Advertisement

ಕಾಮಗಾರಿ ಪೂರ್ಣ: ಉದ್ಘಾಟನೆಯಾಗದ ಅಂಗನವಾಡಿ

10:46 AM Oct 06, 2018 | Team Udayavani |

ಸುಬ್ರಹ್ಮಣ್ಯ: ಪಾಳು ಬಿದ್ದ ಕಟ್ಟಡ, ಅದರೊಳಗೆ ಹಾವು ಚೇಳು ವಿಷಜಂತುಗಳ ಓಡಾಟ. ಇದರೊಳಗೆ ಹಾಲು ಗಲ್ಲದ ಮುಗ್ಧ ಮಕ್ಕಳು ಅಪಾಯದ ಅರಿವಿಲ್ಲದೆ ಆಟ-ಪಾಟದಲ್ಲಿ ತೊಡಗಿವೆ. ಇಷ್ಟಕ್ಕೆಲ್ಲ ಕಾರಣ ನೂತನ ಅಂಗನವಾಡಿ ಕೇಂದ್ರ ಸಿದ್ಧವಾಗಿದ್ದರೂ, ಉದ್ಘಾಟನೆ ಆಗದೆ ಬಳಕೆಯಿಂದ ವಂಚಿತವಾಗಿರುವುದು.

Advertisement

ತೀರಾ ಹಳೆಯದಾದ ಕಟ್ಟಡವಾದ ಸುಬ್ರಹ್ಮಣ್ಯ ನಗರದ ಕಾಶಿಕಟ್ಟೆ ಬಳಿ ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆಯ ಅಂಗನವಾಡಿ ಕೇಂದ್ರ ಕಾರ್ಯಾಚರಿಸುತ್ತಿದೆ. ಈ ಕೇಂದ್ರದಲ್ಲಿ ಸುತ್ತಮುತ್ತಲಿನ ಸುಮಾರು 35 ಮಕ್ಕಳಿದ್ದಾರೆ. ಕಿರಿದಾದ ಕಟ್ಟಡವಾಗಿರುವ ಕಾರಣ ಎಲ್ಲ ಮಕ್ಕಳಿಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕುಡಿವ ನೀರು, ಸಿಲಿಂಡರ್‌, ಉತ್ತಮ ಶಿಕ್ಷಕಿ, ಸಿಬಂದಿ ಎಲ್ಲ ಇದ್ದರೂ ಭದ್ರತೆಯೇ ಇಲ್ಲದಂತಾಗಿದೆ.

ಹಳೇ ಕಟ್ಟಡ ಸಂಪೂರ್ಣ ಶಿಥಿಲ
ಈ ಹಳೆ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಮಳೆ ಬಂದರೆ ನೀರೆಲ್ಲ ಒಳಗೆ ಹರಿದು ಬರುತ್ತದೆ. ಕೇಂದ್ರದ ಗೋಡೆ, ಬಾಗಿಲು ಎಲ್ಲವೂ ಬಿರುಕು ಬಿಟ್ಟಿದ್ದು. ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ. ಛಾವಣಿಯಲ್ಲಿನ ಪಕ್ಕಾಸುಗಳು ಮುರಿದಿದ್ದು, ಭಯದ ನೆರಳಲ್ಲೆ ಇರಬೇಕಾಗಿದೆ. 

ಹಳೆಯ ಕಟ್ಟಡದ ಈ ದುಸ್ತಿಯನ್ನು ಮನಗಂಡು ಪಕ್ಕದಲ್ಲೇ ನೂತನ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ. ಸುಮಾರು 9 ಲಕ್ಷ ರೂ. ವೆಚ್ಚದ ನಿರ್ಮಿತಿ ಕೇಂದ್ರದ ಅನುದಾನದಲ್ಲಿ ಈ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಈ ನೂತನ ಕಟ್ಟಡಕ್ಕೆ ಉದ್ಯೋಗ ಖಾತರಿ ಯೋಜನೆ ಹಾಗೂ ಅನುದಾನವನ್ನು ಬಳಸಿಕೊಳ್ಳಲಾಗಿದೆ.

