆನ್ನು ನೆಟ್ಟಗಾಗಿಸಿ ನಿಂತಿದ್ದ ಅಮ್ಮನಿಗೆ ಮತ್ತೆ ನೆಲ ಒರೆಸುವ ಚಿಂತೆ.
ಮನೆಯ ಮುಖಮಂಟಪ, ಪಡಸಾಲೆ, ಚಾವಡಿ, ಅಟ್ಟುಂಬಳ, ಎಲ್ಲಾ ಕಡೆಯೂ ಆಗಷ್ಟೇ ಉಂಡೆದ್ದ ನೆಂಟರಿಷ್ಟರ ಬಾಳೆಎಲೆಗಳು. ಅದನ್ನೇನೋ ಗಂಡಸರು ಒಂದೊಂದಾಗಿ ಎಳೆದು ಜೋಡಿಸಿ ಮನೆಯಾಚೆಯ ತೆಂಗಿನಮರದ ಬುಡಕ್ಕೆತ್ತಿ ಒಗೆದಾರು. ಹಿಡಿಸೂಡಿ ಹಿಡಿದು ನೆಲದಲ್ಲಿ ಬಿದ್ದಿದ್ದ ಅನ್ನದಗುಳು, ತರಕಾರಿ ತುಂಡುಗಳನ್ನು ಗುಡಿಸಿ ಮೂಲೆಗೊತ್ತರಿಸಿ ನಮ್ಮದಾಯ್ತು ಕೆಲಸ ಎಂದವರು ನಡೆದರೆ, ನೆಲ ಬಳುಗುವ ಕಾರ್ಯ ಮಾತ್ರ ಸೀರೆ ಉಟ್ಟ ನೀರೆಯರದ್ದೇ. ಸೆರಗು, ನೆರಿಗೆ ಎತ್ತಿ ಕಟ್ಟಿ ಸೊಂಟಕ್ಕೆ ಸಿಕ್ಕಿಸಿ, ಹಟ್ಟಿಯಿಂದ ತಂದ ಹೊಸ ಸಗಣಿಗೆ ಒಂದಿಷ್ಟೇ ಇಷ್ಟು ನೀರು ಹಾಕಿ ಅಡಿಕೆಯ ಹಾಳೆಯ ತುಂಡು (ಹಾಳೆಕಡೆ) ಹಿಡಿದು ಸನ್ನದ್ಧರಾದ ಅಕ್ಕ ಅಮ್ಮ ಅತ್ತೆ ಅಜ್ಜಿಯರ ದಂಡು. ಒಂದು ಕಡೆಯಿಂದ ಶುರುಮಾಡಿದರೆ ಅವರ ಬಗ್ಗಿದ ಸೊಂಟ ಮೇಲೇಳುತ್ತಿದ್ದುದು ಕೋಣೆಯ ಇನ್ನೊಂದು ತುದಿ ತಲುಪಿದಾಗಲೇ. ಉಳಿದ ಸಗಣಿ ಸಮೇತವಾಗಿ ಕಸ-ಮುಸುರೆಗಳನ್ನು ಅದೇ ಹಾಳೆಯ ತುಂಡಲ್ಲಿ ಎತ್ತಿ ಹೊರಗೆಸೆದು ತಿರುಗಿ ನೋಡಿದರೆ ಮನೆಯೆಲ್ಲ ಹೊಸದಾದಂತೆ.
