Advertisement

ಮಕ್ಕಳ “ಸುರಕ್ಷಿತ ಬಾಲ್ಯ’ಕ್ಕೆ ಶ್ರಮಿಸಿ: ಕೈಲಾಶ್‌

12:20 PM Sep 17, 2017 | Team Udayavani |

ಬೆಂಗಳೂರು: ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿಯವರು ತಮ್ಮ ಕೈಲಾಶ್‌ ಸತ್ಯಾರ್ಥಿ ಚಿಲ್ಡ್ರನ್ಸ್‌ ಫೌಂಡೇಶನ್‌ ಮೂಲಕ ಹಮ್ಮಿಕೊಂಡಿರುವ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮತ್ತು ಕಳ್ಳ ಸಾಗಣೆ ವಿರುದ್ಧದ “ಭಾರತ್‌ ಯಾತ್ರೆ’ಗೆ ಬೆಂಗಳೂರಿನಲ್ಲಿ ಶನಿವಾರ ಅದ್ಧೂರಿ ಸ್ವಾಗತ ದೊರೆಯಿತು.

Advertisement

ಬೆಳಗ್ಗೆ 9.30ಕ್ಕೆ ಹೊಂಬೇಗೌಡನಗರ ಮೈದಾನದಿಂದ ಕ್ರೈಸ್ಟ್‌ ವಿಶ್ವವಿದ್ಯಾಲಯದವರೆಗೆ ಜಾಗೃತಿ ಕಾಲ್ನಡಿಗೆ ಜಾಥಾ
ನಡೆಯಿತು. ಸಾವಿರಾರು ವಿದ್ಯಾರ್ಥಿಗಳು, ಸ್ವಯಂಸೇವಕರು, ವಿವಿಧ ಸಂಸ್ಥೆಗಳ ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು.

ಸೆ.11ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ರ್ಯಾಲಿ, ಸೇಲಂ, ಚಾಮರಾಜನಗರ ಹಾಗೂ ಕೋಲಾರ ಮಾರ್ಗವಾಗಿ ಪ್ರತ್ಯೇಕವಾಗಿ ಬಂದಿರುವ ಯಾತ್ರೆಯು ಸೆ.15ರಂದು ಕೋಲಾರ ಪೂರೈಸಿ, ಬೆಂಗಳೂರಿಗೆ ಆಗಮಿಸಿತ್ತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸಿಐಐ ಯಂಗ್‌ ಇಂಡಿಯನ್‌ ಮಾಸೂಮ್‌, ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌, ಓಕ್ರಿಡ್ಜ್ ಇಂಟರ್‌ ನ್ಯಾಷನಲ್‌, ಕ್ರೈಸ್ಟ್‌ ವಿಶ್ವವಿದ್ಯಾಲಯ ಮೊದಲಾದ ಸಂಸ್ಥೆಗಳು ಭಾರತ್‌ ಯಾತ್ರೆಯಲ್ಲಿ ಕೈ ಜೋಡಿಸಿದ್ದವು.

ತಾಂತ್ರಿಕ ಪರಿಹಾರ ಅಗತ್ಯ: ಭಾರತ್‌ ಯಾತ್ರೆ ಉದ್ದೇಶಿಸಿ ಮಾತನಾಡಿದ ಕೈಲಾಶ್‌ ಸತ್ಯಾರ್ಥಿ, “ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಮಾನವ ಕಳ್ಳಸಾಗಣಿಕೆ ತಡೆಯಲು ಬೆಂಗಳೂರಿನ ಮಾಹಿತಿ ತಂತ್ರಜ್ಞರು ತಾಂತ್ರಿಕ ಪರಿಹಾರ ಕಂಡು ಹಿಡಿಯಬೇಕು. ಮೊಬೈಲ್‌ ಆ್ಯಪ್‌ ಅಥವಾ ಪರ್ಯಾಯ ಮಾರ್ಗದ ಮೂಲಕ ನಮ್ಮ ಮಕ್ಕಳನ್ನು ಸಂರಕ್ಷಿಸಲು ತಂತ್ರಜ್ಞರು ಕಾರ್ಯತಂತ್ರ ರೂಪಿಸಲೇ ಬೇಕು. ಯುವ ಸಂಶೋಧಕರು ಈ ನಿಟ್ಟಿನಲ್ಲಿ ಕಾರ್ಯಕೈಗೊಳ್ಳುತ್ತಾರೆ’ ಎಂಬ ವಿಶ್ವಾಸವಿದೆ ಎಂದು
ಹೇಳಿದರು.

“ಶಾಂತಿ ಸಾರುವ ದೇಶದಲ್ಲಿ ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಹೆಚ್ಚುತ್ತಿರುವುದು ವಿಷಾದನೀಯ. ಎಲ್ಲಾ ಮಕ್ಕಳ ಬಾಲ್ಯವನ್ನು ಸುರಕ್ಷಿತ ಹಾಗೂ ಸುಖೀಯಾಗಿಡಲು ಸಮಾಜವೇ ಒಂದಾಗಿ ಶ್ರಮಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಮಾನವ ಕಳ್ಳ ಸಾಗಾಣಿಕೆ ತಡೆಯುವ ಸಾಮಾಜಿಕ ಕಾರ್ಯಕ್ಕೆ ಬೆಂಗಳೂರು ಮುಂದಾಳತ್ವ ವಹಿಸಬೇಕು. ಈ ದೌರ್ಜನ್ಯವನ್ನು ಬೇರು ಸಮೇತ ಕಿತ್ತುಹಾಕಿ ದೇಶದ ಮಕ್ಕಳಿಗೆ ಸೂಕ್ತ ರಕ್ಷಣೆ ಸಿಗುವವರೆಗೂ ಹೋರಾಟ ನಡೆಯಲಿದೆ’ ಎಂದು ಹೇಳಿದರು.

