ಹಳ್ಳಿಯಲ್ಲಿನ ಜನ್ಮಭೂಮಿಯನ್ನು ತೊರೆದು, ಹೊಟ್ಟೆ ಪಾಡಿಗಾಗಿ ಬೆಂಗಳೂರಿನಂಥ ಮಹಾನಗರಕ್ಕೆ ಬಂದರೆ, ಈಗ ಕೋವಿಡ್ 19 ಒಂದೇ ಸಮನೆ, ನಮ್ಮ ಯುವಕರನ್ನು ಹಳ್ಳಿಗೆ ಓಡಿಸಿದೆ. ಪದೇಪದೆ ಕೈಕೊಡುವ ಕರೆಂಟು, ನೆಟ್ವರ್ಕುಗಳು, ಜಾನುವಾರುಗಳ ಕೂಗು, ಇವೆಲ್ಲದರ ನಡುವೆ ಅವರ ಕೆಲಸ ಸಾಗುತಿದೆ. ಅವರೆಲ್ಲರ ಅನುಭವ ಹೇಗಿದೆ? ನೋಡೋಣ ಬನ್ನಿ…
ಎಸಿ ಇಲ್ಲದ ಊರಿನಲ್ಲಿ… : ವರ್ಕ್ ಫ್ರಮ್ ಹೋಮ್ ಮಾಡೋದು ಸ್ವಲ್ಪ ಕಷ್ಟವೇ. ಆದರೆ, ಕೋವಿಡ್ 19 ಭಯದಲ್ಲಿರುವ ನಮಗೆ ಇದು ಅನಿವಾರ್ಯ. ಬೆಂಗಳೂರಿನಲ್ಲಿ ಎಸಿಯಲ್ಲಿ ಕುಳಿತು ಕೆಲಸ ಮಾಡುವುದಕ್ಕೂ, ಊರಿಗೆ ಬಂದು ಕರಾವಳಿಯ ಸೆಖೆಯಲ್ಲಿ ಕೆಲಸ ಮಾಡುವುದಕ್ಕೂ ಅಜಗಜಾಂತರವಿದೆ. ನಮ್ಮೂರಿನಲ್ಲಿ ನೆಟ್‌ವರ್ಕ್ ಸಿಗುವುದೇ ಇಲ್ಲ. ದೂರದ ರಸ್ತೆಗಳಿಗೆ ಬಂದು ಕೆಲಸ ಮಾಡಬೇಕು. ಆಫೀಸ್‌ನ ಕರೆಗಳನ್ನು ಸ್ವೀಕರಿಸುವಾಗ, ನೆಟ್‌ವರ್ಕ್ ಸಮಸ್ಯೆಗಳು ಎದುರಾಗುತ್ತವೆ. ನೆಟ್‌ವರ್ಕ್ ಹೋಗುತ್ತೆ, ಬರುತ್ತೆ. ಅರ್ಧಂಬರ್ಧ ವಾಯ್ಸ್ ಕೇಳಿಸುತ್ತೆ. ಆದರೆ, ಒಂದು ಸಮಾಧಾನ. ಬೆಂಗಳೂರಿನ ಜನಜಂಗುಳಿ, ಟ್ರಾಫಿಕ್ ನ ಕಿರಿಕಿರಿಯಿಂದ ಬಿಡುಗಡೆ ಸಿಕ್ಕಂತಾಗಿದೆ.
