Advertisement

ಶತಮಾನದ ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಕಾಯಕಲ್ಪ

10:29 AM Oct 18, 2022 | Team Udayavani |

ಸಿದ್ದಾಪುರ: ಶಿಕ್ಷಣ ಸಂವಿಧಾನ ಬದ್ಧವಾದ ಮೂಲಭೂತ ಹಕ್ಕಾಗಿದ್ದರೂ ಸರಕಾರ, ಇಲಾಖೆ, ಜನಪ್ರತಿನಿಧಿಗಳ ನಿರ್ಲಕ್ಷದ ಪರಿಣಾಮ ಸರಕಾರಿ ಶಾಲೆಗಳು ಪಾಳು ಬೀಳುತ್ತಿವೆ.

Advertisement

ಸರಕಾರಿ ಶಾಲೆಯ ಅವ್ಯವಸ್ಥೆಯ ಪರಿಣಾಮ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳ ಕಡೆ ಮಕ್ಕಳನ್ನು ಕಳುಹಿಸುವಂತಾಗಿದೆ. ಅಲ್ಲಲ್ಲಿ ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳ ಮುತುವರ್ಜಿಯಿಂದ ಸರಕಾರಿ ಶಾಲೆಗಳು ಅಭಿವೃದ್ಧಿ ಕಾಣುತ್ತಿವೆ. ಇದಕ್ಕೆ ಉದಾಹರಣೆಯಾಗಿ ಆರ್ಡಿ-ಅಲಾºಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ. ಕಟ್ಟಡದ ಮೇಲ್ಛಾವಣಿ ಶಿಥಿಲಗೊಂಡು ಕುಸಿಯುವ ಹಂತ ತಲುಪಿದಾಗ ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳು ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.

ಶತಮಾನದ ಹೊಸ್ತಿನಲ್ಲಿರುವ ಈ ಶಾಲೆಯ ಹೆಂಚಿನ ಕಟ್ಟಡದ ಮೇಲ್ಛಾವಣಿಗೆ ಹಾಕಲಾದ ಮರದ ಸಾಮಗ್ರಿಗಳಿಗೆ ಹಾನಿಯಾಗಿ ಕಟ್ಟಡ ಶಿಥಿಲಗೊಂಡು ಕುಸಿಯುವ ಹಂತ ತಲುಪಿತ್ತು. ಈ ಹಿನ್ನೆಲೆಯಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ, ದಾನಿಗಳು, ಹೆತ್ತವರು, ಶಿಕ್ಷಣಾಭಿಮಾನಿಗಳ ಸಹಕಾರೊಂದಿಗೆ ಅಂದಾಜು 2 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಹಳೆ ವಿದ್ಯಾರ್ಥಿಗಳ ಈ ಸೇವಾ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

ಈ ಶಾಲೆ 1925ರಲ್ಲಿ ಸ್ಥಾಪನೆಗೊಂಡಿತ್ತು. ಈ ಶಾಲೆ ಹಳೇ ಸೋಮೇಶ್ವರ, ಕಾಸನ್‌ಮಕ್ಕಿ, ಮಡಾಮಕ್ಕಿ, ಓದೂರು, ಹಂಜ, ಮಾರ್ಮಣ್ಣು, ಶಿರಂಗೂರು, ಬೆಪ್ಡೆ, ಅರಸಮ್ಮಕಾನು, ಶೇಡಿಮನೆ, ಕೊಂಜಾಡಿ, ಬರೆಗದ್ದೆ, ಕಲ್ಮಕ್ಕಿ, ಕೆರ್ಜಾಡಿ, ನೂಜಟ್ಟು, ಮಾಬ್ಳಿ, ತಿಮಕೋಡು, ಕಲ್ಮರ್ಗಿ, ತೊನ್ನಾಸೆ, ಅಲ್ಬಾಡಿ ಸೇರಿದಂತೆ ಸುತ್ತಮುತ್ತಲಿನ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದ್ದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಭವಿಷ್ಯ ರೂಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೆಂಚಿನ ಕಟ್ಟಡವು ಕಾಲಕ್ರಮೇಣ ಶಿಥಿಲಗೊಂಡಿತು. 1997ರಲ್ಲಿ ಪುನಃ ಹೊಸ ಕಟ್ಟಡ ನಿರ್ಮಾಣಗೊಂಡಿತ್ತು. 1ರಿಂದ 7ನೇ ತರಗತಿ ಹೊಂದಿರುವ ಈ ಕಟ್ಟಡದಲ್ಲಿ 6 ತರಗತಿ ಕೊಠಡಿಗಳು, ಸಭಾಂಗಣ, ರಂಗ ಮಂದಿರ ಹೊಂದಿದೆ. ಮುಖ್ಯ ಶಿಕ್ಷಕರ, ಶಿಕ್ಷಕರ ಕೊಠಡಿ, ಕಂಪ್ಯೂಟರ್‌ ತರಗತಿ, ನಲಿ-ಕಲಿ ತರಗತಿ, ಅಕ್ಷರ ದಾಸೋಹ, ಆಹಾರ ಸಾಮಾನುಗಳ ದಾಸ್ತಾನು ಕೊಠಡಿಗಳ ಪ್ರತ್ಯೇಕ ಕಟ್ಟಡ ಹೊಂದಿದೆ. ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಮಕ್ಕಳ ದಾಖಲಾತಿ ಪ್ರತೀ ವರ್ಷ ಹೆಚ್ಚುತ್ತಿದೆ. ಪ್ರಸ್ತುತ 157 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

