Advertisement

ವುಡನ್‌ ಆಭರಣಗಳು

07:00 AM May 11, 2018 | Team Udayavani |

ಪ್ರಕೃತಿಯಲ್ಲಿರುವ  ಪರಾವಲಂಬಿ ಜೀವಿಗಳಲ್ಲಿ ಮನುಷ್ಯ ಮೊದಲನೆಯ ಸ್ಥಾನದಲ್ಲಿದ್ದಾನೆ. ತನ್ನ ಎಲ್ಲಾ ಅಗತ್ಯತೆಗಳಿಗೂ ಕೂಡ ಆತ ನಿಸರ್ಗವನ್ನೇ ಅವಲಂಬಿಸಿದ್ದಾನೆ. ನಿಸರ್ಗದ ಪ್ರತಿಯೊಂದೂ ವಸ್ತುವನ್ನೂ ತನಗೆ ಬೇಕಾದಂತೆ ಮಾರ್ಪಾಡುಗೊಳಿಸಿ ಬಳಸುವಂತಹ ಕಲೆ ಮಾನವನಿಗೆ ವೈಜ್ಞಾನಿಕ ಆವಿಷ್ಕಾರಗಳಾಗುವುದಕ್ಕಿಂತಲೂ ಮೊದಲಿನಿಂದಲೂ ತಿಳಿದಿರುವಂತಹುದಾಗಿದೆ. ನಮ್ಮ ನಿಸರ್ಗದ ಅತ್ಯಮೂಲ್ಯ ಮತ್ತು  ನಿಧಾನವಾಗಿ ಕಡಿಮೆಯಾಗುತ್ತಿರುವ  ಸಂಪತ್ತುಗಳಲ್ಲಿ ಅರಣ್ಯ ಸಂಪತ್ತೂ ಕೂಡ ಒಂದು. ಅಂತಹ ಅರಣ್ಯಗಳ ಭಾಗಗಳಾದ ಮರಗಳಿಂದಾಗುವ ಉಪಯೋಗಗಳನೇಕ. ಇಂಧನವಾಗಿ, ಫ‌ನೀìಚರುಗಳಾಗಿ, ಆಟಿಕೆಗಳಾಗಿ ಹೀಗೆ ಹತ್ತುಹಲವು ಬಗೆಗಳಲ್ಲಿ  ಮರಗಳನ್ನು ಬಳಕೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಲೋಹಗಳ ಆವಿಷ್ಕಾರವಾಗುವ ಮೊದಲೇ ಮಾನವರು ಲಭ್ಯ ವಸ್ತುಗಳಿಂದ ತಮಗೆ ಬೇಕಾದ ನಿತ್ಯ ಬಳಕೆಯ ವಸ್ತುಗಳನ್ನು ತಯಾರಿಸಿಕೊಳ್ಳುತ್ತಿದ್ದರು. ದಿನಬಳಕೆಯ ಪಾತ್ರೆಗಳನ್ನು ಮತ್ತು ಇನ್ನಿತರೆ ಸಾಧನಗಳನ್ನು ಲೋಹಗಳ ಆವಿಷ್ಕಾರದ ಮೊದಲೇ ಕಂಡುಕೊಂಡು ಬಳಸುತ್ತಿದ್ದರು. ನಿಧಾನವಾಗಿ ಅಲಂಕಾರಿಕ ಆಭರಣಗಳ ಬಗೆಗೆ ಆಸಕ್ತಿಯನ್ನು ಹೊಂದಿದ ಮಾನವ ಪ್ರಕೃತಿದತ್ತ ವಸ್ತುಗಳಿಂದ ಸೌಂದರ್ಯವರ್ಧಕ ಆಭರಣಗಳ ತಯಾರಿಕೆಯನ್ನೂ ಕರಗತ ಮಾಡಿಕೊಂಡ. ಸುಲಭವಾಗ ದೊರೆಯುತ್ತಿದ್ದ ಮರಗಳನ್ನು ಬಳಸಿ ಆಭರಣಗಳನ್ನು ತಯಾರಿಸಲಾರಂಭಿಸಿದ. ಹಿಂದಿನಿಂದಲೂ ಬಳಕೆಯಲ್ಲಿದ್ದ ಇವುಗಳು ಇತ್ತೀಚೆಗೆ ಮತ್ತೆ ಪ್ರಚಲಿತದಲ್ಲಿ ಬಂದು ಫ್ಯಾಷನ್‌ ಲೋಕದಲ್ಲಿ ಬಹಳ ಸದ್ದನ್ನು ಮಾಡುತ್ತಿವೆ. ಆಂಟಿಕ್‌ ಆಭರಣಗಳಂತೆ ಮರದಿಂದ ತಯಾರಿಸಿದ ಆಭರಣಗಳೂ ಕೂಡ ಟ್ರೆಂಡಿ ಆಭರಣಗಳೆನಿಸಿದೆ. 