ಆಕೆಯೊಬ್ಬಳಿದ್ದಳು, ತಮ್ಮ, ತಂಗಿಯರೊಂದಿಗೆ ಕುಳಿತು ಪಟ್ಟಾಂಗ ಹೊಡೆಯುತ್ತ ಊಟ ಮುಗಿಸುತ್ತಿದ್ದಳು. ಎಲ್ಲರೂ ಉಂಡೆದ್ದು ಕೈ ತೊಳೆದು ಮನೆಯೊಳಗೆ ಬಂದರೆ ಆಕೆ ಹಳ್ಳದ ಹಾದಿ ಹಿಡಿಯುತ್ತಿದ್ದಳು. ಅಮ್ಮ ಅವಳ ಬೆನ್ನ ಹಿಂದೆಯೇ ಹುಟ್ಟಿದ ತಂಗಿಯ ಕೈಗಳಿಗೆ ಹಾಳೆಯ ತುಂಡು ಹಿಡಿಸಿ, ನೆಲ ಬಳುಗುವ ಕ್ರಮ ಕಲಿಸಿಕೊಡುತ್ತಿದ್ದರೆ, ಆಕೆ ಮಾಡಲಿಷ್ಟವಿಲ್ಲದ ಆ ಕೆಲಸ ತಪ್ಪಿಸಿ, “ನಾಳೆ ಆಡಬಹುದಾದ ಹೊಸ ನಾಟಕವೇನು’ ಎಂದು ಯೋಚಿಸುತ್ತ ಹಳ್ಳದ ನೀರಲ್ಲಿ ಕಾಲಾಡಿಸುತ್ತಿದ್ದಳು. ಒಂದಷ್ಟು ಹೊತ್ತು ಕಳೆದು ಮನೆ ಸ್ವತ್ಛವಾಗಿರಬಹುದೀಗ ಎಂಬ ಅಂದಾಜಲ್ಲಿ ಮನೆ ಕಡೆ ಹೆಜ್ಜೆ ಹಾಕುತ್ತಿದ್ದಳು. ಇನ್ನೂ ಸೆಗಣಿಯ ಹಸಿವಾಸನೆ ಹೋಗದ ನೆಲ, “ಕೆಲಸ ಮುಗಿದಿದೆ, ಇನ್ನು ಒಳಗೆ ಬರಬಹುದು’ ಎಂಬುದನ್ನು ಸೂಚಿಸುತ್ತಿತ್ತು. ತಮ್ಮ ಒಂದೆರಡು ಸಲ ಅಕ್ಕನ ಜಾಡು ಹಿಡಿದು ನಡೆದು ಅಕ್ಕನ ಗುಟ್ಟು ಕಂಡುಹಿಡಿದಿದ್ದ. ಆತನಿಗೆ ಅಕ್ಕ ಪೇರಳೇಹಣ್ಣು, ಬೆಲ್ಲದ ತುಂಡುಗಳ ಆಸೆ ತೋರಿಸಿ ಮಾತೆತ್ತದಂತೆ ಮಾಡಿದ್ದಳು.
ಅದೊಂದು ದಿನ ಮನೆಗೆ ಅಪರಿಚಿತರ ದಂಡು, ಅದೇ ಊರಿಗೆ ಯಾರದೋ ಮನೆಗೆ ಹೆಣ್ಣು ನೋಡಲು ಬಂದವರು. ಈ ಮನೆಯ ಯಜಮಾನರು ದಾರಿಯಲ್ಲಿ ಕಾಣಸಿಕ್ಕವರನ್ನು ಪರಿಚಯಿಸಿಕೊಂಡು ಊಟದ ಹೊತ್ತಾದ ಕಾರಣ, ನಮ್ಮ ಮನೆಗೆ ಬಂದು ಉಂಡು ಹೋಗಿ ಎಂದು ಉಪಚರಿಸಿದ್ದರು. ಊಟದ ಹೊತ್ತಿಗೆ ಬಂದವರನ್ನು ಕರೆದು ಮಣೆ ಹಾಕಿ ಕೂರಿಸಿ ಊಟದ ವ್ಯವಸ್ಥೆ ಮಾಡಲಾಯಿತು. ಅಮ್ಮನ ಜೊತೆ ಇವಳೂ, ಇವಳ ತಂಗಿಯೂ ಸೆರಗು ಬಿಗಿದು ಬಡಿಸಲು ನಿಂತಿದ್ದರು. ಊಟವಾಯಿತು, ಉಂಡೆದ್ದ ಗಂಡಸರು ಮನೆಯ ಹೊರಗಿನ ಚಾವಡಿಯಲ್ಲಿ ಕವಳದ ತಟ್ಟೆಗೆ ಕೈ ಹಾಕಿದ್ದರು. ಹೆಂಗಸರು ಕೈ ತೊಳೆದು ಬಂದು ಮತ್ತೆ ಅಡುಗೆಮನೆಯ ಬಾಗಿಲಿನಲ್ಲಿ ನಿಂತುಕೊಂಡರು. ಅಮ್ಮನ ಕಣ್ಣಿಗೆ ಬೀಳದಂತೆ ಆಕೆ ಹಟ್ಟಿಯ ಹಿಂದಿನ ಭಾಗಕ್ಕೆ ಹೋಗಿ ನಿಂತರೆ, ಜೊತೆಗೇ ಬಡಿಸಿದ ತಂಗಿ ನೆಲವಿಡೀ ಒರೆಸಿದಳು. ಬಂದವರು ಅಂಗಳದಾಚೆ ನಿಂತು ಒಂದಿಷ್ಟು ಪಿಸಿಪಿಸಿ ಮಾತನಾಡುತ್ತ ಮನೆಯ ಒಳಗೆ ಬಂದ ಮನೆ ಯಜಮಾನನಲ್ಲಿ , “ನಿಮ್ಮ ಎರಡನೆಯ ಹುಡುಗಿಯನ್ನು ಕೊಡುವುದಾದರೆ ನಮ್ಮ ಹುಡುಗನಿಗೆ ತಂದುಕೊಳ್ಳುತ್ತೇವೆ’ ಎಂದಿದ್ದರು. ಅನಿರೀಕ್ಷಿತವಾದ ಈ ಮಾತಿನಿಂದ ಮನೆಯ ಯಜಮಾನ ಉತ್ತರಿಸಲು ತಡಬಡಾಯಿಸುತ್ತಿದ್ದರೆ, ಹಿಂದಿನ ಬಾಗಿಲಿನಿಂದ ಮನೆಯ ಒಳಕ್ಕೆ ನುಗ್ಗುತ್ತಿದ್ದ ಆಕೆಗೂ ಸ್ಪಷ್ಟವಾಗಿ ಕೇಳಿಸಿತ್ತು ಈ ಮಾತು. ಅವರೇನೋ ತಮ್ಮ ವಿಳಾಸ ಕೊಟ್ಟು , “ಯೋಚಿಸಿ ಕಾಗದ ಬರೆಯಿರಿ’ ಎಂದು ಹೋಗಿಬಿಟ್ಟಿದ್ದರು. ಮರುದಿನದಿಂದ ಆಕೆ ಅಡುಗೆಮನೆ ಎಂದಲ್ಲ ಇಡೀ ಮನೆಯನ್ನು ಯಾವಾಗ ಬೇಕಾದರೆ ಆವಾಗ, ಬಗ್ಗಿದ ಬೆನ್ನನ್ನು ಒಂದಿಷ್ಟೂ ಮೇಲೆತ್ತದೆ ಒರೆಸಿ ಗುಡಿಸುವುದರಲ್ಲಿ ಪಳಗಿಯೇಬಿಟ್ಟಳು. ತಮ್ಮನಿಗೀಗ ಸಿಗದ ಪೇರಳೇ ಹಣ್ಣೂ, ಬೆಲ್ಲದ್ದೇ ಚಿಂತೆ. ಅಕ್ಕ ಹೀಗೆ ಬದಲಾಗಿದ್ಯಾಕೆ ಎಂದು ಬೈಯ್ದುಕೊಳ್ಳುತ್ತಿದ್ದ.
