Advertisement

ಇನ್ನು ಚುನಾವಣೆಗೆ ಸ್ಪರ್ಧಿಸಲ್ಲ : ಉಮಾಭಾರತಿ

09:55 AM Dec 05, 2018 | Team Udayavani |

ಭೋಪಾಲ: ಚುನಾವಣಾ ರಾಜಕೀಯಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕೇಂದ್ರ ಸಚಿವೆ ಉಮಾ ಭಾರತಿ ಕೂಡ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಚುನಾವಣೆಗೆ ಸ್ಪರ್ಧಿಸುವುದರ ಬದಲಿಗೆ ಅಯೋಧ್ಯೆಯಲ್ಲಿ ರಾಮಮಂದಿರ ವಿಚಾರ ಹಾಗೂ ಗಂಗಾ ನದಿ ಶುದ್ಧೀಕರಣದ ಬಗ್ಗೆ ಮುಂದಿನ ಒಂದೂವರೆ ವರ್ಷಗಳ ಕಾಲ ಶ್ರಮಿಸಲಿದ್ದೇನೆ ಎಂದಿದ್ದಾರೆ.

Advertisement

ಆದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಿಲ್ಲ. ನಾನು ಈ ವಿಷಯವನ್ನು ಎರಡು ವರ್ಷಗಳ ಹಿಂದೆಯೇ ಹೇಳಿದ್ದೇನೆ. ನನ್ನ ನಿರ್ಧಾರಕ್ಕೂ, ಸುಷ್ಮಾ ಹೇಳಿಕೆಗೂ ಸಂಬಂಧ ಕಲ್ಪಿಸಬೇಡಿ ಎಂದೂ ಅವರು ಹೇಳಿದ್ದಾರೆ. ಗಂಗಾ ನದಿಯ ದಡದಲ್ಲಿ 2500 ಕಿ.ಮೀ ಪಾದ ಯಾತ್ರೆಯನ್ನು ಮುಂದಿನ ಜನವರಿಯಿಂದ ಆರಂಭಿಸಲಿದ್ದೇನೆ. ಒಂದೂವರೆ ವರ್ಷ ಈ ಕಾರ್ಯದಲ್ಲಿ ನಿರತನಾಗಿರಲಿದ್ದೇನೆ. ಅಧಿಕಾರ ತ್ಯಜಿಸಿಯೇ ಈ ಕೆಲಸ ಮಾಡಬೇಕೆಂದು ನಿರ್ಧರಿಸಿದ್ದೇನೆ. ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸುತ್ತೇನೆ. ನನ್ನ ಉಸಿರು ಇರುವವರೆಗೂ ನಾನು ರಾಜಕೀಯದಲ್ಲಿರುತ್ತೇನೆ ಎಂದು ಉಮಾಭಾರತಿ ಹೇಳಿದ್ದಾರೆ. ಅವರು ಸದ್ಯ ಝಾನ್ಸಿ ಕ್ಷೇತ್ರದಿಂದ ಲೋಕಸಭೆ ಸದಸ್ಯೆಯಾಗಿದ್ದಾರೆ.

ಇವಿಎಂ ಬಗ್ಗೆಯೂ ಉಲ್ಲೇಖ: ಮತಯಂತ್ರಗಳನ್ನು ಹ್ಯಾಕ್‌ ಮಾಡಬಹುದೆಂದು ಯಾರಾದರೂ ಗೌಪ್ಯವಾಗಿ ಮಾಹಿತಿ ನೀಡಿದರೆ ಅದನ್ನು ಚುನಾವಣಾ ಆಯೋಗ ಸ್ವೀಕರಿಸಬೇಕು. ವಿಜ್ಞಾನ-ತಂತ್ರಜ್ಞಾನದಲ್ಲಿ ಮುಂದಿರುವ ಅಮೆರಿಕವೇ ಇವಿಎಂಗಳನ್ನು ಬಳಸುತ್ತಿಲ್ಲ. ಹೀಗಾಗಿ ಪಕ್ಷಗಳು ಅನುಮಾನ ವ್ಯಕ್ತಪಡಿಸಿದರೆ ಅದನ್ನು ಸ್ಪಷ್ಟಪಡಿಸುವುದು ಆಯೋಗದ ಕರ್ತವ್ಯ ಎಂದು ಉಮಾ ಭಾರತಿ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಇವಿಎಂಗಳನ್ನು ಹ್ಯಾಕ್‌ ಮಾಡಲಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಇವರ ಈ ಹೇಳಿಕೆ ಪುಷ್ಟಿ ನೀಡಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next