Advertisement

ತಾತ್ವಿಕ ಹೋರಾಟ: ಸುರಕ್ಷಿತ ಬಾಲ್ಯ-ಸುರಕ್ಷಿತ ಭಾರತಎಂಬ ಪರಿಕಲ್ಪನೆಯಡಿ ಭಾರತ್‌ ಯಾತ್ರೆ ಕೈಗೊಳ್ಳಲಾಗಿದೆ. ಮಕ್ಕಳು ತಮಗಾದ ತೊಂದರೆ ಮತ್ತು ದೌರ್ಜನ್ಯದ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣ ಕುಟುಂಬದಲ್ಲಿ ನಿರ್ಮಾಣವಾಗಬೇಕು. ಮಕ್ಕಳ ಭವಿಷ್ಯ ಉತ್ತಮವಾಗಿಸುವ ಜವಾಬ್ದಾರಿ ಪಾಲಕ, ಪೋಷಕ ಹಾಗೂ ಶಿಕ್ಷಕರ ಮೇಲಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆಸುವವರಿಗೆ ಕಾನೂನಿನಡಿಯಲ್ಲಿ ಶಿಕ್ಷೆ ನೀಡುವ ಜತೆಗೆ, ಅವರ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ತಾತ್ವಿಕ ಹೋರಾಟವನ್ನು ನಡೆಸಬೇಕು ಎಂದು ಕರೆ ಕೊಟ್ಟರು.

ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ, ರೋಟರಿಯ ಮಾಜಿ ಜಿಲ್ಲಾ ಗವರ್ನರ್‌ ಎಸ್‌.ನಾಗೇಂದ್ರ, ಕರ್ನಾಟಕ ರಾಜ್ಯ ಸ್ವಯಂಸೇವಕ ಸಂಘಗಳ ಅಧ್ಯಕ್ಷ ರಾಮಕೃಷ್ಣ ಗೌಡ ಮೊದಲಾದವರು ಉಪಸ್ಥಿತರಿದ್ದರು. 

ಪ್ರತಿಜ್ಞಾ ವಿಧಿ ಸ್ವೀಕಾರ
ಮಕ್ಕಳ ಮೇಲಿನ ಹಿಂಸೆ ಅಥವಾ ಹಿಂಸಾತ್ಮಕ ಕೃತ್ಯಕ್ಕೆ ಮಕ್ಕಳನ್ನು ಬಳಸುವುದು, ಲೈಂಗಿಕ ದೌರ್ಜನ್ಯ ಮೊದಲಾದ ಯಾವುದೇ ಕೃತ್ಯಕ್ಕೆ ಬೆಂಬಲ ನೀಡುವುದಿಲ್ಲ ಹಾಗೂ ಇಂಥ ಘಟನೆ ನಡೆಯುತ್ತಿರುವುದು ಕಂಡಬಂದ ತಕ್ಷಣವೇ ಮೇಲಾಧಿಕಾರಿಗಳಿಗೆ, ಕುಟುಂಬದ ಸದಸ್ಯರ ಗಮನಕ್ಕೆ ತರುವ ಸಂಬಂಧ ಕೈಲಾಶ್‌ ಸತ್ಯಾರ್ಥಿಯವರು ಬೋಧಿಸಿದ ಪ್ರತಿಜ್ಞಾ ವಿಧಿಯನ್ನು ಮಕ್ಕಳು ಸ್ವೀಕರಿಸಿದರು.

ಸಂವಾದ ಭಾರತ್‌ ಯಾತ್ರೆಯ ನಂತರ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಕೈಲಾಶ್  ಸತ್ಯಾರ್ಥಿ, ಪ್ರತಿ ಮಗುವಿನ ನಗು, ಮುಗಟಛಿತೆ, ಕನಸು, ಖುಷಿಯ ಕ್ಷಣ, ಲವಲವಿಕೆ, ಶಿಕ್ಷಣ, ಸ್ವಾತಂತ್ರ್ಯ ಹರಣವಾಗದಂತೆ ಎಲ್ಲರೂ ಜಾಗೃತಿ ವಹಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಬೇಕಾದ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರುವುದು ಮಾತ್ರವಲ್ಲ, ಮಕ್ಕಳ ಹಕ್ಕುಗಳ ರಕ್ಷಣೆಗೆ ದೇಶದಲ್ಲೂ ಬದಲಾವಣೆ ತರುವ ಅಗತ್ಯವಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಾರ್ವಜನಿಕರು, ಖಾಸಗಿ ಸಂಸ್ಥೆಗಳು, ಶಾಲಾ-ಕಾಲೇಜು ಸೇರಿದಂತೆ ಎಲ್ಲರೂ ಒಟ್ಟಾಗಿ ಬದಲಾವಣೆ ತರಬೇಕಿದೆ ಎಂದು ಕೈಲಾಶ್‌ ಸತ್ಯಾರ್ಥಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next