ಮೊಳಕಾಲ್ಮೂರು: ಬರ ಪೀಡಿತ ಹಿಂದುಳಿದ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕುರಿ ವ್ಯಾಪಾರದ ಜತೆಗೆ ಈ ಭಾಗದ ಪ್ರಮುಖ ಶೇಂಗಾ ಮತ್ತು ಮೆಕ್ಕೆಜೋಳ ಮಾರಾಟದೊಂದಿಗೆ ಹೆಚ್ಚಿನ ವ್ಯವಹಾರದ ಪ್ರಗತಿಗೆ ಶ್ರಮಿಸಬೇಕಾಗಿದೆ ಎಂದು ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ ತಿಳಿಸಿದರು.
ತಾಲೂಕಿನ ರಾಂಪುರ ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆಯ ಸಭಾಂಗಣದಲ್ಲಿ ನೂತನವಾಗಿ ಆಯ್ಕೆಯಾದ ಎ.ಪಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ರಾಂಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುರಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಆದರೆ ಈ ಮಾರುಕಟ್ಟೆಯಲ್ಲಿ ಯಾವುದೇ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿಲ್ಲ. ಈ ತಾಲೂಕಿನಲ್ಲಿ ಬಹುತೇಕ ರೈತರು ಶೇಂಗಾ ಬೆಳೆ ಹಾಗೂ ಮೆಕ್ಕೆಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆದು ದೂರದ ಮಾರುಕಟ್ಟೆಗಳಿಗೆ ಸಾಗಿಸಿ ವ್ಯವಹರಿಸಲಾಗುತ್ತಿದೆ. ತಾಲೂಕಿನ ಈ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಯೇ ಈ ಭಾಗದಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡುವುದರಿಂದ ಈ ಭಾಗದ ರೈತರ ಆರ್ಥಿಕವಾಗಿ ಸಹಕಾರವಾಗಲಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಈ ಮಾರುಕಟ್ಟೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ಧಿಪಡಿಸಿ ಈ ಭಾಗದ ರೈತರ ವಹಿವಾಟಿಗೆ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.
ತಾಲೂಕಿನ ರಾಂಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀರಾಮರೆಡ್ಡಿ ಮಾತನಾಡಿ, ಕೃಷಿ ಪ್ರಧಾನವಾಗಿರುವ ಭಾರತ ದೇಶದ ಅರ್ಥ ವ್ಯವಸ್ಥೆಗೆ ಕೃಷಿ ಅವಲಂಬಿಸಿರುವುದರಿಂದ ಸರ್ಕಾರಗಳು ಹೆಚ್ಚಿನ ಆರ್ಥಿಕ ನೆರವು ನೀಡಿ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಸಹಕಾರ ಇಲಾಖೆಯಿಂದ ಸಾಲಸೌಲಭ್ಯ, ಮಾರುಕಟ್ಟೆ ಸೌಲಭ್ಯ ನೀಡಲಾಗುತ್ತಿದೆ. ರೈತರ ಸಾಗಾಣಿಕೆ ವೆಚ್ಚ ಕಡಿತಗೊಳಿಸಲು ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕು ಜಂಟಿಯಾಗಿದ್ದ ಎಪಿಎಂಸಿಯನ್ನು ಈ ಭಾಗದ ರೈತರ ಅನುಕೂಲತೆಗಾಗಿ ರಾಂಪುರದಲ್ಲಿನ ಎಪಿಎಂಸಿಯನ್ನು ಪ್ರತ್ಯೇಕಗೊಳಿಸಲಾಗಿದೆ.
ಮುಂದಿನ ದಿನಗಳಲ್ಲಿ ಸಚಿವರು, ಬಿಜೆಪಿ ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ರೈತರ ಸಹಕಾರದೊಂದಿಗೆ ಈ ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ಅಗತ್ಯ ಮೂಲಸೌಲಭ್ಯ ಕಲ್ಪಿಸಿ ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ರಾಮದಾಸ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಉಪಾಧ್ಯಕ್ಷ ವಸಂತಕುಮಾರ್, ಚಳ್ಳಕೆರೆಯ ಪಿ.ಎಸ್ .ಡಿ.ಬ್ಯಾಂಕ್ ಅಧ್ಯಕ್ಷ ಮಾತೃಶ್ರೀ ಮಂಜುನಾಥ, ಬಿಜೆಪಿಯ ನಾಯಕನಹಟ್ಟಿ ಮಂಡಲಾಧ್ಯಕ್ಷ ರಾಮರೆಡ್ಡಿ, ಮೊಳಕಾಲ್ಮೂರು ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಪರಮೇಶ್ವರಪ್ಪ, ಪ್ರಭಾಕರ, ಎಸ್.ಸಿ. ಮೋರ್ಚಾಧ್ಯಕ್ಷ ಸಿದ್ಧಾರ್ಥ, ಬಿಜೆಪಿ ಪಕ್ಷದ ಪದಾ ಧಿಕಾರಿಗಳಾದ ಆರ್.ರಾಮರೆಡ್ಡಿ, ಹನುಮಂತರೆಡ್ಡಿ, ಮೂರ್ತಿ, ಹೆಚ್ಚಿನ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.