ಕೋಲಾರ: ಮಕ್ಕಳಿಗೆ ಯೋಗ್ಯತಾ ಪತ್ರನೀಡುವುದಕ್ಕಿಂತ ಯೋಗ್ಯರನ್ನಾಗಿಸಿ, ಬೋಧನೆ ಮಾಡುವ ಶಿಕ್ಷಕರನ್ನು ಹುರಿ ದುಂಬಿಸಿ, ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ ಎಸ್ಸೆಸ್ಸೆಲ್ಸಿ ಫಲಿತಾಂಶಲ್ಲಿ ಜಿಲ್ಲೆ ಪ್ರಥಮ ಸ್ಥಾನಗಳಿಸಲು ಶ್ರಮಿಸಿ ಎಂದು ರಾಜ್ಯ ಶಿಕ್ಷಣ, ಸಂಶೋಧನಾ, ತರಬೇತಿ ಸಂಸ್ಥೆ ಜಂಟಿ ನಿರ್ದೇಶಕಿ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಗಾಯತ್ರಿದೇವಿ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಹೇಳಿದರು.
ಶುಕ್ರವಾರ ನಗರದ ಸೆಂಟ್‌ಆನ್ಸ್ ಶಾಲೆ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ, ಶಾಲೆಗಳಲ್ಲಿ ಹಾಜರಾತಿ ಉತ್ತಮಪಡಿಸಲುಮತ್ತು ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕುರಿತಂತೆ ಚರ್ಚಿಸಲು ಕರೆದಿದ್ದ ಕೋಲಾರ, ಮುಳಬಾಗಿಲು ತಾಲೂಕು ಸರ್ಕಾರಿ, ಅನುದಾ ನಿತ, ಖಾಸಗಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಅನುತ್ತೀರ್ಣ ಆಗಬಾರದು: ಕಳೆದ ಬಾರಿ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 5ನೇ ಸ್ಥಾನ ಮತ್ತು ಗುಣಾತ್ಮಕ ಫಲಿತಾಂಶದಲ್ಲಿ ರಾಜ್ಯದಲ್ಲೇ 2ನೇ ಸ್ಥಾನದ ಹೆಗ್ಗಳಿಕೆ ಪಡೆದಿದೆ. ಈ ಬಾರಿ ಎರಡರಲ್ಲೂ ಜಿಲ್ಲೆ ಪ್ರಥಮ ಸ್ಥಾನ ಗಳಿಸಬೇಕು, ಯಾವೊಬ್ಬ ವಿದ್ಯಾರ್ಥಿಯೂ ಅನುತ್ತೀರ್ಣವಾಗಬಾರದು ಎಂದರು.
1.5ಕೋಟಿ ಮಕ್ಕಳ ದೊಡ್ಡ ಇಲಾಖೆ: 1.5 ಕೋಟಿ ಮಕ್ಕಳು, 85 ಸಾವಿರ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು, 5 ಲಕ್ಷ ಶಿಕ್ಷಕರು ಮತ್ತು 2.5 ಕೋಟಿ ಪೋಷಕರ ಸಂಪರ್ಕದಲ್ಲಿರುವ ಅತಿ ದೊಡ್ಡ ಇಲಾಖೆ ನಮ್ಮದು, ಸಮಾಜಕ್ಕೆ ಮಾರ್ಗದರ್ಶನ, ಮಾನವ ಸಂಪನ್ಮೂಲ ನೀಡುವ ಹೊಣೆ ಶಿಕ್ಷಣ ಇಲಾಖೆಯದ್ದಾಗಿದೆ ಎಂದರು.
