Advertisement

ಕೈನಲ್ಲಿ ನಿಲ್ಲದ ಮನಸ್ತಾಪದ ಮಾತುಗಳು

10:07 PM Jul 28, 2023 | Team Udayavani |

ಬೆಂಗಳೂರು: ಸಚಿವರು-ಶಾಸಕರ ನಡುವೆ ಸಮನ್ವಯ ಸಾಧಿಸಲೆಂದೇ ಕಾಂಗ್ರೆಸ್‌ ಶಾಸಕಾಂಗ ಪಕ್ಷ (ಸಿಎಲ್‌ಪಿ)ದ ಸಭೆ ನಡೆಸಿ, ನಾಯಕರಿಂದ “ಅಸಮಾಧಾನದ ಹೊಗೆ’ಯಾಡದಂತೆ ತೇಪೆ ಹಚ್ಚುವ ಕೆಲಸ ನಡೆದಿದೆ. ಆದರೆ, ಸಭೆಯ ಮರುದಿನವೂ ನಡೆಯುತ್ತಿರುವ ಬೆಳವಣಿಗೆಗಳು, ಅಸಮಾಧಾನ ಇನ್ನೂ ಸಂಪೂರ್ಣ ಶಮನಗೊಂಡಿಲ್ಲ ಎಂಬುದನ್ನು ಸೂಚಿಸುತ್ತಿವೆ.

Advertisement

ಸಚಿವರಾದ ಪ್ರಿಯಾಂಕ ಖರ್ಗೆ, ಸತೀಶ ಜಾರಕಿಹೊಳಿ ಒಳಗೊಂಡಂತೆ ಕೆಲ ಶಾಸಕರು ಸ್ಥಳೀಯವಾಗಿ ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ವಿಶೇಷವಾಗಿ ವರ್ಗಾವಣೆ ವಿಷಯದಲ್ಲಿ ಉಂಟಾದ ಮನಸ್ತಾಪಕ್ಕೆ ಗುರುವಾರ ನಡೆದ ಸಿಎಲ್‌ಪಿ ಸಭೆಯಲ್ಲಿ “ಮದ್ದು’ ದೊರೆತಂತಿಲ್ಲ. ಸಚಿವರಂತೂ ಈ ವಿಚಾರದಲ್ಲಿ “ಸಿಎಂ ವಿವೇಚನೆ’ಗೆ ಬಿಟ್ಟಿದ್ದು ಎಂದು ಮುಖ್ಯಮಂತ್ರಿಯತ್ತ ಬೊಟ್ಟು ಮಾಡುತ್ತಿದ್ದಾರೆ.

ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ, “ಎಲ್ಲರನ್ನೂ ನಾವು ಸಮಾಧಾನಪಡಿಸಲು ಆಗುವುದಿಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಯಬೇಕು. ರೂಲ್ಸ್‌ ಬ್ರೇಕ್‌ ಮಾಡಿದ್ರೆ ನೀವೇ (ಮಾಧ್ಯಮದವರಿಗೆ) ಬಿಡ್ತೀರಾ? ಬಂದು ನಮ್ಮನ್ನು ಕೇಳುತ್ತೀರಾ. ಎಲ್ಲವೂ ಪಾರದರ್ಶಕವಾಗಿ ನಡೆಯಬೇಕಲ್ಲವೇ? ಯಾವುದೇ ಇಲಾಖೆಗಳಾಗಲಿ ನಿಯಮಗಳಂತೆ ನಡೆಯಬೇಕಾಗುತ್ತದೆ’ ಎಂದು ಸೂಚ್ಯವಾಗಿ ಹೇಳಿದರು.

