ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆಯ ನೂತನ ಕಟ್ಟಡ ಕಾಮಗಾರಿಗೆ ಮೇಲಿಂದ ಮೇಲೆ ವಿಘ್ನಗಳು ಒದಗುತ್ತಿವೆ. ನಾಳೆಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿ ತರಾತುರಿಯಲ್ಲಿ ಪೊಲೀಸ್ ಠಾಣೆಯನ್ನು ಸ್ಥಳಾಂತರಗೊಳಿಸಿ ನಾಲ್ಕು ತಿಂಗಳು ಕಳೆದರೂ ಮಹತ್ವದ ಪ್ರಗತಿ ಆಗಲೇ ಇಲ್ಲ. ಈಗ ಪಿಲ್ಲರ್ ಗುಂಡಿ ತೋಡಿ ಹದಿನೈದು ದಿನಗಳಾಗುತ್ತ ಬಂದರು ಕಾಮಗಾರಿ ಮುಂದುವರಿಯದೆ ಅನಾಹುತಗಳಿಗೆ ಆಹ್ವಾನ ನೀಡುವಂತಿದೆ. ಪಿಲ್ಲರ್ ಗುಂಡಿಗಳು ಬಾಯ್ತೆರೆದು ಭಯ ಮೂಡಿಸುತ್ತಿದ್ದು, ನಾಗರಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಸುಮಾರು 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಉಪ್ಪಿನಂಗಡಿ ಪೊಲೀಸ್ ಠಾಣೆಯ ನೂತನ ಕಟ್ಟಡದ ಗುತ್ತಿಗೆಯನ್ನು ಗೃಹ ಮಂಡಳಿ ವಹಿಸಿಕೊಂಡಿದೆ. ನಿರ್ಮಾಣ ಕಾರ್ಯದ ಹೊಣೆಯನ್ನು ಕುಂದಾಪುರದ ಗುತ್ತಿಗೆದಾರರಿಗೆ ನೀಡಲಾಗಿದೆ. ಪೊಲೀಸ್ ಠಾಣೆ ಕಟ್ಟಡದ ನಿರ್ಮಾಣ ಪ್ರಕ್ರಿಯೆ ಮಂದಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಸತತವಾಗಿ ವರದಿಗಳು ಬಂದ ಬಳಿಕ ಎಚ್ಚೆತ್ತ ಇಲಾಖೆ, ಕಾಮಗಾರಿಗೆ ಚಾಲನೆ ನೀಡಿತ್ತು. ಯಂತ್ರದ ಮೂಲಕ ಕಟ್ಟಡ ನಿರ್ಮಾಣಕ್ಕೆ ಪಿಲ್ಲರ್ ಗುಂಡಿಗಳನ್ನು ತೆಗೆಯಲಾಗಿತ್ತು. ಇನ್ನಾದರೂ ಕಾಮಗಾರಿ ಬಿರುಸು ಪಡೆದೀತು ಎಂಬ ನಿರೀಕ್ಷೆ ಹುಸಿಯಾಗಿದ್ದು, ಕಾಮಗಾರಿ ನಡೆಸುವವರೇ ಕಣ್ಮರೆಯಾಗಿದ್ದಾರೆ.
ಪಿಲ್ಲರ್ ಗುಂಡಿ ತೋಡಿ 15 ದಿನಗಳಾಗುತ್ತ ಬಂದರೂ ಕಾಮಗಾರಿ ಮುಂದುವರಿಸದೇ ಇರುವುದು ಹಲವು ಸಮಸ್ಯೆ ತಂದೊಡ್ಡಿದೆ. ಸದ್ಯ ಸ್ಥಳಾಂತರಗೊಂಡಿರುವ ಪೊಲೀಸ್ ಠಾಣೆಗೆ ಜನ ತೆರಳಬೇಕಿದ್ದರೆ ಇದೇ ದಾರಿಯಲ್ಲಿ ಸಂಚರಿಸಬೇಕು. ಗುಂಡಿಗಳ ಅಂಚಿನಲ್ಲಿ ಜನ ಹೆದರುತ್ತಲೇ ಸಾಗುತ್ತಿದ್ದಾರೆ. ರಾತ್ರಿ ವೇಳೆ ವಿದ್ಯುತ್ ಕೈಕೊಟ್ಟರೆ ಗುಂಡಿಗೆ ಬೀಳುವ ಅಪಾಯವೂ ಇದೆ. ಮನುಷ್ಯರಲ್ಲದೆ ಪ್ರಾಣಿಗಳಿಗೂ ಇದು ಅಪಾಯಕಾರಿ ಎನ್ನುವುದು ಸ್ಥಳೀಯರ ಅಭಿಪ್ರಾಯ. ಯಾವುದೇ ಕಾಮಗಾರಿಯ ವೇಳೆ ಜನರ ಸುರಕ್ಷತೆಗೂ ಆದ್ಯತೆ ನೀಡಬೇಕಾಗಿರುವುದು ಗುತ್ತಿಗೆದಾರರ ಕರ್ತವ್ಯ. ಅಪಾಯಕಾರಿ ಗುಂಡಿಗಳನ್ನು ತೋಡಿ ಯಾವುದೇ ಸುರಕ್ಷಾ ಅಡೆತಡೆಗಳನ್ನು ರಚಿಸದೆ ಹಾಗೇ ಬಿಟ್ಟಿರುವುದು ಅನಾಹುತಗಳಿಗೆ ಅವಕಾಶ ಮಾಡಿಕೊಟ್ಟಿದೆ. ತೋಡಿದ ಗುಂಡಿಗಳಿಗೆ ಜನರು ಅಥವಾ ಪ್ರಾಣಿಗಳು ಬೀಳುವ ಮುನ್ನ ಎಚ್ಚೆತ್ತು ಕಾಮಗಾರಿ ಮುಂದುವರಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಣ್ಣಿನ ಗುಣ ನೋಡಬೇಕಂತೆ!
ಗುಂಡಿ ತೋಡಿದ ಮೇಲೆ ಕಾಮಗಾರಿ ನಿಲ್ಲಿಸಿರುವ ಬಗ್ಗೆ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದಾಗ, ಹೌಸಿಂಗ್ ಬೋರ್ಡ್ ನಿರ್ದೇಶನದಂತೆ ಕಾಮಗಾರಿ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಕಾಮಗಾರಿ ಸ್ಥಳದ ಮಣ್ಣಿನ ಗುಣದ ಅಧ್ಯಯನ ವರದಿಗಾಗಿ ಕಾಯಲಾಗುತ್ತಿದೆ. ವರದಿ ಬಂದ ಮೇಲೆ ಯಾವ ಗುಣಮಟ್ಟದ ಹಾಗೂ ಸಾಂದ್ರತೆಯ ಕಬ್ಬಿಣವನ್ನು ಅಳವಡಿಸಬೇಕೆಂದು ನಿರ್ಧರಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಂತ್ರಜ್ಞಾನ ಬೆಳೆದಿರುವ ಈ ದಿನಗಳಲ್ಲೂ ವರದಿಗಾಗಿ ಇಷ್ಟು ದಿನ ಕಾಯಬೇಕೇ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.