Advertisement

1 ಕೇಶಾಭರಣಗಳು: ಮರದಿಂದ ತಯಾರಿಸಿದ ಕ್ಲಿಪ್ಪುಗಳು ಅಥವಾ ಹೇರ್‌ ಪಿನ್ನುಗಳು ಟ್ರೆಂಡಿ ಬಗೆಯವು. ವಿವಿಧ ಆಕಾರಗಳಲ್ಲಿ ಬರುವ ಈ ಬಗೆಯ ಪಿನ್ನುಗಳು ತುರುಬನ್ನು ಕಟ್ಟಲು ಅಥವಾ ಪೋನಿಟೈಲ್ ಕಟ್ಟಲು ಬಳಸುವಂತಹುದಾಗಿದೆ. ಬಹಳ ಸುಲಭವಾಗಿ ಮತ್ತು ಸ್ಟೈಲಿಶ್‌ ಆದ ಲುಕ್ಕನ್ನು ಕೊಡುವ ಈ ಬಗೆಯ ಕ್ಲಿಪ್ಪುಗಳು ಅನೇಕ ಬಣ್ಣಗಳಲ್ಲಿ ಕೂಡ ದೊರೆಯುವುದರಿಂದ ದಿರಿಸುಗಳಿಗೆ ಒಪ್ಪುವಂತಹ ಪಿನ್ನುಗಳನ್ನು ಧರಿಸಬಹುದು. ಈ ಬಗೆಯ ಪಿನ್ನುಗಳ ತುದಿಗಳಲ್ಲಿ ಸುಂದರವಾದ ಲಟ್ಕನ್ನುಗಳೂ ಕೂಡ ಇರುತ್ತವೆ. 

 2 ನೆಕ್ಲೇಸುಗಳು: ಮರದ ಮಣಿಗಳನ್ನು ಕಾರ್ವಿಂಗ್‌ ಮಾಡಿ ಬೇಕಾದ ಆಕಾರ ಮತ್ತು ಅಳತೆಗೆ ಪರಿವರ್ತಿಸಿ ಅವುಗಳಿಂದ ಸುಂದರವಾದ ನೆಕ್ಲೇಸುಗಳನ್ನು ತಯಾರಿಸಲಾಗುತ್ತದೆ. ಹಲವು ಬಣ್ಣಗಳಲ್ಲಿ ಮತ್ತು ಹಲವು ಆಕಾರಗಳಲ್ಲಿರುವ ಬೀಡುಗಳಿಂದ ಕಲಾಕಾರನ ಸೃಜನಶೀಲತೆಯಲ್ಲಿ ಅರಳುವ ಆಭರಣಗಳ ಸೌಂದರ್ಯ ಹೇಳತೀರದು. ಇವುಗಳೂ ಕೂಡ ಟೆರ್ರಾಕೋಟ ಆಭರಣಗಳಂತೆ ಕಾಟನ್‌ ಸೀರೆಗಳಿಗೆ ಮತ್ತು ಫ್ಯೂಷನ್‌ವೇರುಗಳಿಗೆ ಬಹಳ ಚೆನ್ನಾಗಿರುತ್ತವೆ. 

3 ಆಂಕ್ಲೆಟುಗಳು: ಮರದ ಮಣಿಗಳಿಂದ ತಯಾರಿಸಿದ ಬಣ್ಣ ಬಣ್ಣದ ಆಂಕ್ಲೆಟುಗಳು ದೊರೆಯುತ್ತವೆ. ಇವುಗಳು ಕಾಲಿನ ಅಂದವನ್ನು ಹೆಚ್ಚಿಸುತ್ತವೆ. ಇವುಗಳು ಸಸ್ಯಮೂಲವಾದ್ದರಿಂದ ಚರ್ಮಕ್ಕೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ. ಇವುಗಳ ಬೆಲೆಯೂ ಕೂಡ ಎಲ್ಲರ ಕೈಗೆಟಕುವಂಥದ್ದು. 