“ಇನ್ನು ಅವಧಿಪೂರ್ಣ ವರ್ಗಾವಣೆಗಳಿದ್ದರೆ, ಅದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ಎಲ್ಲರನ್ನೂ ನಾವು ಸಮಾಧಾನಪಡಿಸಲು ಆಗಲ್ಲ’ ಎಂದ ಅವರು, “ಅಷ್ಟಕ್ಕೂ ಪತ್ರ ಬರೆಯುವುದು ತಪ್ಪಲ್ಲ; ಅದು ಶಾಸಕರ ಹಕ್ಕು. ಆದರೆ, ಅದಕ್ಕಿಂತ ನೇರವಾಗಿಯೇ ಹೇಳಬಹುದಿತ್ತು. ಯಾಕೆಂದರೆ ಆ ಪತ್ರವನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಸಿಎಲ್‌ಪಿ ಸಭೆಯಲ್ಲಿ ಮುಖ್ಯವಾಗಿ ಎರಡು ಪತ್ರಗಳ ಬಗ್ಗೆ ಚರ್ಚೆಯಾಗಿದೆ. ಒಂದು ಬಿಜೆಪಿಯ ನಕಲಿ ಪತ್ರ, ಮತ್ತೂಂದು ನಮ್ಮ ಶಾಸಕರು ಸಭೆ ಕರೆಯುವಂತೆ ಸಿಎಂಗೆ ಬರೆದ ಪತ್ರ. ಇದರೊಂದಿಗೆ ಸ್ಥಳೀಯ ಸಮಸ್ಯೆಗಳು ಇದ್ದೇ ಇರುತ್ತವೆ’ ಎಂದು ಮಾಹಿತಿ ನೀಡಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿದೇಶಿ ಪ್ರವಾಸದ ಬಗ್ಗೆ ಕೇಳಿದಾಗ, “ಇನ್ನು ಐದು ವರ್ಷ ಕಾಲ ಏನು ಮಾಡ್ತಾರೆ? ಕರ್ನಾಟಕದ ಪ್ರವಾಸೋದ್ಯಮ ಚೆನ್ನಾಗಿ ಮಾಡಿದ್ದೇವೆ. ವಿದೇಶವನ್ನೂ ನೋಡಲಿ ಜತೆಗೆ ಕರ್ನಾಟಕವನ್ನೂ ನೋಡಲಿ’ ಎಂದು ವ್ಯಂಗ್ಯವಾಡಿದರು.

Advertisement

ನಮಗೂ ಇತಿಮಿತಿಗಳಿವೆ’: ಸಚಿವ ಸತೀಶ್‌ ಜಾರಕಿಹೊಳಿ ಮಾತನಾಡಿ, “ವರ್ಗಾವಣೆಗೆ ನಮಗೂ ಇತಿಮಿತಿಗಳಿವೆ. ಶೇ. 6ರಷ್ಟು ವರ್ಗಾವಣೆ ಮಾಡಲು ನಮಗೆ ಅವಕಾಶ ಇದೆ. ಉಳಿದಿದ್ದು ಮುಖ್ಯಮಂತ್ರಿ ಮಾಡುತ್ತಾರೆ. ಕೆಲವೊಂದಕ್ಕೆ ಶಾಸಕರು ಕನ್ವಿನ್ಸ್‌ ಆಗುವುದಿಲ್ಲ. ನೌಕರರನ್ನು ಏಕಾಏಕಿ ತೆಗೆದುಹಾಕಲು ಆಗುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

“ನಾವು (ಸಚಿವರು) ಶಾಸಕರ ಕೈಗೆ ಸಿಗುತ್ತೇವೆ. ಕೆಲವು ಶಾಸಕರು, ಸಚಿವರು ವರ್ಗಾವಣೆ ಪತ್ರಗಳನ್ನು ಕೊಟ್ಟಿದ್ದಾರೆ. ಪ್ರಕ್ರಿಯೆ ನಡೆಯುತ್ತಿದೆ. ಶಾಸಕರ ಪತ್ರ ವಿಚಾರವನ್ನು ಮುಖ್ಯಮಂತ್ರಿ ನೋಡುತ್ತಾರೆ. ಕೆಲವು ಸಮಸ್ಯೆಗಳು ಇದ್ದೇ ಇರುತ್ತವೆ. ಇಲ್ಲ ಎನ್ನಲಾಗುವುದಿಲ್ಲ’ ಎಂದು ಒಪ್ಪಿಕೊಂಡ ಸಚಿವ ಜಾರಕಿಹೊಳಿ, “ಮುಖ್ಯಮಂತ್ರಿ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಪಕ್ಷದ ಭಾಗವಾಗಿದ್ದಾರೆ. ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಈ ಅವಧಿಯಲ್ಲಿ ಸಿಎಂ ರೇಸ್‌ನಲ್ಲಿ ಇಲ್ಲ. ಮುಂದಿನ ಅವಧಿಯಲ್ಲಿ ಇರುತ್ತೇನೆ ಎಂದು ಈ ಮೊದಲೇ ಹೇಳಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next