-ಮೇಘನ್ ಪೂಜಾರಿ, ಐಟಿ ಉದ್ಯೋಗಿ, ಕೋಣಿ, ಕುಂದಾಪುರ
ಐರನ್ ಚಿಂತೆ ಇಲ್ಲ, ಮೇಕಪ್ ಕಿರಿಕಿರಿ ಇಲ್ಲ : ಮೆಟ್ರೊ ಸಿಟಿಯ ಜಂಜಾಟದಲ್ಲಿ, ಕೆಲಸದ ಅನಿವಾರ್ಯತೆಯಿಂದ ಸಿಕ್ಕಿಹಾಕಿಕೊಂಡ ಹೆಣ್ಣು ಮಕ್ಕಳಿಗೆ “ವರ್ಕ್ ಫ್ರಮ್ ಹೋಂ’ ಕಿವಿಗೆ ಬಿದ್ರೆ, ನಿರಾತಂಕದಲ್ಲಿ ರೆಕ್ಕೆ ಮೂಡಿದ ಖುಷಿ. ಅವಿವಾಹಿತ ಹೆಣ್ಣುಮಕ್ಕಳಾದರೆ ಬೆಳಗ್ಗೆ ಏಳ್ಳೋಕೆ ಗಡಿಬಿಡಿ ಇಲ್ಲ. ಡ್ರೆಸ್ ಯಾವುದು ಹಾಕ್ಕೋಬೇಕು? ಐರನ್ ಆಗಿಲ್ಲ ಎಂಬ ಚಿಂತೆ ಅಥವಾ ಮೇಕಪ್‌ನ ಕಿರಿಕಿರಿ ಯಾವುದೂ ಇಲ್ಲ. ಟ್ರಾಫಿಕ್ ಕಿರಿಕಿರಿ ಮೊದಲೇ ಇಲ್ಲ. ಈಗ ಒಂಥರಾ ರಿಲಾಕ್ಸೇಷನ್ ಮೂಡ್‌ನಲ್ಲಿ ಕೂತ್ಕೊಂಡು ಕೆಲಸ ಮಾಡೋ ಖುಷಿ. ಕೋವಿಡ್ 19 ಭೀತಿ ಇರದಿದ್ದರೆ ಜಾಕ್‌ಪಾಟ್ ಖುಷಿ ಇರ್ತಿತ್ತು. ಸದ್ಯ ಊರಿಗೆ ಬಂದು ಕೆಲಸದ ನೆಪದಲ್ಲಿ ಲ್ಯಾಪ್ ಟಾಪ್ ಹಿಡ್ಕೊಂಡು ಅಮ್ಮನ ಹತ್ತಿರ ಉಪಚಾರ ಮಾಡಿಸ್ಕೊಂಡು ಕೆಲಸ ಮಾಡೋದು, ಎಲ್ಲೆಂದರಲ್ಲಿ ಕೂತ್ಕೊಂಡು ಕೆಲಸ ಮಾಡೋ ಅನುಭವ ಹೊಸತು. –
ಚೈತ್ರಿಕಾ ನಾಯ್ಕ, ಪಿ.ಆರ್., ಹರ್ಗಿ, ಸಿದ್ದಾಪುರ
ಅಡುಗೆಮನೆಯ ತಿಂಡಿ ಡಬ್ಬ ಕರೆಯುತ್ತೆ… : ನಾನು ಕೆಲಸ ಮಾಡೋದು ತ್ರಿವೇಂದ್ರಂನಲ್ಲಿ, ಈಗ, ಪುತ್ತೂರು ಸಮೀಪದ ನನ್ನ ಊರಿಗೆ ಬಂದಿದ್ದೇನೆ. ಬೆಳಗ್ಗೆ ಎದ್ದು ರೆಡಿಯಾಗಿ ಬುತ್ತಿ ಪ್ಯಾಕ್ ಮಾಡಿ, ತರಾತುರಿಯಲ್ಲಿ ಆಫೀಸಿನತ್ತ ಹೆಜ್ಜೆ ಹಾಕೋ ಅವಸರದ ದಿನಚರಿಯಿಂದ ಮುಕ್ತಿ ಸಿಕ್ಕಂತಾಗಿದೆ. ಆಗೊಮ್ಮೆ, ಈಗೊಮ್ಮೆ ಮನೆಯವರಿಂದ ಸಣ್ಣ ಹರಟೆ ರಿಲ್ಯಾಕ್ಸ್ ನೀಡುತ್ತಿದೆ. ಇದು ತಾತ್ಕಾಲಿಕ ನೆಮ್ಮದಿಯಾದರೂ, ಈಗಿನ ದಿನಕ್ಕೆ ಪ್ಲಸ್ ಪಾಯಿಂಟ್ ಅಂತಲೇ ಹೇಳಬಹುದು. ಅಡುಗೆಮನೆಯ ಡಬ್ಬದಲ್ಲಿರುವ ಕರಿದ ತಿಂಡಿಗಳು, ಅಮ್ಮನ ಕೈಯಾರೆ ಮಾಡಿದ ಚಹಾ, ಕೆಲಸದಿಂದ ಬಸವಳಿದ ದೇಹಕ್ಕೆ ಟಾನಿಕ್ ಥರ ಆ್ಯಕ್ಟ್ ಮಾಡೋದಂತೂ ಸುಳ್ಳಲ್ಲ. ಆದರೆ, ಕೆಲವೊಮ್ಮೆ ಮೀಟಿಂಗ್‌ನಲ್ಲಿ ಇರಬೇಕಾದರೆ, ಅಪ್ಪ ನೋಡುತ್ತಿರುವ