4 ಕಿವಿಯಾಭರಣಗಳು: ಝುಮ್ಕಾಗಳು, ಹ್ಯಾಂಗಿಗುಗಳು, ರಿಂಗುಗಳು, ಸ್ಟಡ್ಡುಗಳು ಹೀಗೆ ಎಲ್ಲಾ ಬಗೆಯ ಕಿವಿಯಾಭರಣಗಳೂ ಕೂಡ ಮರದ ಆಭರಣಗಳಲ್ಲಿ ದೊರೆಯುತ್ತವೆ. ಇವುಗಳನ್ನು ತಯಾರಿಸಿದ ನಂತರ ಅವುಗಳಿಗೆ ಬೇಕಾದ ಬಣ್ಣಗಳನ್ನು ಕೊಟ್ಟು ನಂತರ ಹೊಳಪನ್ನು ಹೆಚ್ಚಿಸಲು ವಾರ್ನಿಶ್‌ ಅನ್ನು ಕೊಡಲಾಗುತ್ತದೆ. ಇದರಿಂದ ಆಭರಣಗಳು ಹೊಳೆಯುವುದಷ್ಟೇ ಅಲ್ಲದೆ ಧೂಳು ಕೊಳೆಗಳಿಂದ ಆಭರಣಗಳನ್ನು ರಕ್ಷಿಸುತ್ತದೆ.

Advertisement

5 ಬ್ರೇಸ್ಲೆಟುಗಳು ಮತ್ತು ಬಳೆಗಳು: ಮರದ ಬೀಡುಗಳಿಂದ  ತಯಾರಾದ ಬ್ರೇಸ್ಲೆಟ್ಟುಗಳು ಮತ್ತು ಬಳೆಗಳು ದೊರೆಯುತ್ತವೆ. ಅಗಲವಾದ ಬಳೆಗಳು ವಿವಿಧ ಬಣ್ಣಗಳಲ್ಲಿ ದೊರೆಯುತ್ತದೆ ಮತ್ತು ಸಿಂಗಲ್ ಬಳೆಯನ್ನು ಮಾಡರ್ನ್ ದಿರಿಸುಗಳೊಂದಿಗೂ ಕೂಡ ಧರಿಸಿ ಸ್ಟೈಲಿಶ್‌ ಮತ್ತು ಟ್ರೆಂಡಿ ಲುಕ್ಕನ್ನು ಪಡೆಯಬಹುದು. ಮಕ್ಕಳಿಗೂ ಕೂಡ ಇತರೆ ಮೆಟಲ್ ಬ್ರೇಸ್ಲೆಟ್ ಮತ್ತು ಬಳೆಗಳಿಗಿಂತ ಮರದಿಂದ ತಯಾರಿಸಿದ ಬಳೆಗಳು ಹೆಚ್ಚು ಸೂಕ್ತವೆನಿಸುತ್ತವೆ. ಈ ಬಗೆಯ ಆಭರಣಗಳು ಚರ್ಮಕ್ಕೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ.

6 ಬ್ರೋಚುಗಳು: ಸೀರೆಗಳನ್ನು ಅಥವಾ ದುಪ್ಪಟ್ಟಾಗಳನ್ನು ಧರಿಸುವಾಗ ಪಿನ್ನುಗಳನ್ನು ಬಳಸುತ್ತೇವೆ. ಅಂತಹ ಸಂದರ್ಭಗಳಲ್ಲಿ ಸಾಧಾರಣ ಪಿನ್ನುಗಳನ್ನು ಬಳಸುವ ಬದಲು ಮರದ ಪೆಂಡೆಂಟುಗಳಿಂದ ತಯಾರಿಸಲಾದ ಬ್ರೋಚುಗಳು ಬಹಳ ಸ್ಟೈಲಿಶ್‌ ಲುಕ್ಕನ್ನು ನೀಡುತ್ತವೆ. 

7 ಪೆಂಡೆಂಟ್ ಸೆಟ್ಟುಗಳು: ಇತ್ತೀಚಿನ ರನ್ನಿಂಗ್‌ ಟ್ರೆಂಡುಗಳಲ್ಲಿ ಲಾಂಗ್‌ ಚೈನ್‌ ವಿದ್‌ ಪೆಂಡೆಂಟ್ ಸೆಟ್ಟುಗಳು ಕೂಡ ಒಂದು. ಮೆಟಲ್ ಪೆಂಡೆಂಟ್ ಸೆಟ್ಟುಗಳಂತೆ ಮರದ ಪೆಂಡೆಂಟ್ ಸೆಟ್ಟುಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಪೀಕಾಕ್‌ ಡಿಸೈನ್‌, ಸ್ಮೈಲಿ ಪೆಂಡೆಂಟ್, ಚಾರ್ಮ್ ಪೆಂಡೆಂಟ್, ಪ್ರಾಣಿಗಳ ಮುಖದಂತಿರುವ ಪೆಂಡೆಂಟ್, ಟ್ರೈಬಲ್ ಪೆಂಡೆಂಟುಗಳು ಹೀಗೆ ವಿಭಿನ್ನವಾದ ಡಿಸೈನುಗಳಲ್ಲಿ ತಯಾರಿಸಲ್ಪಟ್ಟ ಆಭರಣಗಳು ಯುವಜನತೆಯನ್ನು ತನ್ನತ್ತ ಸೆಳೆಯುತ್ತಿದೆ. 

