Advertisement

ಗೌರಿ ಹತ್ಯೆಗೆ ನಾಲ್ಕು ತಂಡಗಳಿಂದ ಕೆಲಸ

11:48 AM Jun 15, 2018 | Team Udayavani |

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಮನೆ ಎದುರೇ ಬರ್ಬರವಾಗಿ ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್‌ ಅವರಿಗೆ ಗುಂಡಿಕ್ಕಲು ಒಂದಲ್ಲ, ಎರಡಲ್ಲ ಬರೋಬರಿ ನಾಲ್ಕು ತಂಡಗಳು ಕೆಲಸ ಮಾಡಿವೆ ಎಂಬ ಅಂಶ ಎಸ್‌ಐಟಿ ತನಿಖೆಯಿಂದ ಬೆಳಕಿಗೆ ಬಂದಿದೆ.

Advertisement

ಗೌರಿ ಹತ್ಯೆಗೆ ಒಂದು ವರ್ಷದಿಂದ ಸಂಚು ರೂಪಿಸಲಾಗಿತ್ತು. ಇದಕ್ಕಾಗಿ ನಾಲ್ಕು ತಂಡಗಳು ಕೆಲಸ ಮಾಡಿವೆ. ಪ್ರಮುಖವಾಗಿ ಮೊದಲನೇ ತಂಡ ಗೌರಿ ಲಂಕೇಶ್‌ರನ್ನು ಒಂದು ವರ್ಷ ಕಾಲ, ಅವರ ಹತ್ತಿರದಿಂದಲೇ ಹಿಂಬಾಲಿಸಿ ಅವರಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಸಂಗ್ರಹಿಸಿತ್ತು.

ಗೌರಿ ಅವರು ನೀಡಿದ್ದ ಹಿಂದೂ ವಿರೋಧಿ ಹೇಳಿಕೆಗಳು, ಪತ್ರಿಕೆಗಳಲ್ಲಿ ಪ್ರಕಟವಾದ ಬರಹಗಳು ಸೇರಿ ಇತರೆ ದಾಖಲೆಗಳನ್ನು ಸಂಗ್ರಹಿಸಿ ಎರಡನೇ ತಂಡಕ್ಕೆ ನೀಡುತ್ತಿತ್ತು. ಈ ಮಾಹಿತಿ ಪಡೆದ 2ನೇ ತಂಡ ಮಾಹಿತಿಯ ಪರಾಮರ್ಶೆ ನಡೆಸಿ ನೀಲನಕ್ಷೆ ತಯಾರಿಸಿ 3ನೇ ತಂಡಕ್ಕೆ ಕಳುಹಿಸಿದರೆ, ಮೂರನೇ ತಂಡ ಹತ್ಯೆಗೂ ಆರು ತಿಂಗಳ ಮೊದಲು ಗೌರಿ ಲಂಕೇಶ್‌ರ ಇಡೀ ದಿನದ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿತ್ತು.

ಗೌರಿ ಲಂಕೇಶ್‌ ಯಾವ ಸ್ಥಳಕ್ಕೆ ಹೋಗುತ್ತಾರೆ. ಯಾರನ್ನು ಭೇಟಿ ಮಾಡುತ್ತಾರೆ. ಎಷ್ಟು ಗಂಟೆಗೆ ಮನೆಗೆ ಬರುತ್ತಾರೆ. ಬರುವ ದಾರಿ ಯಾವುದು, ಆ ಮಾರ್ಗದಲ್ಲಿ ಸಿಸಿಟಿವಿಗಳು ಎಲ್ಲೆಲ್ಲಿವೆ ಎಂಬೆಲ್ಲ ಮಾಹಿತಿ ಸಂಗ್ರಹಿಸಿ ನೀಲನಕ್ಷೆ ಸಿದ್ಧಪಡಿಸಿ ನಾಲ್ಕನೇ ತಂಡಕ್ಕೆ ನೀಡಿತ್ತು.

ನಾಲ್ಕೂ ತಂಡಕ್ಕೆ ಒಬ್ಬನೇ ಬಾಸ್‌: ಈ ನಾಲ್ಕು ತಂಡಗಳಲ್ಲಿ ತಲಾ ಮೂರರಿಂದ ನಾಲ್ಕು ಮಂದಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಒಬ್ಬ ವ್ಯಕ್ತಿ ಮಾತ್ರ ಎಲ್ಲ ತಂಡಗಳ ಮೇಲೆ ಹಿಡಿತ ಹೊಂದಿದ್ದ. ಮೊದಲ ಮೂರು ತಂಡಗಳಿಂದ ಎಲ್ಲ ಮಾಹಿತಿ ಸಂಗ್ರಹಿಸಿದ ಕೊನೆಯ, ಅಂದರೆ ನಾಲ್ಕನೇ ತಂಡದ ಸದಸ್ಯರು ಸೆ.5ರಂದು ಗೌರಿಲಂಕೇಶ್‌ ಅವರನ್ನು ಹತ್ಯೆಗೈದಿದ್ದರು.

Advertisement

ಬೈಕ್‌, ಗನ್‌ ಸಿಕ್ಕಿಲ್ಲ: ಕೃತ್ಯಕ್ಕೆ ಬಳಸಿದ್ದ ಬೈಕ್‌ ಮತ್ತು ಗುಂಡು ಹಾರಿಸಿದ ಗನ್‌ ಇದುವರೆಗೂ ಪತ್ತೆಯಾಗಿಲ್ಲ. ಇನ್ನು, “ಹತ್ಯೆ ಬಳಿಕ ಗನ್‌ ಅನ್ನು ಬೇರೊಬ್ಬರಿಗೆ ನೀಡಿದ್ದೆ’ ಎಂದು ಪ್ರಕರಣದ ಪ್ರಮುಖ ಆರೋಪಿ ವಾಗ್ಮೋರೆ ಹೇಳಿಕೆ ನೀಡಿರುವುದು ಎಸ್‌ಐಟಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮೋಹನ್‌ ಗೌಡ ವಶಕ್ಕೆ ಸಾಧ್ಯತೆ?: ಪ್ರಕರಣದ ಆರೋಪಿ ಕೆ.ಟಿ.ನವೀನ್‌ ಕುಮಾರ್‌ ಅಲಿಯಾಸ್‌ ಹೊಟ್ಟೆ ಮಂಜ ಮತ್ತು ಈತನ ಪತ್ನಿ ರೂಪ ನೀಡಿರುವ ಹೇಳಿಕೆಯನ್ನಾಧರಿಸಿ ಹಿಂದೂ ಜನಜಾಗೃತಿ ಸಮಿತಿ ಮುಖಂಡ ಮೋಹನ್‌ ಗೌಡ ಅವರನ್ನು ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಮೋಹನ್‌ ಗೌಡ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಕರಣದ 2ನೇ ಆರೋಪಿ ಪ್ರವೀಣ್‌ ಅಲಿಯಾಸ್‌ ಸುಜಿತ್‌ ಗೌಡ, ಮೋಹನ್‌ಗೌಡ ಹೆಸರು ಹೇಳಿಕೊಂಡೇ ನವೀನ್‌ ಕುಮಾರ್‌ನನ್ನು ಪರಿಚಯಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಪರಿಚಯಿಸಿದ ಉದ್ದೇಶ ಏನು ಎಂಬ ಬಗ್ಗೆ ಮೋಹನ್‌ಗೌಡರನ್ನು ವಶಕ್ಕೆ ಪಡೆದು ಹೇಳಿಕೆ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next