Advertisement

ಕೆಲಸ ಮಾಡಿ ಕೊಟೇಷನ್‌ ಕರೆದ್ರು

11:37 AM Jul 25, 2017 | |

ಎಚ್‌.ಡಿ.ಕೋಟೆ: ಪಟ್ಟಣದ ಖಾಸಗಿ ಬಡಾವಣೆ ಸೇರಿದಂತೆ ಮತ್ತಿತರ ಕಡೆ ಕಾಮಗಾರಿಯ ಕೆಲಸ ನಡೆಸಿ ನಂತರ ಲಕ್ಷಾಂತರ ರೂ ವೆಚ್ಚದ ಕಾಮಗಾರಿ ನಿರ್ವಹಣೆ ಕೊಟೇಷನ್‌ ಕರೆದಿರುವ ಪ್ರಕರಣ ಕೋಟೆ ಪುರಸಭೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಪಟ್ಟಣದ ಸ್ಟೇಡಿಯಂ (ಆಶ್ರಯ) ಬಡಾವಣೆ ಹಾಗೂ ಖಾಸಗಿ ಬಡಾವಣೆಗಳಾದ ಭವಾನಿ ಏಸ್ಟೇಟ್‌ ಮತ್ತು ನಾಯಕರ ಸಂಘದ ಎನ್‌ಜಿ ಬಡಾವಣೆಗಳಲ್ಲಿ ಚರಂಡಿ ಮತ್ತು ಗಿಡಗಂಟಿಗಳನ್ನು ತೆಗೆಯಲು ರಸ್ತೆಗಳನ್ನು ಸಮತಟ್ಟು ಮಾಡಲು ಕಳೆದ ತಿಂಗಳಿನಲ್ಲೇ ಒಂದು ವಾರಕ್ಕೂ ಹೆಚ್ಚು ದಿನಗಳ ಕಾಲ ಜೆಸಿಬಿ ಮುಖಾಂತರ ಪುರಸಭೆ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಖಾಸಗಿ ಬಡಾವಣೆಗಳ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕೆಲಸ ನಿರ್ವಹಿಸಿದ್ದು, ನಡೆದಿರುವ ಕಾಮಗಾರಿ ಕೂಡ ತೀರ ಕಳಪೆ ಮಟ್ಟದಾಗಿದೆ.

ಅನುಮಾನಗಳಿಗೆ ದಾರಿ: ಆದರೆ ಪುರಸಭೆಯ ಮುಖ್ಯಾಧಿಕಾರಿ ಡಿ.ಎನ್‌.ವಿಜಯಕುಮಾರ್‌, ಅಧ್ಯಕ್ಷೆ ಮಂಜುಳಾ ಗೋವಿಂದಚಾರಿ, ಉಪಾಧ್ಯಕ್ಷೆ ಸುಮಾ ಸಂತೋಷ್‌ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್‌.ಸಿ.ನರಸಿಂಹಮೂರ್ತಿ ಎಲ್ಲರೂ ಸೇರಿ ಇದೇ ತಿಂಗಳ 26 ರಂದು ಮೊದಲೇ ನಡೆಸಿರುವ ಈ ಕಾಮಗಾರಿಗೆ ಈಗ ಕೊಟೇಷನ್‌ ಕರೆದಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರ್ಕಾರದ ನಿಯಮದಂತೆ ಮೊದಲೇ ಕೊಟೇಷನ್‌ ಕರೆದು ನಂತರ ಆರ್ಹ ಗುತ್ತಿಗೆದಾರರಿಗೆ ಕೆಲಸ ನೀಡಿ ಗುಣ ಮಟ್ಟದ ಕಾಮಗಾರಿ  ಪಡೆದು ಕೊಳ್ಳವುದು ಅಧಿಕಾರಿ, ಜನಪ್ರತಿನಿಧಿಗಳ ಪ್ರಮುಖ ಕರ್ತವ್ಯವಾಗಿದೆ.

ನಿಯಮಗಳನ್ನು ಗಾಳಿಗೆ ತೂರಿದ ಅಧಿಕಾರಿಗಳು: ಸಾರ್ವಜನಿಕ ತೆರಿಗೆ ಹಣದಲ್ಲಿ ಬಹಿರಂಗವಾಗಿ ಕಾಣುವ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿರುವುದರಿಂದ ನಿಯಮಗಳನ್ನು ಪಾಲಿಸಬೇಕಾಗಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಣ್ಮೆಯಿಂದ ವರ್ತಿಸುತ್ತಿರುವುದರಿಂದ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ.