8 ತೋಳ್ಬಂದಿಗಳು: ಬಂಗಾರದ ತೋಳ್ಬಂದಿಗಳಂತೆಯೇ ಮರದ ತೋಳ್ಬಂದಿಗಳೂ ಕೂಡ ದೊರೆಯುತ್ತದೆ. ಅಪರೂಪವೆನಿಸುವ ಈ ತೋಳ್ಬಂದಿಗಳು ಟ್ರೈಬಲ್ ಲುಕ್ಕನ್ನು ನೀಡುತ್ತವೆ.

9 ಫಿಂಗರ್‌ ರಿಂಗುಗಳು: ಮರದಿಂದ ತಯಾರಿಸಿದ ಉಂಗುರಗಳೂ ದೊರೆಯುತ್ತವೆ. ಸುಂದರವಾದ ವಿವಿಧ ಬಗೆಯ ಡಿಸೈನುಗಳಲ್ಲಿ ದೊರೆಯುವ ಈ ರಿಂಗುಗಳು ನೋಡಲು ಆಕರ್ಷಕವಾಗಿರುತ್ತದೆ. 

 ಈ ಬಗೆಯ ಮರದ ಆಭರಣಗಳಿಗೆ ಆಂಟಿಕ್‌ ಟಚ್‌ ಅನ್ನು ಕೊಡುವುದರ ಮೂಲಕ  ದುಬಾರಿ ಆಭರಣಗಳನ್ನೂ ಮೀರಿಸುವಂತಹ ಆಭರಣಗಳು ತಯಾರಾಗುತ್ತವೆ. ಇವುಗಳು ಮಾಡರ್ನ್ ಮಹಿಳೆಯರನ್ನೂ ಕೂಡ ತನ್ನೆಡೆಗೆ ಬಲು ಬೇಗ ಆಕರ್ಷಿಸುವಂತಿರುತ್ತವೆ. ಇಷ್ಟೇ ಅಲ್ಲದೆ ಮರದಿಂದ ತಯಾರಿಸಿದ ಆಟಿಕೆಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಹಿಂದೆಲ್ಲ ಬಹಳವಾಗಿ ಬಳಸಲ್ಪಡುತ್ತಿದ್ದ ಆಟಿಕೆಗಳು ಇಂದು ಪುನಃ ಮಾರುಕಟ್ಟೆಗೆ ಬಂದು ಸ್ಥಾನವನ್ನು ಪದೆದುಕೊಂಡಿವೆ. ಪುಟ್ಟ ಮಕ್ಕಳ ಪ್ಲ್ಯಾಸ್ಟಿಕ್‌ ಆಟಿಕೆಗಳಿಗೆ ಇವುಗಳು ಒಳ್ಳೆಯ ಬದಲಿ ವ್ಯವಸ್ಥೆಯಾಗಿ ಬಳಸಲ್ಪಡುವಂತಹುದಾಗಿದೆ. ಅಷ್ಟೇ ಅಲ್ಲದೆ ಮರದಿಂದ ತಯಾರಿಸಿದ ಅಲಂಕಾರಿಕ ವಸ್ತುಗಳೂ ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ವಾಲ್ ಹ್ಯಾಂಗಿಂಗ್‌, ಕೀ ಹ್ಯಾಂಗರ್ಸ್‌, ಕಾರ್ಡ್‌ ಹೋಲ್ಡರ್‌ ಇತ್ಯಾದಿಗಳು ದೊರೆಯುತ್ತವೆ. ನಮ್ಮನ್ನು ಅಲಂಕರಿಸುವ ಮರದ ಆಭರಣಗಳು ನಮ್ಮ ಮನೆಯನ್ನೂ ಅಲಂಕಾರಿಕ ವಸ್ತುಗಳ ಮೂಲಕ ಸುಂದರಗೊಳಿಸುತ್ತವೆ. 

ಪ್ರಭಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next