ಡಯಟ್ ಪ್ರಾಂಶುಪಾಲ ನಾಗೇಶ್, ಜೂ.14 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ, ಕಾಲಾವಕಾಶ ಕಡಿಮೆ ಇದೆ, ಎಲ್ಲರ ಸಹಕಾರ ಪಡೆದು ಜಿಲ್ಲೆ ಪ್ರಥಮ ಸ್ಥಾನ ಗಳಿಸಲು ಶ್ರಮಿಸೋಣ ಎಂದರು.ಬಿಇಒ ನಾಗರಾಜಗೌಡ, ಜಿಪಂ ಸಿಇಒ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಂಟಿ ನಿರ್ದೇಶಕಿ ಗಾಯತ್ರಿದೇವಿ, ಡಯಟ್ ಪ್ರಾಂಶುಪಾಲ ನಾಗೇಶ್‌ರನ್ನು ಜಿಲ್ಲಾ ಮುಖ್ಯಶಿಕ್ಷಕರ ಸಂಘದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ದೈಹಿಕ ಶಿಕ್ಷಣ ಅ ಧೀಕ್ಷಕ ಮಂಜುನಾಥ್,ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ರಂಜಿತ್ ಕುಮಾರ್, ಮುಖ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ರವಿ,ದಾಸಪ್ಪ, ಶಂಕರೇಗೌಡ, ಸಿ.ಎನ್.ಪ್ರದೀಪ್ ಕುಮಾರ್, ಗಾಯತ್ರಮ್ಮ, ಚೆಂಗಲರಾಯಪ್ಪ, ಚಂದ್ರಪ್ಪ, ವೇಣುಗೋಪಾಲ್ ಸೇರಿದಂತೆ ಕೋಲಾರ, ಮುಳಬಾಗಿಲು ತಾಲೂಕಿನ ಮುಖ್ಯಶಿಕ್ಷಕರು ಹಾಜರಿದ್ದರು.
20,228 ಮಕ್ಕಳು ಪರೀಕ್ಷೆಗೆ ನೋಂದಣಿ :
ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಇಲಾಖೆಯ ಕ್ರಿಯಾಯೋಜನೆ ಪಾಲಿಸಿ, ಅಧ್ಯಾಯವಾರು ಪ್ರಶ್ನೆಪತ್ರಿಕೆ ನೀಡಿದ್ದೇವೆ, ತೆರೆದ ಪುಸ್ತಕ ಪರೀಕ್ಷೆ ನಡೆಸಿ, ಕಲಿಕೆ ದೃಢೀಕರಣ ಮಾಡಿಕೊಂಡು ನಂತರ ನೋಡದೇ ಉತ್ತರ ಬರೆಸಿ ಎಂದರು. ಕೋವಿಡ್ ಹಿನ್ನಲೆಯಲ್ಲಿ ಪ್ರಶ್ನೆಪತ್ರಿಕೆ ಸುಲಭವಾಗಲಿದೆ, ಪಠ್ಯದ ಅಭ್ಯಾಸದ ಪ್ರಶ್ನೆಗಳಿಗೆ ಮಕ್ಕಳು ಸಿದ್ಧರಾದರೆ ಯಶಸ್ಸು ಖಚಿತ. ಶೇ.10 ರಷ್ಟು ಮಾತ್ರ ಕಠಿಣ ಪ್ರಶ್ನೆಗಳು ಇರಲಿದೆ ಎಂದರು. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈವರೆಗೂ 20228 ಮಕ್ಕಳು ನೋಂದಾಯಿಸಿದ್ದಾರೆ, ಅದರಲ್ಲಿ ಶಾಲಾ ವಿದ್ಯಾರ್ಥಿಗಳೇ 19,342 ಇದ್ದಾರೆ. ಆದರೆ ಸ್ಯಾಟ್ಸ್‌ನಲ್ಲಿ ಮಕ್ಕಳ ಹಾಜರಾತಿ ದಾಖಲು ಸರಿಯಾಗಿ ಮಾಡುತ್ತಿಲ್ಲ. ಮುಖ್ಯಶಿಕ್ಷಕರು ಕನಿಷ್ಠ 12 ತರಗತಿ ತೆಗೆದುಕೊಳ್ಳಿ ಎಂದು ತಿಳಿಸಿದರು.