ಆರೋಪ: ಪುರಸಭೆಯಲ್ಲಿ ಬಹಿರಂಗವಾಗಿಯೇ ಇಂತಹ ಪ್ರಕರಣಗಳು ನಡೆಯುತ್ತಿದ್ದರೆ, ಗೌಪ್ಯವಾಗಿ ಇತಂಹ ಇನ್ನೆಷ್ಟು ಪ್ರಕರಣ ನಡೆಯುತ್ತಿವೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈಗಾಗಲೇ ಇದೆ ರೀತಿ ಆನೇಕ ಬಿಲ್‌ಗ‌ಳನ್ನು ಮಾಡಿಕೊಂಡಿದ್ದಾರೆ, ಜೊತೆಗೆ ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಬರುವ  ಹಣವನ್ನು ಅಧಿಕಾರಿಗಳು ಮತ್ತು ಅಧ್ಯಕ್ಷೆ ಮಂಜುಳಾ ಅವರ ಪತಿ ಗೋವಿಂದಚಾರಿ ಹಾಗೂ ವಾರ್ಡ್‌ ಸದಸ್ಯೆ ಪತಿ ದಿನೇಶ್‌ ಸೇರಿ ನುಂಗಿ ಹಾಕಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

Advertisement

4 ಲಕ್ಷ ರೂ ಬಿಲ್‌ ಪಡೆಯಲು ಸಂಚು..!: ಜೊತೆಗೆ ಈ ಕಾಮಗಾರಿಗೆ ಸುಮಾರು 4 ಲಕ್ಷರೂಗಳಷ್ಟು ಬಿಲ್‌ನ್ನು ಅಧಿಕಾರಿಗಳು ಮತ್ತು ಎಂಜಿನಿಯರ್‌ ಹಾಗೂ ಅಧ್ಯಕ್ಷೆ ಮತ್ತು ವಾರ್ಡ್‌ ಸದಸ್ಯೆ ಪತಿರಾಯರು ಸೇರಿ ತಯಾರು ಮಾಡಿ ಸಾಮಾನ್ಯ ಹಣಕಾಸು ನಿಧಿಯಿಂದ ಪಡೆಯಲು ಮುಂದಾದಾಗ ಕೆಲ ಸದಸ್ಯರು ಅಡ್ಡಿ ಪಡಿಸಿದ್ದರಿಂದ  ಸಭಯಲ್ಲಿ ನಡವಳಿ ಕೈಗೊಂಡಿರುವಂತೆ ನಡವಳಿ ಪುಸ್ತಕದಲ್ಲಿ ನಮೂದಿಸಿ, ಒಂದೇ ಬಲ್‌ ಬದಲು ಜೆಸಿಬಿ ಯಂತ್ರದ ಕೆಲಸದ ಅವಧಿ ಗಂಟೆಗಳ ಲೆಕ್ಕದಲ್ಲಿ ಮಾರ್ಪಾಡು ಮಾಡಿಕೊಂಡು ಬಿಲ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ವ್ಯಕ್ತವಾಗುತ್ತಿದೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳೂ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

ಕಾಮಗಾರಿಯಾಗಲೀ ಅಥವಾ ಯಾವುದೇ ವಸ್ತುಗಳನ್ನು ಖರೀದಿ ಮಾಡುವುದಾಗಲೀ ಸರ್ಕಾರದ ನಿಯಮದಂತೆ ಮೊದಲು ಕೊಟೇಷನ್‌ ಅಥವಾ ಟೆಂಡರ್‌ ಕರೆದು ನಂತರ ಕಾಮಗಾರಿ ನಿರ್ವಹಿಸಬೇಕು. ವಸ್ತುಗಳನ್ನು ಖರೀದಿ ಮಾಡಬೇಕಾಗಿದೆ, ಯಾರೇ ನಿಯಮಗಳನ್ನು ಉಲ್ಲಂ ಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
-ಶಿವೇಗೌಡ ಎ.ಸಿ, ಪ್ರಭಾರ ಯೋಜನಾಧಿಕಾರಿಗಳು,

ಸ್ಟೇಡಿಯಂ ಬಡಾವಣೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ನಾನು ಕಳೆದೆರಡು ಸಾಮಾನ್ಯ ಸಭೆಯಲ್ಲಿ ವಿಷಯ ತಂದು ಇಲ್ಲಿ ಖಾಸಗಿ ಬಡಾವಣೆ ಮಾಲೀಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕಾಮಗಾರಿ ನಡೆಸಿದ್ದು, ಸುಮಾರು 4 ಲಕ್ಷ ರೂನಷ್ಟು ಬಿಲ್‌ ಸೃಷ್ಟಿ ಮಾಡಿದ್ದಾರೆ. ಅಲ್ಲಿ ಕೆಲಸ ಮಾಡುವ ಆಗಿಲ್ಲ, ಎಂದು ಆಕ್ಷೇಪ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಅಲ್ಲಿ ಸಾಮಾನ್ಯ ಹಣಕಾಸು ನಿಧಿಯಿಂದ ಹಣ ನೀಡಬಾರದು ಎಂದು ತಿಳಿಸಿದ್ದೇನೆ, ಆದರೂ ಅಧಿಕಾರಿಗಳು ಮತ್ತು ಕೆಲವರು ಸೇರಿಕೊಂಡು ಬಿಲ್‌ ಮಾಡಲು ಸಂಚು ಮಾಡುತ್ತಿದ್ದಾರೆ, ಈ ವಿಚಾರವಾಗಿ ನಾನು ಜಿಲ್ಲಾಧಿಕಾರಿಗಳಿಗೂ ದೂರು ನೀಡುತ್ತೇನೆ.
-ಎನ್‌.ಉಮಾಶಂಕರ್‌, ಸದಸ್ಯರು, ಪುರಸಭೆ

* ಬಿ.ನಿಂಗಣ್ಣಕೋಟೆ

Advertisement

Udayavani is now on Telegram. Click here to join our channel and stay updated with the latest news.

Next