“ಮೇಲೆ ಇಟ್ಟರೆ ಕಾಗೆ ಕೊಂಡು ಹೋಗಬಹುದು, ಕೆಳಗಿಟ್ಟರೆ ಇರುವೆ ಕೊಂಡುಹೋಗ ಬಹುದು’ ಎಂಬಂತೆ ಮುದ್ದಿನಿಂದ ಬೆಳೆಸಿದ ಹುಡುಗಿಯವಳು. ಅಣ್ಣ ತಮ್ಮಂದಿರ ನಡುವೆ ಬೆಳೆದ ಒಬ್ಬಳೇ ಹುಡುಗಿಯೆಂಬ ಬಿಂಕ ಬೇರೆ. ಒಂದು ಕೆಲಸವನ್ನೂ ಅರಿಯದವಳೆಂಬ ಬಿರುದನ್ನು ಹೊತ್ತುಕೊಂಡೇ ಮದುವೆಯಾಗಿ ಹೋಗಿದ್ದವಳು. ಆಗೊಮ್ಮೆ ಈಗೊಮ್ಮೆ ತವರುಮನೆಯವರು ಒಬ್ಬೊಬ್ಬರಾಗಿಯೇ ಬಂದು ಮಗಳು ಸುಖವಾಗಿಯೇ ಇದ್ದಾಳಲ್ಲ ಎಂದು ಮಾತಾಡಿಸಿಕೊಂಡು ಹೋಗುತ್ತಿದ್ದರು. ಅದೊಂದು ದಿನ ಅಣ್ಣ ತನ್ನ ಮದುವೆಯ ಸುದ್ದಿಯನ್ನು ಮೊದಲು ತಿಳಿಸಲೆಂದು ಹೇಳದೇ ಕೇಳದೇ ಈ ತಂಗಿಯ ಮನೆಗೆ ಬಂದಿದ್ದ. ಕೆದರಿದ ಕೂದಲು, ಬೆವರಿಳಿಸಿಕೊಂಡ ಮುಖ, ಕೈಯಲ್ಲಿ ಹಿಡಿದ ನೆಲ ಒರೆಸುವ ಕೋಲು. ಅಣ್ಣನಿಗೆ ಭಯವಾಗಿತ್ತು. ಇವಳು ಇದನ್ನೆಲ್ಲ ಮಾಡಬೇಕಾ? ಇಂದೇ ಅಪ್ಪಅಮ್ಮನಿಗೆ ಈ ವಿಷಯ ಹೇಳಿ ತಂಗಿ ಕಷ್ಟಪಡುತ್ತಿರುವುದನ್ನು ತಿಳಿಸಲೇಬೇಕೆಂದುಕೊಂಡ. ಒಳ ಕೋಣೆಯಿಂದ “ಎಲ್ಲಿದ್ದೀಯಾ’ ತಂಗಿಯನ್ನು ಕರೆದ ಬಾವನ ಸ್ವರ ಕೇಳಿಸಿತು. ಕೊಂಚ ಸಿಟ್ಟಲ್ಲೇ ಇವನೂ ಒಳ ನುಗ್ಗಿದ. ಎತ್ತರದ ಸ್ಟೂಲಿನ ಮೇಲೆ ನಿಂತು, ಮುಖದಲ್ಲೆಲ್ಲ ಕರಿ ಮೆತ್ತಿಕೊಂಡು, ಕೈಯಲ್ಲೊಂದು ಜೇಡನ ಬಲೆ ತೆಗೆಯುವ ಉದ್ದನೆಯ ಹಿಡಿಸೂಡಿ ಹಿಡಿದ ಬಾವ ಕಾಣಿಸಿದ. ಅಣ್ಣನ ಮುಖದಲ್ಲೀಗ ತಿಳಿನಗು, ತಾನೂ ಬಾವನ ಜಾಗದಲ್ಲೇ ನಿಂತಂತೆ. ಪ್ರೀತಿ ಎಲ್ಲವನ್ನೂ ಜೊತೆಜೊತೆಗೆ ಮಾಡಲು ಕಲಿಸುತ್ತದೆ. ಆ ಪ್ರೀತಿ ಬದುಕಿನ¨ªಾದರೂ ಆಗಿರಬಹುದು, ಬದುಕಲು ಬೇಕಾದುದ್ದಾದರೂ ಆಗಿರಬಹುದು.
ಅನಿತಾ ನರೇಶ ಮಂಚಿ