ಅನುದಾನ ಸಿಕ್ಕಿಲ್ಲ

Advertisement

ಶಾಲೆಯ ಹೆಂಚಿನ ಕಟ್ಟಡ ನಿರ್ಮಾಣಕ್ಕೆ ಬಹಳ ವರ್ಷಗಳ ಹಿಂದೆ ಹಾಕಲಾದ ರೀಪು, ಪಕ್ಕಾಸುಗಳು ಕಳೆದ ಕೆಲವು ವರ್ಷಗಳಿಂದ ಹಾನಿಯಾಗಿ ಕಟ್ಟಡದ ಮೇಲ್ಛಾವಣಿ ಕುಸಿ ಯುವ ಹಂತ ತಲುಪಿದೆ. ಶಾಲಾ ಕಟ್ಟದ ದುರಸ್ತಿಗಾಗಿ ಸರಕಾರಕ್ಕೆ, ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಅನುದಾನ ದೊರಕಿಲ್ಲ. ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಶಾಲಾ ಕಟ್ಟಡದ ದುರಸ್ತಿ ಶೀಘ್ರ ನಡೆಸಬೇಕಾಗಿದ್ದ ಪರಿಸ್ಥಿತಿ ಅರಿತ ಹಳೆ ವಿದ್ಯಾರ್ಥಿಗಳು ಶಿಕ್ಷಣಾಭಿಮಾನಿಗಳ ಸಹಕಾರರೊಂದಿಗೆ ಅಂದಾಜು 2 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕಟ್ಟಡದ ಮೇಲ್ಛಾವಣಿ ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. ದಸರಾ ರಜೆ ಮುಗಿದು ಪುನಃ ಶಾಲೆ ಆರಂಭವಾಗುವ ಸಮಯಕ್ಕೆ ಮಕ್ಕಳಿಗೆ ಶಿಕ್ಷಣಕ್ಕೆ ತೊಂದರೆ ಯಾಗದಂತೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದೆ. ಹಲವು ಮಂದಿ ಹಳೆ ವಿದ್ಯಾರ್ಥಿಗಳು ಶ್ರಮದಾನದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಹಕಾರ ಅಗತ್ಯ: ಶಾಲೆಯ ಹೆಂಚಿನ ಕಟ್ಟಡದ ಮೇಲ್ಛಾವಣಿಗೆ ಹಾಕಲಾದ ಮರದ ಸಾಮಗ್ರಿಗಳಿಗೆ ಹಾನಿಯಾಗಿ ಕಟ್ಟಡ ಶಿಥಿಲಗೊಂಡಿದೆ. ಹಳೆ ವಿದ್ಯಾರ್ಥಿಗಳ ಮುಂದಾಳ್ವತದಲ್ಲಿ ಶಾಲಾಭಿವೃದ್ಧಿ ಸಮಿತಿ, ದಾನಿಗಳು, ಹೆತ್ತವರು, ಶಿಕ್ಷಣಾಭಿಮಾನಿಗಳ ಸಹಕಾರದೊಂದಿಗೆ ಅಂದಾಜು 2 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಕಟ್ಟಡದ ದುರಸ್ತಿ ಇನ್ನಷ್ಟೇ ಆಗಬೇಕಿದೆ. ಕಾರ್ಯ ಶೀಘ್ರ ಸಂಪೂರ್ಣಗೊಳ್ಳಲು ಆರ್ಥಿಕ ಸಮಸ್ಯೆ ಇದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ. –ಕೆ. ಜಯದೇವ ಹೆಗ್ಡೆ ನೂಜಟ್ಟು, ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ

ತುರ್ತು ದುರಸ್ತಿ: ಶಾಲೆಯ ಹೆಂಚಿನ ಕಟ್ಟಡದ ಮೇಲ್ಛಾವಣಿಗೆ ಹಾಕಲಾದ ಮರದ ಸಾಮಗ್ರಿಗಳಿಗೆ ಹಾನಿ ಯಾಗಿದೆ. ಶಾಲೆಯಲ್ಲಿ 157 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇವರ ಕಲಿಕೆಗೆ ತೊಂದರೆಯಾಗದಂತೆ ತುರ್ತು ದುರಸ್ತಿ ಕೆಲಸ ನಡೆಸಲಾಗುತ್ತಿದೆ. ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ. –ಕೃಷ್ಣಮೂರ್ತಿ ಆಚಾರ್ಯ ಕೊಂಜಾಡಿ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ

-ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next