ನವದೆಹಲಿ:ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಕಾನೂನು ವ್ಯಾಪ್ತಿಯೊಳಗೆ ಸಿಬಿಐಗೆ ವರ್ಗಾಯಿಸಲಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತ್ವದ ಬಿಹಾರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.
ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ಕುಟುಂಬಸ್ಥರು ವಂಚನೆ ಸೇರಿದಂತೆ ಹಲವಾರು ಆರೋಪಗಳ ಮೇಲೆ ಪೊಲೀಸರ ಬಳಿ ದೂರು ದಾಖಲಿಸಿದ್ದು, ಪಾಟ್ನಾದಲ್ಲಿನ ಎಫ್ ಐಆರ್ ವರದಿಯನ್ನು ಮುಂಬೈಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಸುಶಾಂತ್ ಪ್ರಕರಣದಲ್ಲಿ ಬಿಹಾರ ಪೊಲೀಸರ ಎಫ್ ಐಆರ್ ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ. ಅಲ್ಲದೇ ರಾಜ್ಯಕ್ಕೆ ಪ್ರಕರಣವನ್ನು ಸಿಬಿಐಗೆ ವಹಿಸುವ ಅಧಿಕಾರ ವ್ಯಾಪ್ತಿಯೂ ಇಲ್ಲ ಎಂದು ರಿಯಾ ಪರ ವಕೀಲರು ವಾದಿಸಿದ್ದರು. ಆದರೆ ಒಂದು ವೇಳೆ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಯಾವುದೇ ಆಕ್ಷೇಪವಿಲ್ಲ ಎಂದು ರಿಯಾ ತಿಳಿಸಿರುವುದಾಗಿ ವರದಿ ಹೇಳಿದೆ.
ಬಿಹಾರ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ತನ್ನ ಪಾಟ್ನಾದ ಎಫ್ ಐಆರ್ ಅನ್ನು ಮುಂಬೈಗೆ ವರ್ಗಾಯಿಸದಂತೆ ತಡೆಯಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ರಿಯಾ ಆರೋಪಿಸಿರುವುದಾಗಿ ವರದಿ ತಿಳಿಸಿದೆ.
ಆದರೆ ರಿಯಾ ಚಕ್ರವರ್ತಿ ಆರೋಪವನ್ನು ಬಿಹಾರ ಸರ್ಕಾರ ಅಲ್ಲಗಳೆದಿದೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ಬಗ್ಗೆ ಮೊದಲು ಎಫ್ ಐಆರ್ ದಾಖಲಾದ ನಂತರವೇ ತನಿಖೆ ಆರಂಭಿಸಿದ್ದೇವೆ. ಅಲ್ಲದೇ ಮುಂಬೈ ನಿವಾಸದಲ್ಲಿ ನಟ ಸುಶಾಂತ್ ಆತ್ಮಹತ್ಯೆಗೆ ಶರಣಾಗಿ ಒಂದು ವಾರದವರೆಗೂ ಮುಂಬೈ ಪೊಲೀಸರು ಏನೂ ತನಿಖೆ ಕೈಗೊಂಡಿಲ್ಲವಾಗಿತ್ತು ಎಂದು ದೂರಿದೆ.
ನಂತರ ಪಾಟ್ನಾದಲ್ಲಿ ಸಿಂಗ್ ತಂದೆ ಎಫ್ ಐಆರ್ ದಾಖಲಿಸಿದ ನಂತರ ತನಿಖೆ ನಡೆಸಲು ಆರಂಭಿಸಿದ್ದೇವೆ. ಮುಂಬೈ ಪೊಲೀಸರು ಯಾವುದೇ ಎಫ್ ಐಆರ್ ಅನ್ನು ದಾಖಲಿಸಿಕೊಂಡಿಲ್ಲವಾಗಿತ್ತು. ಅವರ ತನಿಖೆ ಕಾನೂನು ಬದ್ಧವಾಗಿಲ್ಲ ಎಂದು ಬಿಹಾರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.