ಚೆನ್ನೈ: ವೆಸ್ಟ್ ಇಂಡೀಸ್ ತಂಡದ ಆಟಗಾರರಿಗೆಲ್ಲ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೇ ಮಾದರಿ, ತಮ್ಮ ಆಟಗಾರರೆಲ್ಲ ಕೊಹ್ಲಿ ಆಟವನ್ನು ನೋಡಿ ಕಲಿಯಬೇಕು ಎಂಬುದಾಗಿ ವಿಂಡೀಸ್ ತಂಡದ ಸಹಾಯಕ ಕೋಚ್ ರೋಡಿ ಎಸ್ಟ್‌ವಿಕ್ ಹೇಳಿದ್ದಾರೆ.
ರವಿವಾರ ನಡೆಯುವ ಮೊದಲ ಏಕದಿನ ಪಂದ್ಯಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್ಟ್‌ವಿಕ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
“ನಮ್ಮಲ್ಲಿ ಹೆಟ್‌ಮೈರ್, ಪೂರನ್, ಹೋಪ್ ಅವರಂಥ ಯುವ ಬ್ಯಾಟ್ಸ್‌ಮನ್‌ಗಳಿದ್ದಾರೆ. ಆದರೆ ಇವರೆಲ್ಲ ಎಷ್ಟರ ಮಟ್ಟಿಗೆ ಅಭ್ಯಾಸ ಮಾಡುತ್ತಾರೆ, ಕಠಿನ ದುಡಿಮೆಯಲ್ಲಿ ತೊಡಗುತ್ತಾರೆ ಎಂಬುದು ಮುಖ್ಯ. ಇಂಥ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯೇ ಮಾನದಂಡವಾಗಬೇಕು. ಅವರಿಂದು ಅಂಗಳದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ರನ್ ಹರಿಸುತ್ತಿರುವುದರ ಹಿಂದೆ ಕಠಿನ ದುಡಿಮೆ ಇದೆ. ಅವರ ಜಿಮ್ ವರ್ಕ್ ದೊಡ್ಡ ಮಟ್ಟದ್ದಾಗಿದೆ. ಕಠಿನ ಪರಿಶ್ರಮ ಇಲ್ಲದೆ ಇಲ್ಲಿ ಯಶಸ್ಸು ಸಿಗದು. ಒಮ್ಮೆ ಇಂಥ ಪರಿಶ್ರಮಕ್ಕೆ ಒಗ್ಗಿಕೊಂಡರೆ ಯಶಸ್ಸು ತಾನಾಗಿ ಒಲಿಯುತ್ತದೆ. ಇಲ್ಲಿ ವಿಶ್ರಮಿಸಲು ಅವಕಾಶವಿಲ್ಲ…’ ಎಂಬುದಾಗಿ ಎಸ್ಟ್‌ವಿಕ್ ಹೇಳಿದರು.
“ಒಮ್ಮೆ ಶ್ರೇಷ್ಠ ತಂಡದ ಎದುರು ಆಡಿದರೆ ಇದು ಸಹಜವಾಗಿ ನಮ್ಮ ಆಟದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಭಾರತದಂಥ ಕ್ವಾಲಿಟಿ ತಂಡದ ವಿರುದ್ಧ ಅವರದೇ ನೆಲದಲ್ಲಿ ಆಡುವುದು ನಿಜಕ್ಕೂ ಒಳ್ಳೆಯದು’ ಎಂದರು.