ಕಲಬುರಗಿ: ಮಹಾಗಾಂವ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ವರ್ಚಸ್ಸಿನ ಊರಾಗಿದೆ. ಇಲ್ಲಿನ ರಾಜಕೀಯ ಇತಿಹಾಸ ಉದಾತ್ತವಾಗಿದೆ. ಆದ್ದರಿಂದ ಊರಿನ ಸಮಗ್ರ ಅಭಿವೃದ್ದಿಗೆ ಯುವಕರು ಹಾಗೂ ಸಾರ್ವಜನಿಕರು ಮುಂದಾಗಬೇಕು ಎಂದು ಇಲ್ಲಿನ ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರು ಹೇಳಿದರು.
ತಾಲೂಕಿನ ಮಹಾಗಾಂವ ಕ್ರಾಸ್ ಸಿದ್ದಭಾರತಿ ವಿದ್ಯಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾಗಾಂವ ಮಿತ್ರ ಮಂಡಳಿ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ವಾಮೀಜಿ ಮಾತನಾಡಿದರು. ಒಂದು ಗ್ರಾಮವೂ ಅಲ್ಲಿನ ಜನರ ಆಶಯಗಳಿಂದ ಮತ್ತು ಅವರ ಮಮತೆ ಹಾಗೂ ಕಾರ್ಯಗಳಿಂದ ತನ್ನ ಕೀರ್ತಿ ಹೆಚ್ಚಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಆರಂಭಗೊಳ್ಳುತ್ತಿರುವ ಮಿತ್ರಮಂಡಳಿ ಸದಸ್ಯರು ಉತ್ತಮವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ಮಹಾಗಾಂವ ಮಿತ್ರ ಮಂಡಳಿ ಒಂದು ಕುಟುಂಬದಂತೆ. ನಾನು ಕೂಡ ನಿಮ್ಮ ಮಿತ್ರ ಮಂಡಳಿಯಲ್ಲಿ ಒಬ್ಬನಾಗಿದ್ದು, ನಾವು ಮಹಾಗಾಂವ ನಮ್ಮನ್ನು ನೆನಪಿಸಿಕೊಳ್ಳುವಂತೆ ಕೊಡುಗೆ ಕೊಡಬೇಕು. ಕಲಬುರಗಿ ಅಭಿವೃದ್ಧಿ ಪ್ರಾಧಿಕಾರದಿಂದ ಮಿತ್ರಮಂಡಳಿಗೆ ನಿವೇಶನ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ನಿರ್ದೇಶಕ ವೈಜನಾಥ ತಡಕಲ್ ಮಾತನಾಡಿ, ಮಿತ್ರ ಮಂಡಳಿ ಶ್ರೇಯೋಭಿವೃದ್ಧಿಗೆ ಸಂಪೂರ್ಣ ಸಹಕಾರ ಕೊಡುವುದಾಗಿ ಮತ್ತು ಮಹಾಗಾಂವ ಗ್ರಾಪಂ ವತಿಯಿಂದ ಮಿತ್ರ ಮಂಡಳಿಗೆ ನಿವೇಶನ ಕಲ್ಪಿಸುವುದಾಗಿ ಭರವಸೆ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ, ಪ್ರಾಥಮಿಕ ಕೃಷಿ ಹಾಗೂ ಭೂ ಅಭಿವೃದ್ಧಿ ಬ್ಯಾಂಕ್ ನಿಯಮಿತ ಅಧ್ಯಕ್ಷ ಸಿಥಿಕಂಠ ತಡಲ ಮಾತನಾಡಿದರು. ಸಿದ್ದಭಾರತಿ ವಿದ್ಯಾಮಂದಿರ ಕಾರ್ಯದರ್ಶಿ ಕಲ್ಯಾಣರಾವ ಬುಜರಕೆ ಅತಿಥಿಗಳಾಗಿ
ಆಗಮಿಸಿದ್ದರು. ಮಹಾಗಾಂವ ಮಿತ್ರ ಮಂಡಳಿ ಅಧ್ಯಕ್ಷ ವೀರಪ್ಪ ರಟಕಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅನಿಲಕುಮಾರ ರಟಕಲ್ಲ ಸ್ವಾಗತಿಸಿದರು. ಖಜಾಂಚಿ ಸಿದ್ದಲಿಂಗಪ್ಪ ಹತ್ತಿ ವಂದಿಸಿದರು. ಡಾ| ಸಂಗಣ್ಣ ತಡಕಲ್ಲ ನಿರೂಪಿಸಿದರು.