Advertisement

‘ವಿಕ್ರಂ’ ದಯವಿಟ್ಟು ಪ್ರತಿಕ್ರಿಯಿಸು ; ಸಿಗ್ನಲ್ ಬ್ರೇಕ್ ಮಾಡಿದ್ದಕ್ಕೆ ನಿನಗೆ ಫೈನ್ ಇಲ್ಲ!

09:41 AM Sep 11, 2019 | Hari Prasad |

ನವದೆಹಲಿ: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯ ಕೊನೆಯ ಹಂತವಾಗಿದ್ದ ವಿಕ್ರಂ ನೌಕೆಯ ಸಾಫ್ಟ್ ಲ್ಯಾಂಡಿಂಗ್ ವಿಫಲವಾಗಿದ್ದಕ್ಕೆ ದೇಶಕ್ಕೆ ದೇಶವೇ ನಿರಾಶೆ ಅನುಭವಿಸಿತ್ತು. ಆದರೆ ತನ್ನ ನಿರ್ಧಿಷ್ಟ ಪಥ ಬಿಟ್ಟು ಹೋಗಿದ್ದ ವಿಕ್ರಂ ನೌಕೆ ಚಂದ್ರನ ದಕ್ಷಿಣ ಧ್ರುವ ಭಾಗದಲ್ಲಿ ಕ್ರ್ಯಾಷ್ ಲ್ಯಾಂಡಿಂಗ್ ಆಗಿರುವುದನ್ನು ಚಂದ್ರಯಾನದ ಆರ್ಬಿಟರ್ ಒಂದಿ ದಿನದ ಬಳಿಕ ಪತ್ತೆ ಹಚ್ಚಿತ್ತು.

Advertisement

ಇದರಿಂದಾಗಿ ವಿಕ್ರಂ ಲ್ಯಾಂಡರ್ ಇನ್ನೂ ಕಾರ್ಯಾಚರಿಸುವ ಕ್ಷೀಣ ಆಸೆಯೊಂದು ಇಸ್ರೋ ವಿಜ್ಞಾನಿಗಳಲ್ಲಿ ಮತ್ತು ದೇಶವಾಸಿಗಳಲ್ಲಿ ಮೂಡಿದೆ. ಇದಕ್ಕೆ ಪೂರಕವಾಗಿ ನಾಗ್ಪುರ ನಗರ ಪೊಲೀಸರು ಮಾಡಿರುವ ಟ್ವೀಟ್ ಒಂದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

‘ಡಿಯರ್ ವಿಕ್ರಂ ದಯವಿಟ್ಟು ಪ್ರತಿಕ್ರಿಯಿಸು. ಸಿಗ್ನಲ್ ಉಲ್ಲಂಘನೆ ಮಾಡಿರುವುದಕ್ಕೆ ನಿನಗೆ ನಾವೇನೂ ದಂಡ ವಿಧಿಸುವುದಿಲ್ಲ!’ ಎಂದು ನಗರ ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.

ವಿಕ್ರಂ ಲ್ಯಾಂಡರ್ ಗೆ ಯಾವುದೇ ರೀತಿಯ ಗಂಭೀರ ಹಾನಿಯಾಗಿಲ್ಲ ಮತ್ತು ಅದು ಚಂದ್ರನ ನೆಲದಲ್ಲಿ ಮುರಿದು ಬಿದ್ದಿಲ್ಲ ಎಂದು ಇಸ್ರೋ ವಿಜ್ಞಾನಿಗಳು ಸೋಮವಾರ ಪ್ರಕಟಿಸಿದ ಬಳಿಕ ನಾಗ್ಪುರ ನಗರ ಪೊಲೀಸರು ಈ ಟ್ವೀಟ್ ಮಾಡಿದ್ದಾರೆ. ಮತ್ತು ಆ ಮೂಲಕ ವಿಕ್ರಂ ನೌಕೆಯ ಮರು ಕಾರ್ಯಾಚರಣೆಗೆ ತಮ್ಮದೇ ಶೈಲಿಯಲ್ಲಿ ಅವರು ಪ್ರಾರ್ಥಿಸಿಕೊಂಡಿದ್ದಾರೆ.


ನೂತನ ಮೋಟಾರು ತಿದ್ದುಪಡಿ ಕಾಯ್ದೆ ದೇಶಾದ್ಯಂತ ಜಾರಿಗೆ ಬಂದ ನಂತರ ಇದೀಗ ಎಲ್ಲೆಡೆ ದುಬಾರಿ ದಂಡದ್ದೇ ಸುದ್ದಿಯಾಗಿರುವುದರಿಂದ ವಿಕ್ರಂ ನೌಕೆಯೂ ಸಹ ತಾನು ಸಿಗ್ನಲ್ ಉಲ್ಲಂಘನೆ ಮಾಡಿರುವುದಕ್ಕೆ ದಂಡ ವಿಧಿಸಬಹುದು ಎಂದು ಹೆದರಿ ಚಂದ್ರನಂಗಳದಿಂದ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಅರ್ಥವನ್ನು ಕಲ್ಪಿಸಿ ಪುಣೆ ಪೊಲೀಸರು ಮಾಡಿರುವ ಈ ಲಘುಹಾಸ್ಯ ಮಿಶ್ರಿತ ಟ್ವೀಟ್ ಇದೀಗ ಟ್ವಿಟ್ಟರ್ ಲೋಕದಲ್ಲಿ ಬಾರೀ ಸದ್ದು ಮಾಡುತ್ತಿದೆ. ಈಗಾಗಲೇ ಈ ಟ್ವೀಟ್ ಹತ್ತು ಸಾವಿರ ಬಾರಿ ಮರುಟ್ವೀಟ್ ಆಗಿದೆ ಹಾಗೂ 35,000ಕ್ಕೂ ಮಿಕ್ಕಿ ಲೈಕ್ ಗಳನ್ನು ಪಡೆದುಕೊಂಡಿದೆ.

Advertisement

‘ನಾಗ್ಪುರ ಪೊಲೀಸ್!! ಹೌದು ನಿಜವಾಗಿಯೂ 133 ಕೋಟಿ ಭಾರತೀಯರ ಆಶಾವಾದ ವಿಕ್ರಂ ಮೇಲಿದೆ. ನಿಜವಾಗಿಯೂ ಇದೊಂದು ವಿನಾಯಿತಿ ನೀಡುವ ಪ್ರಕರಣವೇ, ಮತ್ತೆ ನಿಮ್ಮ ಟ್ವೀಟ್ ಅಂತೂ ಅಸಾಧಾರಣವಾದುದು’ ಎಂದು ಟ್ವಿಟ್ಟರಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ನಾಗ್ಪುರ ಸಂಚಾರಿ ಪೊಲೀಸರ ಈ ಭರವಸೆಯ ಬಳಿಕವಾದರೂ ಚಂದ್ರನ ಅಂಗಳದಲ್ಲಿ ಕ್ರ್ಯಾಶ್ ಲ್ಯಾಂಡ್ ಆಗಿರುವ ವಿಕ್ರಂ ನೌಕೆ ಇಸ್ರೋ ವಿಜ್ಞಾನಿಗಳ ಅವಿರತ ಪ್ರಯತ್ನಕ್ಕೆ ಸಂದಿಸುತ್ತದೆಯೇ ಎಂದು ಕಾದು ನೋಡಬೇಕಾಗಿದೆ!

Advertisement

Udayavani is now on Telegram. Click here to join our channel and stay updated with the latest news.

Next