ಟಿವಿಯ ಸೌಂಡು, ಅಮ್ಮನ ಅಡುಗೆಕೋಣೆಯ ಪಾತ್ರೆಗಳ ಸದ್ದು, ಕುಕ್ಕರ್‌ನ ಶಿಳ್ಳೆ- ಇವುಗಳಿಂದ ತಪ್ಪಿಸಿಕೊಳ್ಳೋದಕ್ಕೆ ಲ್ಯಾಪ್‌ಟಾಪ್ ಹಿಡಿದು ಮನೆಯಿಂದ ಹೊರಗೆ ಓಡುವ ಪ್ರಸಂಗಗಳು ಇದ್ದಿದ್ದೇ. ಆಫೀಸಿನ ಶಿಸ್ತು- ಸಂಯಮ ಮತ್ತು ಮನೆಯ ಪರಿಸರದಲ್ಲಿರುವ ಆಲಸ್ಯತನ, ಮನರಂಜನೆಯನ್ನು ಬ್ಯಾಲೆನ್ಸ್ ಮಾಡೋದೇ ಒಂದು ಸವಾಲು
– ಜೈ ದೇವ್, ಐಟಿ ಉದ್ಯೋಗಿ, ಪೂಣಚ
ನಾಯಿ ಬೊಗಳ್ಳೋದೂ ಫಾರಿನ್ನಿಗೆ ಕೇಳ್ಸುತ್ತೆ! : ನಮ್ ಹಳ್ಳಿ ಜನ ಬೇಗ ಎದ್ದು ತಿಂಡಿ ತಿಂದು, ದನ, ಕುರಿಗಳನ್ನು ಮೇಯಿಸೋಕೆ ಕರ್ಕೊಂಡ್ ಹೊರಟ್ರೆ, ನಾನು ಲ್ಯಾಪ್ ಟಾಪ್ ತಗೊಂಡ್ ಲಾಗಿನ್ ಆಗ್ಬೇಕು ಅಂತ ಅರ್ಥ. ಇಲ್ಲಿನ ಅಲಾರಂ ಸಿಸ್ಟಮ್ ಗಳೇ ಬೇರೆ. ಬೆಂಗಳೂರಿಂದಕೆಲಸ ಹೊತ್ಕೊಂಡು ಇಲ್ಲಿಗೆ ಬಂದೆ. ನಮ್ಮೂರಲ್ಲಿ ವರ್ಕ್ ಫ್ರಂ ಹೋಮ್ ಅಂದ್ರೆ, ನೆಟ್ವರ್ಕ್ ಹುಡ್ಕೊಂದೇ ದೊಡ್ಡ ಕೆಲ್ಸ. ನಾನು ಒಂದು ಎಂಎಸ್‌ಸಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸ್ಪೆಷಲಿÓr… ಆಗಿದ್ದೇನೆ. ಆದ್ದರಿಂದ ನಾನು ಓವರ್‌ಸೀಸ್ ಪ್ರಾಜೆಕ್ಟ್ ಗಳನ್ನು ಹ್ಯಾಂಡಲ್ ಮಾಡೋದ್ರಿಂದ ಮೇಲ್, ಕಾಲ್‌ಗಳು ತುಂಬಾ ಜಾಸ್ತಿ. ಮನೆಯ ಮೂಲೆ ಮೂಲೆಗಳನ್ನು ಹುಡುಕಿ, ಹೈ ಸ್ಪೀಡ್ ನೆಟ್ವರ್ಕ್ ಝೋನ್ ಅಂತ ನಾಮಕರಣ ಮಾಡಿ, ಒಂದು ಜಾಗದಲ್ಲಿ ಕೂತು 3 ಎಂ.ಬಿ. ಮೇಲ್ ಕಳಿಸುವಷ್ಟರಲ್ಲಿ ನಾಲ್ಕು ನಿಮಿಷನಾದ್ರೂ ಬೇಕು. ಒಂದು ಗಂಟೇಲಿ ಆಗೋ ಕೆಲಸವನ್ನು ಎರಡು ಗಂಟೆ ಮಾಡ್ಕೊಂಡು ಒದ್ದಾಡುವಾಗ ಬೇಕಿರೋ ತಾಳ್ಮೆಯೇ ಬೇರೆ. ಯಾವುದೋ ದೇಶದಲ್ಲಿ ಕೂತಿರೋರ ಜೊತೆ ಸ್ಕೈಪ್ ಕಾಲ್‌ನಲ್ಲಿದ್ದಾಗ, ದಾರಿಯಲ್ಲಿ ಹೋಗ್ತಿರೋ ನಾಯಿನೋ, ಹಸುವೋ ಅಥವಾ ಎಮ್ಮೆಯೋ ಜೋರಾಗಿ ಕೂಗಿದ್ರೆ, ನನ್ ಕ್ಲೈಂಟ್ಸ್ ಆ ಕಡೆಯಿಂದ s that cow?, Heyy that’s Dog ಅಂದಾಗ ನಗಬೇಕೋ, ಅಳಬೇಕೋ ಗೊತ್ತಾಗಲ್ಲ. –
ಭವ್ಯ ಕೆ., ಎಂಎನ್‌ಸಿ ಕಂಪನಿ ,ಕಬ್ಬಳ್ಳಿ, ಚನ್ನರಾಯಪಟ್ಟಣ