ನವದೆಹಲಿ: ಮುಂದಿನ ಒಂದು ವರ್ಷದ ವರೆಗೆ ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್)ಗಳಲ್ಲಿ ಮನೆಯಿಂದಲೇ ಕೆಲಸ ಮಾಡುವ (ಡಬ್ಲ್ಯೂ ಎಫ್ಎಚ್) ವ್ಯವಸ್ಥೆಯನ್ನು ಮುಂದುವರಿಸಲಾಗಿದೆ. ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ.
ದೇಶಾದ್ಯಂತ ಒಂದೇ ರೀತಿಯಾಗಿ ಡಬ್ಲ್ಯೂ ಎಫ್ಎಚ್ ನಿಯಮಗಳು ಇರಬೇಕು ಎಂದು ಉದ್ದಿಮೆ ವಲಯದಿಂದ ಮನವಿ ಸಲ್ಲಿಕೆಯಾಗಿತ್ತು. ಅದನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು, ತಾತ್ಕಾಲಿಕವಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ, ಆಫ್ಸೈಟ್‌ನಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಕೇಂದ್ರ ಸರ್ಕಾರದ ನಿಯಮ ಅನ್ವಯವಾಗಲಿದೆ. ನಿಗದಿತ ಸಂಸ್ಥೆಯ ಒಟ್ಟು ಉದ್ಯೋಗಿಗಳ ಪೈಕಿ ಶೇ.50 ಮಂದಿಗೆ (ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರನ್ನೂ ಸೇರಿಸಿಕೊಂಡು) ಅನ್ವಯವಾಗಲಿದೆ ಎಂದೂ ವಾಣಿಜ್ಯ ಸಚಿವಾಲಯ ಆದೇಶದಲ್ಲಿ ತಿಳಿಸಿದೆ.
ಒಂದು ವೇಳೆ ವಿಶೇಷ ಆರ್ಥಿಕ ವಲಯದಲ್ಲಿ ಉದ್ಯೋಗದಲ್ಲಿ ಇರುವವರು ಈಗಾಗಲೇ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯಲ್ಲಿ ಇದ್ದರೆ, 90 ದಿನಗಳು ಕಳೆದ ಬಳಿಕ ಅದನ್ನು ವಿಸ್ತರಿಸಲು ಅಭಿವೃದ್ಧಿ ಆಯುಕ್ತರಿಗೆ ಕೋರಿಕೆ ಸಲ್ಲಿಸಬೇಕಾಗುತ್ತದೆ.