ಶೇ. 90 ಕಾಮಗಾರಿ ಪೂರ್ಣ
ಗುತ್ತಿಗೆದಾರರು ಕಟ್ಟಡ ನಿರ್ಮಾಣ ಬಹುತೇಕ ಪೂರ್ಣಗೊಳಿಸಿದ್ದಾರೆ. ಗುತ್ತಿಗೆದಾರರಿಗೆ 1.25 ಲಕ್ಷ ರೂ. ವೆಚ್ಚದ ಮೆಟೀರಿಯಲ್‌ ಆರಂಭದ ಬಿಲ್ಲು ಪಾವತಿಯಾಗಿದೆ. ಬಳಿಕ ಕೈಯಿಂದ ಹಣ ಭರಿಸಿ ಕಟ್ಟಡ ನಿರ್ಮಾಣವನ್ನು ಶೇ. 90ರಷ್ಟು ಪೂರ್ಣಗೊಳಿಸಿದ್ದಾರೆ. ಇನ್ನು ಕೌಂಪೌಂಡ್‌ ಹಾಗೂ ಶೌಚಾಲಯ ನಿರ್ಮಾಣವಾದರೆ ಕೇಂದ್ರದ ಕೆಲಸಗಳು ಪೂರ್ಣಗೊಳ್ಳುತ್ತದೆ. ಆದರೆ ಗುತ್ತಿಗೆದಾರರಿಗೆ ಪೂರ್ಣ ಬಿಲ್ಲು ಪಾವತಿಯಾಗಿಲ್ಲ. ಸುಮಾರು 6.5 ಲಕ್ಷ ರೂ. ಇನ್ನು ಪಾವತಿಯಾಗಲು ಬಾಕಿ ಇದೆ. ಹೀಗಾಗಿ ಕಟ್ಟಡ ನಿರ್ಮಾಣಗೊಂಡಿದ್ದರೂ ಅದು ಬಳಕೆಗೆ ಸಿಕ್ಕಿಲ್ಲ. ಸುಸಜ್ಜಿತ ಅಂಗನವಾಡಿ ಕೇಂದ್ರ ಸಿದ್ಧವಾಗಿದ್ದರೂ ಮಕ್ಕಳಿಗೆ ಅದನ್ನು ಅನುಭವಿಸುವ ಅವಕಾಶವಿಲ್ಲ. ಹೀಗಾಗಿ ಮಕ್ಕಳು ಪಾಳು ಬಿದ್ದ ಕಟ್ಟಡವನ್ನೇ ಆಶ್ರಯಿಸುವಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಉದ್ಘಾಟನೆ ಮನಸ್ಸು ಮಾಡುತಿಲ್ಲ.

Advertisement

ಹಾವು, ಚೇಳು ಸರ್ವೇಸಾಮಾನ್ಯ
ನಗರದ ಅಂಚಿನಲ್ಲಿರುವ ಹಳೇಯ ಕಟ್ಟಡದೊಳಗೆ ಹಲವಾರು ಬಿಲಗಳಿವೆ. ಹಾವು, ಚೇಳುಗಳಂತ ವಿಷ ಜಂತುಗಳು ಒಳ ಪ್ರವೇಶಿಸಿ ಬೆಳಕು ಹರಿಯದ ಕಟ್ಟಡದೊಳಗೆ ಆಶ್ರಯ ಪಡೆದುಕೊಳ್ಳುತ್ತದೆ. ಎಳೆ ವಯಸ್ಸಿನ ಅರಿಯದ ಪುಟಾಣಿಗಳು ಆಟವಾಡುತ್ತಾ, ಅವುಗಳಿಗೆ ಮೆಟ್ಟಿ, ಕಡಿಸಿಕೊಳ್ಳುವ ಅಪಾಯವೂ ಇಲ್ಲಿವೆ. ಇಂತಹ ಅನೇಕ ಘಟನೆಗಳು ಈ ಹಿಂದೆ ನಡೆದಿದ್ದವು ಎನ್ನತ್ತಾರೆ ಕೇಂದ್ರದ ಸಿಬಂದಿ. ಇತ್ತೀಚೆಗೆ ಹಾವೊಂದು ವಾರಗಳ ಕಾಲ ಕೇಂದ್ರದ ಒಳಗೆ ಅಡಗಿಕೊಂಡಿತ್ತು. ಈ ವೇಳೆ ಮಕ್ಕಳು ಅಂಗಳದಲ್ಲೇ ಅಷ್ಟೂ ದಿನ ಕಾಲಕಳೆದಿದ್ದರು.

ಶೀಘ್ರ ಉದ್ಘಾಟನೆ
ನಿರ್ಮಿತಿ ಕೇಂದ್ರದ ಎಂಜಿನಿಯರ್‌ರನ್ನು ಈಗಾಗಲೇ ಸಂಪರ್ಕಿಸಲಾಗಿದೆ. ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಿ ಗುತ್ತಿಗೆದಾರರಿಗೆ ಬಾಕಿ ಬಿಲ್‌ ಪಾವತಿಗೆ ಶೀಘ್ರ ಕ್ರಮ ವಹಿಸುವಂತೆ ತಿಳಿಸಿದ್ದೇನೆ. ಅತೀ ಶೀಘ್ರದಲ್ಲೆ ಉದ್ಘಾಟನೆಗೆ ತೆರೆದುಕೊಳ್ಳಲಿದೆ.
– ಆಶಾ ತಿಮ್ಮಪ್ಪ ಜಿ.ಪಂ. ಸದಸ್ಯೆ 

 ಬಿಲ್‌ ಕೈಸೇರಿಲ್ಲ
ಕಟ್ಟಡ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡ ಬಳಿಕ ವೇಗವಾಗಿ ಕಾಮಗಾರಿ ಮಾಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ನನಗೆ ಪಾವತಿಯಾಗಬೇಕಿದ್ದ ಹಣ ಇನ್ನು ಕೈಸೇರಿಲ್ಲ. ಕಾಂಪೌಂಡ್‌ ಹಾಗೂ ಶೌಚಾಲಯ ನಿರ್ಮಾಣ ಮಾತ್ರ ಬಾಕಿ ಇದ್ದು, ಬಿಲ್‌ ಪಾವತಿ ಬಳಿಕ ಯಾವುದೇ ಸಮಯದಲ್ಲಿ ಕಟ್ಟಡ ಬಿಟ್ಟು ಕೊಡಲು ಸಿದ್ಧ. 
– ಲೊಕೇಶ್‌
  ಗುತ್ತಿಗೆದಾರ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next